Slider

ಕಂಪ್ಯೂಟರ್ ಎಂದರೇನು?

ಬಹುಶಃ ೨೦೨೨ರಲ್ಲಿ ಕಂಪ್ಯೂಟರ್ ಇರದ ಮನೆ ಕಡಿಮೆ ಎಂದರೆ ಅತಿಶಯೋಕ್ತಿ ಅಲ್ಲ. ನಿಮ್ಮ ಮನೆಯಲ್ಲೂ ಕಂಪ್ಯೂಟರ್ ಹಲವು ರೂಪಗಳಲ್ಲಿ ಇರಬಹುದು. ಈ ಕಂಪ್ಯೂಟರ್ ಎಂದರೆ ಏನು ನಿಮಗೆ ಗೊತ್ತಾ? ನಮ್ಮ ಸುತ್ತ ಮುತ್ತ ಎಲ್ಲೆಲ್ಲಿ ಕಂಪ್ಯೂಟರ್ ಬಳಕೆ ಆಗ್ತಾ ಇದೆ ಹೇಳಬಲ್ಲಿರಾ? ಅದರಿಂದ ಯಾವ ಅನುಕೂಲ? ಏನು ತೊಂದರೆ? ಈ ವಿಷಯಗಳ ಬಗ್ಗೆ ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ತಪ್ಪದೇ ಓದಿ.

{tocify} $title={ವಿಷಯ ಸೂಚಿ}

ಮೊದ ಮೊದಲು ಮನುಷ್ಯ ಎಲ್ಲ ಕೆಲಸಗಳನ್ನೂ ಕೈಯಾರೆ ಮಾಡುತ್ತಿದ್ದ. ಆದರೆ ಕಾಲ ಕ್ರಮೇಣ ಬಟ್ಟೆ ತೊಳೆಯುವದಕ್ಕೆ ವಾಷಿಂಗ್ ಮಶೀನ್, ಅರೆಯಲು / ಪುಡಿ ಮಾಡಲು ಮಿಕ್ಸರ್ ಹಾಗೂ ಗ್ರೈಂಡರ್, ತಣ್ಣಗಿರಿಸಲು ಫ್ರಿಡ್ಜ್, ಎತ್ತಲು ಕ್ರೇನ್ ಹೀಗೆ ಹಲವು ಹೊಸ ಯಂತ್ರಗಳ ಕಂಡು ಹಿಡಿದ ಅಲ್ವಾ?

ಇದೇ ರೀತಿ ಲೆಕ್ಕಾಚಾರ ಮಾಡಲು, ತರ್ಕ ಬಳಸಿ ಕೆಲಸ ಮಾಡಲು ಹಾಗೂ ಮಾಹಿತಿಗಳನ್ನು ಸಂರಕ್ಷಿಸಲು ಕಂಡು ಹಿಡಿದ ಯಂತ್ರವೇ ಕಂಪ್ಯೂಟರ್! 

ಈ ಯಂತ್ರಗಳ ಉಗಮಕ್ಕೆ ಸೋಮಾರಿತನ ಅಲ್ಲ, ಕಡಿಮೆ ಸಮಯದಲ್ಲಿ ಇವು ಹೆಚ್ಚು ಕೆಲ್ಸ ಒಂಚೂರೂ ತಪ್ಪಿಲ್ಲದೇ ಮಾಡಬಹುದು ಅನ್ನುವದೇ ಕಾರಣ.

ಕಂಪ್ಯೂಟರ್ ಕೇವಲ ಅಂಕೆಗಳನ್ನು ತೆಗೆದುಕೊಂಡು ರಕ್ಷಿಸುವ, ಸಂಸ್ಕರಿಸುವ ಹಾಗೂ ಪ್ರದರ್ಶಿಸುವ ಕೆಲಸ ಮಾಡುತ್ತದೆ. ಇಂದಿನ ಕಂಪ್ಯೂಟರ್ ಶಕ್ತಿಶಾಲಿ ಆಗಿದ್ದು ವಿಡಿಯೋ, ಆಡಿಯೋ, ೩ಡಿ ಗ್ರಾಫಿಕ್ಸ್ ದಂತಹ ಅಗಾಧ ಮಾಹಿತಿ ಪ್ರಾಸೆಸ್ ಮಾಡುವ ಶಕ್ತಿ ಹೊಂದಿದೆ.

ಹಾಗಿದ್ದರೆ ಬರಹ, ವಿಡಿಯೋ, ಆಡಿಯೋ ಇವೆಲ್ಲ ಬರಿ ಸಂಖ್ಯೆಗಳ ರೂಪದಲ್ಲಿ ಕಂಪ್ಯೂಟರ್ ಪ್ರಾಸೆಸ್ (ಸಂಸ್ಕರಣ) ಹೇಗೆ ಮಾಡುತ್ತೆ ಎಂಬ ಸಂದೇಹ ನಿಮಗೆ ಕಾಡಬಹುದು. ಮುಂಬರುವ ಲೇಖನಗಳಲ್ಲಿ ಅವೂ ಕೂಡಾ ಹೇಗೆ ಲೆಕ್ಕಾಚಾರಕ್ಕೆ ಸಂಬಂಧಿಸಿದ್ದು ಅನ್ನುವ ಬಗ್ಗೆ ತಿಳಿಸುತ್ತೇನೆ.

ಬನ್ನಿ ಮೊದಲು ಗಣಕ ಯಂತ್ರ ಎಂದರೇನು? ಎಲ್ಲೆಲ್ಲಿದೆ? ಏನು ಕೆಲಸ ಮಾಡುತ್ತೆ? ಅದರಿಂದ ಏನು ಲಾಭ? ನಷ್ಟ? ಅರಿಯೋಣ.

ಕಂಪ್ಯೂಟರ್ ಎಂಬ ಹೆಸರು ಹೇಗೆ ಬಂತು?

ಕಂಪ್ಯೂಟರ್ ಎಂಬ ಪದದ ಮೊದಲ ಬಳಕೆ ಆಗಿದ್ದು ಸುಮಾರು 1613ರ (೧೬೧೩ರ)  ಸುಮಾರಿಗೆ. ಆಗೆಲ್ಲ ಇರುತ್ತಿದ್ದುದು ಬರೀ ಮಾನವ ಕಂಪ್ಯೂಟರ್ ಗಳು! 

ಆಮೇಲೆ ಮೆಕಾನಿಕಲ್ ಕಂಪ್ಯೂಟರ್ ೧೯ನೇ ಶತಮಾನದಲ್ಲಿ (೧೮೦೧-೧೯೦೦) ಬಂತು.  ೧೯೪೦ರ ಸುಮಾರಿಗೆ ಇಲೆಕ್ಟ್ರಿಕ್ ಕಂಪ್ಯೂಟರ್ ಹಾಗೂ ಕ್ರಮೇಣ ಎಲೆಕ್ಟ್ರಾನಿಕ್ ಕಂಪ್ಯೂಟರ್ ಅವಿಷ್ಕಾರ ಆಯ್ತು.

ಲ್ಯಾಟಿನ್ ಭಾಷೆಯಲ್ಲಿ ಕಂಪ್ಯೂಟರೆ ಎಂದರೆ ಕೂಡಿಸುವದು ಅಥವಾ ಲೆಕ್ಕ ಮಾಡುವದು ಎಂಬರ್ಥ ಇದೆ. ಈ ಪದದ ಆಧಾರದ ಮೇಲೆ ಕಂಪ್ಯೂಟರ್ ಪದ ಬಳಕೆಗೆ ಬಂತು. ಮೊದಲು ಕಂಪ್ಯೂಟರ್ ಎಂದರೆ ಲೆಕ್ಕ ಮಾಡುವವರು, ಲೆಕ್ಕ ಮಾಡುವ ವ್ಯಕ್ತಿ ಎಂಬ ಅರ್ಥವಿತ್ತು.

ಆಮೇಲೆ ಕಂಡು ಹಿಡಿದ ಲೆಕ್ಕ ಮಾಡುವ ಯಂತ್ರಕ್ಕೆ ಕೂಡಾ ಕಂಪ್ಯೂಟರ್ ಎಂಬ ಹೆಸರು ಬಂತು.

ನಮ್ಮ ಕನ್ನಡದಲ್ಲಿ ಕಂಪ್ಯೂಟರ್ ಗೆ ಗಣಕ ಯಂತ್ರ ಎಂದು ಕರೆಯಬಹುದು. ಗಣಕ ಎಂದರೆ ಲೆಕ್ಕ ಮಾಡುವದು, ಎಣಿಸುವದು ಎಂಬರ್ಥ ಇದೆ. ಯಂತ್ರ ಎಂದರೆ ಮಶೀನು ಎಂದರ್ಥ.

ಕಂಪ್ಯೂಟರ್ ಎಂದರೇನು?

ಮಾಹಿತಿಗಳನ್ನು ರಕ್ಷಿಸಿ, ಪ್ರೋಗ್ರಾಮ್ ನಲ್ಲಿ ನೀಡಲಾದ ಸೂಚನೆಯಂತೆ ಮಾಹಿತಿಗಳನ್ನು ಸಂಸ್ಕರಿಸಿ ಅಂದರೆ ಪ್ರಾಸೆಸ್ ಮಾಡುವ ಯಂತ್ರಕ್ಕೆ ಕಂಪ್ಯೂಟರ್ ಅರ್ಥಾತ್ ಗಣಕ ಯಂತ್ರ ಎನ್ನುತ್ತಾರೆ.
ಮಾಹಿತಿ ಅಂಕೆಗಳು, ಅಕ್ಷರಗಳು, ವಿಡಿಯೋ, ಆಡಿಯೋ ಹೀಗೆ ಇನ್ಯಾವುದೇ ರೂಪದಲ್ಲೂ ಇರಬಹುದು.

ಕಂಪ್ಯೂಟರ್ ನಲ್ಲಿ ಮುಖ್ಯವಾಗಿ ಎರಡು ರೀತಿಯ ಭಾಗಗಳಿರುತ್ತವೆ. 

೧. ಒಂದು ಇಲೆಕ್ಟ್ರಾನಿಕ್ ಕಂಪೋನೆಂಟ್ ಗಳು. ಉದಾ: ಮಾನಿಟರ್, ಕೀಲಿಮಣೆ, ಮೌಸ್, ಮದರ್ ಬೋರ್ಡ್, ಸಿಪಿಯು, ಮೆಮರಿ - ಇವನ್ನು ಹಾರ್ಡವೇರ್ ಅನ್ನುತ್ತಾರೆ.

೨. ಇನ್ನೊಂದು ಅದರ ಪ್ರಾಸೆಸರ್ ಗಳಲ್ಲಿ ರನ್ ಆಗುವ ಪ್ರೋಗ್ರಾಮಿಂಗ್ ಕೋಡ್ ಗಳು. ಉದಾ: ಆಪರೇಟಿಂಗ್ ಸಿಸ್ಟೆಮ್, ಅಪ್ಲಿಕೇಶನ್ ಗಳು, ವರ್ಡ್ ಪ್ರಾಸೆಸರ್, ವಿಡಿಯೋ ಎಡಿಟರ್ - ಇವನ್ನು ಸಾಫ್ಟವೇರ್ ಅನ್ನುತ್ತಾರೆ.

ಈ ಹಾರ್ಡವೇರ್ ಹಾಗೂ ಸಾಫ್ಟವೇರ್ ಸಂಗಮವೇ ಕಂಪ್ಯೂಟರ್. ಇವೆರಡೂ ಬೇಕು ಕಂಪ್ಯೂಟರ್ ಸರಿಯಾಗಿ ಕೆಲಸ ಮಾಡಲು. ಸಾಫ್ಟವೇರ್ ಇಲ್ಲದಿದ್ದರೆ ಹಾರ್ಡವೇರ್ ಒಂದರಿಂದ ಯಾವುದೇ ಕೆಲಸ ಆಗದು. ಏನು ಕೆಲ್ಸ ಮಾಡಬೇಕು ಎಂಬ ಅಪ್ಪಣೆ ಸಾಫ್ಟವೇರ್ ಕೋಡ್ ನಿಂದಲೇ ಬರಬೇಕು.
ಅದೇ ರೀತಿ ಹಾರ್ಡವೇರ್ ಇಲ್ಲದಿದ್ದರೆ ಪ್ರಾಸೆಸರ್ ಇಲ್ಲದಿದ್ದರೆ ಸಾಫ್ಟವೇರ್ ಕೋಡ್ ಎಕ್ಸಿಕ್ಯೂಟ್ ಅಂದರೆ ರನ್ ಆಗುವದಿಲ್ಲ.

ಸಾಫ್ಟವೇರ್ ಹಾಗೂ ಹಾರ್ಡವೇರ್ ಗಳ ಬಗ್ಗೆ ವಿವರವಾಗಿ ಇನ್ನೊಂದು ಲೇಖನದಲ್ಲಿ ಬರೀತೇನೆ ಆಯ್ತಾ?

ಕಂಪ್ಯೂಟರ್ ನಮ್ಮ ಸುತ್ತಮುತ್ತ ಎಲ್ಲಿದೆ?


ಬನ್ನಿ ನಮ್ಮ ಸುತ್ತಮುತ್ತ ಕಂಪ್ಯೂಟರ್ ಎಲ್ಲಿದೆ ಅನ್ನುವದನ್ನು ನೋಡೋಣ.

ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಅನ್ನು ನಿಮ್ಮಲ್ಲಿ ಹೆಚ್ಚಿನವರು ನೋಡಿರುತ್ತೀರಿ. ನಿಜ ಅವೆಲ್ಲ ಕಂಪ್ಯೂಟರ್ ಗಳು. ಆದರೆ ಅವಷ್ಟೇ ಅಲ್ಲ ನಿಮ್ಮ ಕೈಯಲ್ಲಿರುವ ಸ್ಮಾರ್ಟ್ ಫೋನು, ಸ್ಮಾರ್ಟ್ ವಾಚ್ ಹಾಗೂ ಟ್ಯಾಬ್ ಗಳು ಸಹ ಕಂಪ್ಯೂಟರ್ ಆಗಿದೆ.

ಇನ್ನು ಸರ್ವರ್ ಗಳು, ಮೇನ್ ಫ್ರೇಮ್ ಗಳು, ಡಾಟಾ ಸೆಂಟರ್ ಗಳು ಸಹ ಕಂಪ್ಯೂಟರ್ ಆಗಿದ್ದು ನೀವು ದೊಡ್ಡ ಕಂಪನಿಯ ಒಳಗೆ ಹೋದ ಹೊರತು ಅವನ್ನು ನೋಡಿರಲ್ಲ. ನೀವು ಕಂಪ್ಯೂಟರ್ ಅಲ್ಲಿ ಗೂಗಲ್ ಸರ್ಚ್ ಮಾಡಿದಾಗ  ಕಂಪ್ಯೂಟರ್ ಗಳ ನೆಟವರ್ಕ್ ನಿಮ್ಮ ಸರ್ಚ್ ಉತ್ತರವನ್ನು ಕೊಡುತ್ತದೆ. ಅವೆಲ್ಲ ಸರ್ವರ್ ಹಾಗೂ ಡಾಟಾ ಸೆಂಟರ್ ಕಂಪ್ಯೂಟರ್ ಗಳ ಮಹಿಮೆ.

ಇನ್ನು ನಿಮ್ಮ ಮನೆಯಲ್ಲಿ ಸ್ಮಾರ್ಟ ಟಿವಿ ಇದ್ದರೆ ಅದರಲ್ಲೂ ಕಂಪ್ಯೂಟರ್ ಇದೆ. ಸ್ಮಾರ್ಟ್ ಪ್ರಿಡ್ಜ್, ಡಿಜಿಟಲ್ ಕ್ಯಾಮೆರಾ, ಡಿಶ್ ವಾಶರ್, ಸ್ಮಾರ್ಟ್ ವಾಶಿಂಗ್ ಮಶೀನ್ ಎಲ್ಲ ಕಂಪ್ಯೂಟರ್ ಹೊಂದಿದ್ದು ಅದರ ಸಹಾಯದಿಂದ ಕೆಲಸ ಮಾಡುತ್ತವೆ.

ನಿಮ್ಮ ಕ್ಯಾಲ್ಕುಲೇಟರ್ ಅಲ್ಲಿ ಪ್ರೋಗ್ರಾಮಿಂಗ್ ಸೌಲಭ್ಯ ಇದ್ದರೆ ಅದೂ ಕೂಡಾ ಕಂಪ್ಯೂಟರ್ ಎನ್ನಿಸಿಕೊಳ್ಳುತ್ತದೆ.

ಸುಮಾರು ೬೦ ವರ್ಷಗಳ ಹಿಂದೆ ಇಡೀ ಕೋಣೆ (ರೂಂ) ಆವರಿಸಿರುತ್ತಿದ್ದ ಕಂಪ್ಯೂಟರ್ ಇಂದು ನಮ್ಮ ಅಂಗೈಯಗಲ ಗಾತ್ರದಷ್ಟು ಕಿರಿದಾಗಿದೆ! ಎಷ್ಟು ವಿಸ್ಮಯ ಅಲ್ವಾ?

ಈ ಕಂಪ್ಯೂಟರ್ ನ ವಿವಿಧ ರೂಪಗಳ ಬಗ್ಗೆ ವಿವರವಾಗಿ ಪ್ರತ್ಯೇಕವಾಗಿ ಆಮೇಲೆ ಹೇಳ್ತಿನಿ ಸರಿನಾ?

ಕಂಪ್ಯೂಟರ್ ಅನುಕೂಲ ಏನು?

ಕಂಪ್ಯೂಟರ್ ನಿಂದ ಮನುಷ್ಯರಿಗೆ ತುಂಬಾ ಅನುಕೂಲ ಇದೆ. ಬಹುಶಃ ಅದು ಇಲ್ಲದಿದ್ದರೆ ಈಗ ನಾವು ಸುಲಭವಾಗಿ ಮಾಡುತ್ತಿರುವ ಹಲವು ಕೆಲಸ ಸಾಧ್ಯವೇ ಇರಲಿಲ್ಲ. ಯಾವ ಅನುಕೂಲಗಳಿವೆ? ಬನ್ನಿ ನೋಡೋಣ.

ಅನುಕೂಲ ೧. ಅತ್ಯಂತ ವೇಗವಾಗಿ ಕೆಲಸ ಮಾಡುತ್ತದೆ

ಈಗಿನ ಆಧುನಿಕ ಇಲೆಕ್ಟ್ರಾನಿಕ್ ಕಂಪ್ಯೂಟರ್ ಬಹಳ ಫಾಸ್ಟ್ ಆಗಿ ಕೆಲಸ ಮಾಡುತ್ತದೆ. ಪ್ರತಿ ಕ್ಷಣ ಲಕ್ಷಾಂತರ ಆಜ್ಞೆಗಳನ್ನು, ಲೆಕ್ಕಾಚಾರ ಮಾಡಬಲ್ಲುದು. 

ಈ ಕಾರಣದಿಂದ ಹೆಚ್ಚು ಹೆಚ್ಚು ಮಾಹಿತಿಗಳನ್ನು ಸಂಸ್ಕರಿಸಬಹುದು. ಬಾಹ್ಯಾಕಾಶದ ವಿಶ್ಲೇಷಣೆ, ಹವಾಮಾನ ವಿಶ್ಲೇಷಣೆ, ೪ಕೆ / ೮ಕೆ ಯಂತಹ ಉನ್ನತ ಗುಣಮಟ್ಟದ ವಿಡಿಯೋ ಸಂಸ್ಕರಣೆ ಹೀಗೆ ಹಲವು ಕೆಲಸಗಳಿಗೂ ಬಳಸ ಬಹುದು.

ಇಂದು ನಮ್ಮ ಕೈಯಲ್ಲಿರುವ ಸ್ಮಾರ್ಟ್ ಫೋನಲ್ಲೂ ಸಹ ಗಣನೀಯ ಪ್ರಮಾಣದ ಮಾಹಿತಿ ಸಂಸ್ಕರಿಸುವ ಸಾಮರ್ಥ್ಯ ಇದೆ. ಕಂಪ್ಯೂಟರ್ ಶಕ್ತಿಶಾಲಿ ಆದ ಹಾಗೆ ಅಪ್ಲಿಕೇಶನ್ ಗಳ / ಮಾಹಿತಿಯ ಗಾತ್ರ ಹಾಗೂ ಬೇಡಿಕೆ ಕೂಡಾ ಹಾಗೆಯೇ ಹೆಚ್ಚುತ್ತಾ ಇದೆ.

ಅನುಕೂಲ ೨. ಸಂಪರ್ಕ

ಗಣಕ ಯಂತ್ರ ಇತರ ಸಂಪರ್ಕ ವಿಧಾನಗಳಾದ ಆಪ್ಟಿಕಲ್ ಫೈಬರ್, ೫ಜಿ, ೪ಜಿ, ೩ಜಿ ಗಳನ್ನು ಬಳಸಿ ಮಾಹಿತಿಗಳನ್ನು ಬೇರೆ ಕಂಪ್ಯೂಟರ್ ಗಳಿಗೆ ಕಳುಹಿಸ ಬಲ್ಲುದು. ಹಾಗೆಯೆ ಸಂವಹನ ಕೂಡಾ ಮಾಡ ಬಲ್ಲುದು.

ಇದೇ ಕಾರಣದಿಂದ ನಾವಿಂದು ಝೂಮ್, ಸ್ಕೈಪ್, ವಾಟ್ಸ್ ಅಪ್ ವಿಡಿಯೋ ಕಾನ್ಪೆರೆನ್ಸ್ ಮಾಡಲು ಸಾಧ್ಯವಾಗಿರುವದು. ಯೂಟ್ಯೂಬ್, ನೆಟ್ ಫ್ಲಿಕ್ಸ್ ಮೂಲಕ ವಿಡಿಯೋ ನೋಡಲು ಸಾಧ್ಯವಾಗಿರುವದು ಕಂಪ್ಯೂಟರ್ ಕೃಪೆ.

ಅನುಕೂಲ ೩. ನಿಖರತೆ

ಕಂಪ್ಯೂಟರ್ ಕೊಟ್ಟ ಆಜ್ಞೆಯನ್ನು ಚಾಚೂ ತಪ್ಪದೇ ಹಾಗೇ ಪಾಲಿಸುತ್ತೆ. ಅದಕ್ಕೆ ಮರೆವು ಇಲ್ಲ. (ತಾಂತ್ರಿಕ ಸಮಸ್ಯೆ ಹೊರತು ಪಡಿಸಿ)  ನಾವು ಮನುಷ್ಯರು ನೂರು ಸಂಖ್ಯೆಗಳನ್ನು ಕೂಡಿಸಿದರೆ ಸಮಯ ಜಾಸ್ತಿ ಬೇಕು ಹಾಗೂ ತಪ್ಪಾಗುವ ಸಾಧ್ಯತೆ ಇದೆ. 

ಕಂಪ್ಯೂಟರ್ ಸಾಫ್ಟವೇರ್ ಅಲ್ಲಿ ದೋಷ ಇರದಿದ್ದರೆ ನಿಖರವಾಗಿ ಲೆಕ್ಕ ಮಾಡಬಲ್ಲುದು. ನಿಖರತೆಯ ಕಾರಣದಿಂದ ಹಲವು ಕೆಲಸ ಗಳಿಗೆ ಕಂಪ್ಯೂಟರ್ ಆಪ್ತ ಬಾಂಧವ ಎನಿಸಿಕೊಂಡಿದೆ.

ಅನುಕೂಲ ೪. ಸಮಯ ಉಳಿತಾಯ

ಅತಿ ವೇಗದ ಕಾರಣ ಅದೆಂತ ಕೆಲ್ಸ ಇರಲಿ ಪಟ ಪಟನೆ ಮಾಡಿ ಕಂಪ್ಯೂಟರ್ ಕಡಿಮೆ ಟೈಮ್ ಅಲ್ಲಿ ಮಾಡಿ ಸಮಯ ಉಳಿತಾಯ ಮಾಡುತ್ತದೆ.

ಇಂದು ಚುನಾವಣೆಗಳಲ್ಲಿ ಲಕ್ಷಾಂತರ ಓಟುಗಳನ್ನು ಎಣಿಸಿ ದೇಶಾದ್ಯಂತ ವಿವಿಧ ಸೆಂಟರ್ ಗಳಿಂದ ಪಡೆದು ಒಂದೇ ದಿನದಲ್ಲಿ ಪ್ರಕಟ ಮಾಡಲು ಸಾಧ್ಯವಾಗಿರುವದೇ ಕಂಪ್ಯೂಟರ್ ಮೂಲಕ.

ಹೀಗೆ ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡಿ ಕಂಪ್ಯೂಟರ್ ಸಮಯ ಉಳಿತಾಯ ಮಾಡುತ್ತದೆ.

ಅನುಕೂಲ ೫. ಕಡಿಮೆ ತಪ್ಪುಗಳು

ಕಂಪ್ಯೂಟರ್ ನ ಇಲೆಕ್ಟ್ರಾನಿಕ್ ಸರ್ಕ್ಯೂಟ್ ಗಳು, ಪ್ರಾಸೆಸರ್, ಮೆಮರಿ ಅತ್ಯಂತ ನಿಖರವಾಗಿ ಕೆಲಸ ಮಾಡುವದರಿಂದ ಫಲಿತಾಂಶದಲ್ಲಿ ತಪ್ಪುಗಳ ಸಂಭವನೀಯತೆ (ಪ್ರೊಬೆಬಾಲಿಟಿ) ತುಂಬಾ ಕಡಿಮೆ.

ಕೆಲವೊಮ್ಮೆ ಸಾಫ್ಟವೇರ್ ದೋಷ ಅಥವಾ ನೀಡಿದ ಮಾಹಿತಿ ಇನ್ ಪುಟ್ ದೋಷದಿಂದ ತಪ್ಪುಗಳು ಆಗುವ ಸಾಧ್ಯತೆ ಇದೆ. ಆದರೆ ಆ ದೋಷಕ್ಕೆ ಕಾರಣ ಮನುಷ್ಯನೇ ಹೊರತು ಕಂಪ್ಯೂಟರ್ ಅಲ್ಲ!

ಅನುಕೂಲ ೬. ಮಾಹಿತಿ ಸಂಗ್ರಹ, ಹುಡುಕಾಟ, ವಿಶ್ಲೇಷಣೆ (ಎನಾಲಿಸಿಸ್) ಮತ್ತು ರಕ್ಷಣೆ

ಅಗಾಧ ಮಾಹಿತಿ ಸಂಗ್ರಹ, ಅವುಗಳಲ್ಲಿ ಹುಡುಕಾಟ, ವಿಶ್ಲೇಷಣೆ ಕಂಪ್ಯೂಟರ್ ಗೆ ಬಾಳೆಹಣ್ಣು ಸುಲಿದಷ್ಟೇ ಸುಲಭ. ಈ ಕಾರಣದಿಂದ ನಮ್ಮ ಸ್ಮಾರ್ಟ್ ಫೋನಲ್ಲೂ ಸಹ ಸಾವಿರಾರು ಫೋಟೋಗಳು, ವಿಡಿಯೋ ರಕ್ಷಣೆ ಸಾಧ್ಯವಾಗಿದೆ.

ಗೂಗಲ್ ನಂತಹ ಸರ್ಚ್ ದೈತ್ಯ  ಹಲವು ಬಿಲಿಯನ್ ಗೂ ಹೆಚ್ಚು ಅಂತರ್ಜಾಲ ಪುಟದಿಂದ ಲೀಲಾಜಾಲವಾಗಿ ಮಾಹಿತಿ ಹುಡುಕಿ ಕ್ಷಣಾರ್ಧದಲ್ಲಿ ನಿಮ್ಮ ಮುಂದೆ ಇಡಬಲ್ಲುದು!

ಅನುಕೂಲ ೭. ಪರಿಸರ ರಕ್ಷಣೆ

ಕಂಪ್ಯೂಟರ್ ಒಂದು ಇಲೆಕ್ಟ್ರಾನಿಕ್ ಯಂತ್ರ ಆಗಿರುವದರಿಂದ ಸಾಕಷ್ಟು ಕಸ ಅದು ಹಳತಾಗಿ ಹಾಳಾದಾಗ ಆಗುತ್ತೆ. ಹಾಗಿದ್ದರೆ ಹೇಗೆ ಪರಿಸರ ಸಂರಕ್ಷಣೆ ಆಗುತ್ತೆ ಎಂದು ಯೋಚನೆ ಮಾಡ್ತಾ ಇದೀರಾ?

ಅಗಾಧ ಮಾಹಿತಿ ಅದು ಅಕ್ಷರ ಇರಬಹುದು, ವಿಡಿಯೋ ಇರಬಹುದು, ಆಡಿಯೋ ಇರಬಹುದು ಎಲ್ಲ ಕಂಪ್ಯೂಟರ್ ರಕ್ಷಣೆ ಮಾಡಿ ಬೇಕಾದಾಗ ನೀಡಬಲ್ಲುದು.

ಇಂದು ಕೋಟ್ಯಂತರ ಪುಸ್ತಕಗಳು, ಹಾಡುಗಳು, ಲಕ್ಷಾಂತರ ಸಿನಿಮಾ ಹಾಗೂ ಕೋಟ್ಯಂತರ ವಿಡಿಯೋಗಳು ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್ ಅಲ್ಲಿ ಲಭ್ಯವಿದೆ. ಬೇಕಾದುದ್ದನ್ನು ಡೌನ್ ಲೋಡ್ ಮಾಡಿ ಓದಬಹುದು, ವೀಕ್ಷಣೆ ಮಾಡಬಹುದು. ಸರ್ಚ್ ಮಾಡಿ ಬೇಕಾದ ಮಾಹಿತಿ ಪಡೆಯಬಹುದು.

ಕಡಿಮೆಯಾದ ಕಾಗದ, ಕ್ಯಾಸೆಟ್ ಬಳಕೆ

ಪರಿಣಾಮ? ಇಂದು ಪೇಪರ್ ಮುದ್ರಣ ಅನಿವಾರ್ಯತೆ ಕಡಿಮೆ ಆಗಿದೆ. ಕಾಗದದ ಬಳಕೆ ಕಡಿಮೆ ಆಗಿ ಮರಗಳ ರಕ್ಷಣೆ ಆಗಿದೆ. ಅದೇ ರೀತಿ ಆಡಿಯೋ ಕ್ಯಾಸೆಟ್, ವಿಡಿಯೋ ಕ್ಯಾಸೆಟ್ ಗ್ರಾಹಕರ ಬಳಕೆ ನಿಂತು ಅವುಗಳ ಉತ್ಪಾದನೆ ಹಾಗೂ ಬಳಸಿ ಬಿಸಾಕಿದ ಕ್ಯಾಸೆಟ್, ಸಿಡಿ ಕಸಗಳ ಪ್ರಮಾಣ ಕಡಿಮೆ ಆಗಿದೆ.

ಕಡಿಮೆಯಾದ ನೋಟಿನ ಬಳಕೆ

ಡಿಜಿಟಲ್ ಕರೆನ್ಸಿ ಕೂಡಾ ನೋಟಿನ ಅವಶ್ಯಕತೆ ಬಳಕೆ ಕಡಿಮೆ ಮಾಡಿದೆ.

ಕಾಗದ ಕಡತ ಕಡಿಮೆ ಬಳಕೆ, ನೋಟಿನ ಮುದ್ರಣ ಕಡಿತ ಇವೆಲ್ಲಾ ಪರಿಸರಕ್ಕೆ ಎಷ್ಟು ಒಳ್ಳೆಯದು ಅಲ್ವಾ?

ಕಡಿಮೆಯಾದ ಓಡಾಟ

ಅಷ್ಟೇ ಅಲ್ಲ ಎಷ್ಟೋ ಬಾರಿ ವಿಡಿಯೋ ಕಾಲ್ ಗಳಿಂದ ಓಡಾಟ ಮಾಡುವ ಅಗತ್ಯ ಕೂಡಾ ಕಡಿಮೆ ಆಗಿದೆ. ವಾಹನ ಓಡಾಟ, ಇಂಧನ ಬಳಕೆ ಕೂಡಾ ಕಡಿಮೆ ಆಗಿ ನಮ್ಮ ಪರಿಸರಕ್ಕೆ ಒಳಿತು.

ಕಡಿಮೆಯಾದ ವಸ್ತುಗಳ ವೇಸ್ಟೇಜ್

ಕ್ಲೌಡ್ ಕಂಪ್ಯೂಟಿಂಗ್ ಅಪ್ಲಿಕೇಶನ್ ಗಳಿ ತತ್ಕಾಲಕ್ಕೆ ಎಷ್ಟು ಬೇಕೋ ಅಷ್ಟೇ ಮೆಮರಿ, ಸಿಪಿಯು ಬಳಸಿ ಒಪ್ಟಿಮೈಜೇಶನ್ ಮಾಡುತ್ತದೆ. 

ಈ-ಕಾಮರ್ಸ್ ಗಳು ಕಂಪ್ಯೂಟರ್ ಬಳಸಿ ಗ್ರಾಹಕರಿಗೆ ಬೇಕಾಗುವ ಸಾಮಗ್ರಿಗಳ ಅಂದಾಜು ಹಾಕಿ ಮಾರುಕಟ್ಟೆಯಲ್ಲಿ ಅನಗತ್ಯವಾಗಿ ವಸ್ತುಗಳು ಕೊಳೆತು ಹಾಳಾಗುವದನ್ನು ಕಡಿಮೆ ಮಾಡುತ್ತದೆ.

ಕಂಪ್ಯೂಟರ್ ಗ್ರಾಫಿಕ್ಸ್ ಕೂಡಾ ಪರಿಸರ ಉತ್ತಮ. ಹೇಗೆ ಅನ್ನುವದನ್ನು ಮುಂದೆ ಹೇಳುತ್ತೇನೆ.

ಬರೆಯುತ್ತಾ ಹೋದರೆ ಇನ್ನೂ ಇದೆ.  ಅಂತೂ ಕಂಪ್ಯೂಟರ್ ಪರಿಸರ ಸ್ನೇಹಿ ಹೇಗೆ ಗೊತ್ತಾಯ್ತಲ್ಲ?

ಅನುಕೂಲ ೮. ಶಿಕ್ಷಣ

ಇಂದು ಜಗತ್ತಿನ ಹೆಚ್ಚಿನ ಮುಕ್ತ ಮಾಹಿತಿ ಕಂಪ್ಯೂಟರ್ ಅಲ್ಲಿ ಲಭ್ಯವಿದೆ. ಯಾರೂ ಬೇಕಾದರೂ ಓದಿ ಕಲಿಯಬಹುದು. ನೋಡಿ ಅರಿಯಬಹುದು. ವಿಕಿಪಿಡಿಯಾ, ಬ್ರಿಟಾನಿಕಾ ವಿಶ್ವಕೋಶ, ಯೂಟ್ಯೂಬ್, ಯುಡೆಮಿ ಹೀಗೆ ಹಲವು ಉಚಿತ ಹಾಗೂ ಹಣ ನೀಡಿ ಪಡೆಯುವ ಶಿಕ್ಷಣ ಸೌಲಭ್ಯಗಳಿವೆ.

ಒಬ್ಬ ಮನಸ್ಸು ಮಾಡಿದರೆ ಪ್ರಪಂಚದ ಯಾವ ಮೂಲೆಗೆ ಬೇಕಾದರೂ ಸ್ಕೈಪ್, ಝೂಮ್ ಕಾಲ್ ಮೂಲಕ ಇನ್ನೊಬ್ಬರಿಗೆ ಕಲಿಸಬಹುದು.

ಅನುಕೂಲ ೯. ಹಣ ಸಂಪಾದನೆ

ಕಂಪ್ಯೂಟರ್ ಹಲವು ಮಾರ್ಗಗಳ ಮೂಲಕ ಹಣ ಗಳಿಸುವ ಅವಕಾಶ ನೀಡುತ್ತದೆ. ವ್ಲಾಗ್ಗಿಂಗ್, ಬ್ಲಾಗ್ಗಿಂಗ್, ಕಲಿಸುವದು, ಹಾಡುವದು, ನಟಿಸುವದು, ಕೋಡಿಂಗ್ ಹೀಗೆ ಹಲವು ವಿಧಾನದ ಮೂಲಕ ಹಣ ಗಳಿಸಲು ಅನುಕೂಲ ಮಾಡುತ್ತದೆ.

ಅನುಕೂಲ ೧೦. ಮಾನಿಟರಿಂಗ್ / ಕಂಟ್ರೋಲ್

ಬಾಹ್ಯಾಕ್ಷಾಶದಲ್ಲಿರುವ ಸೆಟಲೈಟ್ ಮಾನಿಟರ್ ಮಾಡಬೇಕೆ? ಕ್ಷುದ್ರ ಗ್ರಹಳು (ಅಸ್ಟೆರೊಯಿಡ್) ಭೂಮಿಯ ವಾತಾವರಣ ಪ್ರವೇಶ ಮಾಡುತ್ತಾ ಎಂಬ ಮುನ್ಸೂಚನೆ, ಹವಾಮಾನದ ಟ್ರ್ಯಾಕಿಂಗ್, ಹಡಗು / ವಿಮಾನ / ಟ್ರಕ್ / ಕಾರಿನ ಟ್ರ್ಯಾಕಿಂಗ್, ಬೇರೆ ಗ್ರಹಗಳ ಬಗ್ಗೆ ಸಂಶೋಧನೆ.

ಅಣುವಿದ್ಯುತ್ ಸ್ಥಾವರ ಮಾನಿಟರಿಂಗ್ - ಕಂಟ್ರೋಲ್, ವಿಮಾನ ಕಂಟ್ರೋಲ್, ಕಾರನ್ನು ಆಟೋಮ್ಯಾಟಿಕ್ ಚಲಾಯಿಸುವದು, ವಾಹನಗಳ ಬಿಡಿ ಭಾಗಗಳ ಕಂಟ್ರೋಲ್, ಹೋಂ ಆಟೋಮೇಶನ್.

ಹೀಗೆ ಹಲವು ರಂಗಗಳಲ್ಲಿ ಕಂಪ್ಯೂಟರ್ ಕಂಟ್ರೋಲ್ ಹಾಗೂ ಮಾನಿಟರಿಂಗ್ ಸಲುವಾಗಿ ಕಂಪ್ಯೂಟರ್ ಬಳಕೆ ಆಗುತ್ತಿದೆ.

ಅನುಕೂಲ ೧೧. ಮನೋರಂಜನೆ

ಬಹುಶಃ ನೀವು ಕಂಪ್ಯೂಟರ್ ಅನ್ನು ವಿಡಿಯೋ ನೋಡಲು, ಹಾಡು ಕೇಳಲು, ಸೋಶಿಯಲ್ ಮಿಡಿಯಾ ಬಳಸಿದಷ್ಟು ಇನ್ನೇನಕ್ಕೂ ಬಳಸುವದು ಕಡಿಮೆ. ಯೂಟ್ಯೂಬ್, ಫೇಸ್ ಬುಕ್, ಇನ್ಸ್ಟಾಗ್ರಾಂ, ಟ್ವಿಟ್ಟರ್, ಪಿಂಟ್ರೆಸ್ಟ್ ನಿಮ್ಮ ಮನೋರಂಜನೆಗೆ ಮಿತಿ ಇಲ್ಲ.

ಕೋಟ್ಯಂತರ ಪುಸ್ತಕ, ಸಿನಿಮಾ, ಧಾರಾವಾಹಿ ಎಲ್ಲವನ್ನೂ ಮನೆಯಲ್ಲೇ ಕುಳಿತು ಓದಬಹುದು / ನೋಡಬಹುದು.

ಅನುಕೂಲ ೧೨. ಮನೆಯಲ್ಲೇ ಅಂಗಡಿ

ವಿಶೇಷತವಾಗಿ ಈ ಕಾಮರ್ಸ್ ಮಾಡಿರುವ ಕ್ರಾಂತಿಗೆ ಸಮ ಇಲ್ಲ. ಬೇಕಾದ ವಸ್ತುಗಳು ಮನೆಗೇ ತರಿಸುವ ಈ ಸೌಲಭ್ಯ ಕಂಪ್ಯೂಟರ್ ನ ಕೊಡುಗೆ. 

ಕೇವಲ ಗ್ರಾಹಕರಷ್ಟೇ ಅಲ್ಲ ತಯಾರಕರು, ಮಾರಾಟಗಾರರು, ಕೂರಿಯರ್ ಹೀಗೆ ಎಲ್ಲವೂ ಕಂಪ್ಯೂಟರ್ ನೆಟವರ್ಕ್ ಸಹಾಯದಿಂದ ನಿಖರವಾಗಿ ತಲುಪಿಸುತ್ತವೆ.

ಆರ್ಟಿಫಿಶಿಯಲ್ ಹಾಗೂ ಮಶೀನ್ ಲರ್ನಿಂಗ್ ಯಾವ ವಸ್ತುವಿಗೆ ಯಾವ ಸಮಯದಲ್ಲಿ ಯಾವ ಊರಲ್ಲಿ ಬೇಡಿಕೆ ಎಷ್ಟು ಎಂಬ ಮುನ್ಸೂಚನೆ ಕೂಡಾ ನೀಡುತ್ತದೆ. ಈ ಡಾಟಾ ಬಳಸಿ ಮೊದಲೇ ಎಷ್ಟು ವಸ್ತು ತಯಾರಿಸಬೇಕು, ಎಲ್ಲಿ ಎಷ್ಟು ಸ್ಟಾಕ್ ಇಡಬೇಕು ಎಂಬ ಅಂದಾಜು ಹಾಕ ಬಹುದು. ಇದರಿಂದ ವಸ್ತು ಹಾಳಾಗುವದೂ ಕೂಡಾ ತಪ್ಪುತ್ತದೆ.

ಅನುಕೂಲ ೧೩. ಆಟೋಮೇಶನ್

ಹಲವು ಕೆಲಸಗಳನ್ನು ಕಂಪ್ಯೂಟರ್ ಆಟೊಮೇಟಿಕ್ ಆಗಿ ಮಾಡ ಬಲ್ಲುದು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ದಿಶಕ್ತಿ), ಮಶೀನ್ ಲರ್ನಿಂಗ್ (ಯಂತ್ರದ ಕಲಿಕೆ) ಇವೆಲ್ಲ ತಂತ್ರಜ್ಞಾನಗಳು ಅದೆಷ್ಟೋ ಕೆಲಸವನ್ನು ತಾನೇ ಕಲಿತು ಮಾಡಬಲ್ಲುದು. ಇಂದು ತಾನೇ ಅರಿತು ಕೋಡಿಂಗ್ ಮಾಡಬಲ್ಲ ಕಂಪ್ಯೂಟರ್ ಅನ್ವೇಷಣೆ ನಡೆಯುತ್ತಿದೆ.

ಕಡಿಮೆ ಜನರು, ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲ್ಸ ಮುಗಿಸಬಹುದು.ಇದು ಖರ್ಚನ್ನು ಕಡಿಮೆ ಮಾಡುವದಕ್ಕೆ ಸಹಾಯ ಮಾಡುತ್ತದೆ.

ಅನುಕೂಲ ೧೪. ಗ್ರಾಫಿಕ್ಸ್ ಮತ್ತು ವಿಡಿಯೋ ಎಡಿಟಿಂಗ್

 ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ಹಿನ್ನೆಲೆ, ದೊಡ್ಡ ಸ್ಪೋಟ, ಬಿಲ್ಡಿಂಗ್ ನಾಶ, ಪ್ರಾಣಿಗಳ ಬಳಕೆ ಎಲ್ಲಾ ಕಂಪ್ಯೂಟರ್ ಗ್ರಾಫಿಕ್ಸ್ ಬಳಸುವದರಿಂದ ಅದೆಷ್ಟು ಪರಿಸರಕ್ಕೆ ಸಹಾಯಕ ಅಲ್ವಾ? 

ಊಹೆ ಮಾಡಿ ಸಿನಿಮಾಗಳಿಗೆ ಎಲ್ಲ ಕಡೆ ನಿಜವಾದ ಸೆಟ್ ಹಾಕಿದ್ದರೆ, ನಿಜಕ್ಕೂ ಬಾಂಬ್ ಸ್ಪೋಟ ಎಲ್ಲ ಕಡೆ ಮಾಡಿದ್ದರೆ ಆಗುತ್ತಿದ್ದ ಪರಿಸರ ಹಾನಿ ಅಷ್ಟಿಷ್ಟಲ್ಲ.

ಎಲ್ಲ ಕೇವಲ ಕಂಪ್ಯೂಟರ್ ನ ವರ್ಚುವಲ್ (ಕಾಲ್ಪನಿಕ) ಪ್ರಪಂಚದಲ್ಲಿ ನಡೆಯುವದರಿಂದ ಖರ್ಚೂ ಕಡಿಮೆ, ಯಾವ ವಸ್ತು ಹಾಳಾಗದು.

ಅನುಕೂಲ ೧೫.  ದಾರಿ ತೋರಿಸುವದು

ಬಹುಶಃ ನೀವು ಮ್ಯಾಪ್ ಆಪ್ ಬಳಸಿರಬಹುದು ಅಥವಾ ಅದನ್ನು ಬೇರೆಯವರು ಬಳಸಿರುವದನ್ನಾದರೂ ನೋಡಿರಬಹುದು. ಹೋಗ ಬೇಕಾದ ಜಾಗದ ವಿಳಾಸ ಹಾಕಿ ಲೊಕೇಶನ್ ಆರಿಸಿ ಕೊಂಡರೆ ಆಯ್ತು. 

ಹೋಗುವ ದಾರಿ, ಅದರಲ್ಲಿನ ಅಡೆ ತಡೆಗಳು, ವಾಹನ ಸಂದಣಿ (ಟ್ರಾಫಿಕ್) ಎಲ್ಲ ಗಮನದಲ್ಲಿಟ್ಟು ಎಡ-ಬಲ ಎಂದು ಮಾರ್ಗ ತೋರಿಸಿ ನಿಮಗೆ ಮಾರ್ಗ ದರ್ಶನ ಮಾಡುತ್ತೆ. ಅಲ್ವಾ? 

ಇದೂ ಕೂಡಾ ನಿಮ್ಮ ಸ್ಮಾರ್ಟ್ ಫೋನ್ ಕಂಪ್ಯೂಟರ್ ಜೊತೆ ಸೆಟಲೈಟ್ ಜಿಪಿಎಸ್, ಮ್ಯಾಪ್ ಸರ್ವರ್ ಹೀಗೆ ಹಲವು ಕಂಪ್ಯೂಟರ್ ಗಳ ಹೊಂದಾಣಿಕೆಯ ಫಲಿತಾಂಶ ಇದು.

ಕಂಪ್ಯೂಟರ್ ಕೊರತೆ ಏನು?

ಒಂದು ವಸ್ತುವನ್ನು ಒಳ್ಳೆಯ ಕೆಲಸಕ್ಕೂ ಬಳಸ ಬಹುದು. ಕೆಟ್ಟ ಕೆಲ್ಸಕ್ಕೂ ಸಹ ಉಪಯೋಗಿಸಬಹುದು. ಅಲ್ವಾ?

ಕಂಪ್ಯೂಟರ್ ಏನು ಬೇರೆ ಅಲ್ಲ. ಮಿತಿ ಮೀರಿದರೆ, ಎಚ್ಚರ ತಪ್ಪಿದರೆ ಅದೂ ಕೂಡಾ ಅಪಾಯಕಾರಿ.

ಕಂಪ್ಯೂಟರ್ ಅನನುಕೂಲತೆ ಅಥವಾ ತೊಂದರೆ ಏನು? ಬನ್ನಿ ನೋಡೋಣ.

ಕೊರತೆ ೧. ದೇಹ / ಆರೋಗ್ಯಕ್ಕೆ ಮಾರಕ

ಕಂಪ್ಯೂಟರ್ ಅನ್ನು ಎಡಬಿಡದೇ ಗೇಮಿಂಗ್, ಕೋಡಿಂಗ್ ಇತ್ಯಾದಿಗಳಿಗೆ ವಿಶ್ರಾಂತಿಯಿಲ್ಲದೇ ಬಳಸುವದು ಆರೋಗ್ಯಕ್ಕೆ ಒಳ್ಳೆಯದಲ್ಲ. ಮೌಸ್, ಕೀಲಿಮಣೆ, ಪರದೆ ಜಾಸ್ತಿ ಬಳಸಿದಾಗ ಕೈಗೆ ಹಾಗೂ ಕಣ್ಣಿಗೆ ತೊಂದರೆ ಆಗಬಹುದು.

ತುಂಬಾ ಹೊತ್ತು ಕೂರುವದರಿಂದ ಬೆನ್ನಿನ ಸಮಸ್ಯೆಗಳು ಆರಂಭವಾಗಬಹುದು.

ಸ್ಮಾರ್ಟ್ ಫೊನ್ ಹಾಗೂ ಟ್ಯಾಬ್ ಏನು ಬೇರೆ ಏನಲ್ಲ. ಅವುಗಳ ಅತಿ ಬಳಕೆ ಕಣ್ಣು ಹಾಗೂ ಕುತ್ತಿಗೆಯ ಸಮಸ್ಯೆಗೆ ಕಾರಣ ಆಗ ಬಹುದು.

ಕೊರತೆ ೨. ವೈರಸ್ ಆಕ್ರಮಣ (ಅಟ್ಯಾಕ್)

ವೈರಸ್ ಅನ್ನುವದು ಮನುಷ್ಯರೇ ಮಾಡುವ ತೊಂದರೆ. ಕಳ್ಳ-ಕಾಕರು ಹ್ಯಾಕರು ಕೆಟ್ಟ ಸಾಫ್ಟವೇರ್ ಬರೆದು ಕಳುಹಿಸಿ ಕಂಪ್ಯೂಟರ್ ಪ್ರವೇಶ ಮಾಡಿ ಪಾಸ್ ವರ್ಡ್, ಕಾರ್ಡ್ ವಿವರ, ಹಣ ಹೀಗೆ ಅಮೂಲ್ಯ ಮಾಹಿತಿ ಕದಿಯುತ್ತಾರೆ.

ಎಂಟಿವೈರಸ್, ಎಂಟಿಮಾಲ್ವೇರ್ ಬಳಸಿ ತಕ್ಕ ಮಟ್ಟಿಗೆ ಜಾಗ್ರತ ವಾಗಿದ್ದರೆ ಈ ವೈರಸ್ ಸಮಸ್ಯೆ ಎದುರಿಸ ಬಹುದು.

ಕೊರತೆ ೩. ಹ್ಯಾಕಿಂಗ್ ಸಮಸ್ಯೆ

ಹ್ಯಾಕರ್ ಗಳ ಕೆಲ್ಸ ಏನೆಂದರೆ ಅಪ್ಲಿಕೇಶನ್ ಗಳನ್ನು ಕಂಪ್ಯೂಟರ್ ಜಾಲವನ್ನು ಭೇದಿಸಿ ಅಲ್ಲಿನ ಮಾಹಿತಿ ಕದಿಯುವದು, ಮಾಹಿತಿ ಬದಲಾಯಿಸುವ ಕೆಲ್ಸ ಮಾಡುತ್ತಾರೆ. ಇದೂ ಕೂಡಾ ಮನುಷ್ಯ ನಿರ್ಮಿತ ಸಮಸ್ಯೆ. 

ಎಥಿಕಲ್ ಹ್ಯಾಕರ್ (ನೈತಿಕ ಕನ್ನ ಹಾಕುವವರು ಅಥವಾ ಒಳ್ಳೆಯ ಹ್ಯಾಕರ್) ಜಾಲವನ್ನು ಭೇದಿಸಲು ಪ್ರಯತ್ನಿಸಿ ಕಳ್ಳ ಮಾರ್ಗ ಇದೆಯಾ ನೋಡುತ್ತಾರೆ. ಕಳ್ಳ ದಾರಿ ಇದ್ದರೆ ತಿಳಿಸಿ ಹೇಗೆ ಮುಚ್ಚುವದು ಎಂದು ತಿಳಿಸುತ್ತಾರೆ.

ಕೊರತೆ ೪. ಗ್ರಾಫಿಕ್ ಕಂಟೆಂಟ್

ಗಾಳಿ ಬರಲಿ ಎಂದು ಕಿಟಕಿ ತೆಗೆದರೆ ಸೊಳ್ಳೆ ಬರುವ ಹಾಗೆ ಕಂಪ್ಯೂಟರ್ ಜಾಲದಲ್ಲಿ ಒಳ್ಳೆಯ ವಿಷಯದ ಜೊತೆ ಕೆಟ್ಟ ವಿಷಯಗಳು ಸಹ ಇವೆ. ಹಿಂಸೆ, ಅಶ್ಲೀಲತೆ, ದುರ್ ವ್ಯವಹಾರಗಳಿವೆ. ಅವುಗಳಿಂದ ದೂರ ಇದ್ದೂ ಎಚ್ಚರಿಕೆಯಿಂದ ಇರಬೇಕು.

ಕೊರತೆ ೫. ಜನರಿಗೆ ಕಡಿಮೆ ಉದ್ಯೋಗ

ಕಂಪ್ಯೂಟರ್ ತನ್ನ ವೇಗ, ನಿಖರತೆ, ಮಾಹಿತಿ ಸಂಗ್ರಹ, ನೆಟ್ ವರ್ಕ್ ಸಾಮರ್ಥ್ಯದಿಂದ ಅತ್ಯಂತ ಕಡಿಮೆ ಖರ್ಚಿನಲ್ಲಿ ಹೆಚ್ಚು ಕೆಲಸ ಮಾಡುತ್ತದೆ. ಇದು ಒಂದು ರೀತಿಯಲ್ಲಿ ಕೋಡಿಂಗ್, ಟೆಸ್ಟಿಂಗ್, ಆಪರೇಟಿಂಗ್ ಉದ್ಯೋಗ ಹುಟ್ಟು ಹಾಕಿದ್ದರೂ ಅನೇಕ ಕೆಲಸವನ್ನು ಮಾಡುವದರ ಮೂಲಕ ಉದ್ಯೋಗಗಳ ಅವಕಾಶವನ್ನು ಕಡಿಮೆ ಮಾಡಿದೆ.

ಕೊರತೆ ೬. ಬೆಲೆ ಜಾಸ್ತಿ

ಕಂಪ್ಯೂಟರ್ ದುಬಾರಿ. ನಿಜ ಸ್ಮಾರ್ಟ್ ಫೋನ್ ಇತ್ಯಾದಿಗಳು ಕಡಿಮೆ ದರಕ್ಕೆ ಲಭ್ಯ ಇದ್ದರೂ ಉತ್ತಮ ಕ್ಷಮತೆಯ ಸ್ಮಾರ್ಟ್ ಫೋನ್ ದುಬಾರಿ ಆಗಿದೆ. ಅದೇ ರೀತಿ ಡೆಸ್ಕ್ ಟಾಪ್, ಲ್ಯಾಪ್ ಟಾಪ್ ಗಳಿಗೂ ಇದು ಅನ್ವಯ ಆಗುತ್ತದೆ.

ಕೊರತೆ ೭. ಪರಿಸರಕ್ಕೆ ಮಾರಕ

ಕಂಪ್ಯೂಟರ್ ಒಂದು ಇಲೆಕ್ಟ್ರಾನಿಕ್ ಯಂತ್ರ. ಇದರ ತಯಾರಿಕೆಗೆ ಪ್ಲಾಸ್ಟಿಕ್, ಲೋಹ ಹೀಗೆ ಹಲವು ಮೂಲ ವಸ್ತುಗಳು ಬೇಕಿರುತ್ತದೆ. ಇದರ ತಯಾರಿಕೆ ಹಲವು ಹಾನಿಕಾರಕ ರಾಸಾಯನಿಕ ವಾತಾವರಣಕ್ಕೆ ಬಿಡುಗಡೆ ಆಗುತ್ತದೆ.

ಅಷ್ಟೇ ಅಲ್ಲ ಅದು ಕೆಲಸ ನಿಲ್ಲಿಸಿದಾಗ ಇವೆಲ್ಲದರ ಮರುಬಳಕೆ ಸರಿಯಾಗಿ ಮಾಡದಿದ್ದರೆ ಪರಿಸರದಲ್ಲಿ ತ್ಯಾಜ್ಯ ಹೆಚ್ಚುತ್ತದೆ.

ಕೊರತೆ ೮. ಸಮಯ ವ್ಯರ್ಥ

ಎಷ್ಟೋ ಜನ ಸ್ಮಾರ್ಟ್ ಫೋನ್, ಟ್ಯಾಬ್, ಲ್ಯಾಪ್ ಟಾಪ್ ನಲ್ಲಿ ಅಷ್ಟೇನು ಉಪಯುಕ್ತವಲ್ಲದ ಕೆಲ್ಸಕ್ಕೆ ಸಮಯ ವ್ಯರ್ಥ ಮಾಡುತ್ತಾರೆ. ಗೇಮಿಂಗ್, ಸೋಶಿಯಲ್ ಮಿಡಿಯಾ, ಮೂವಿ, ಹಾಡುಗಳು, ವಿಡಿಯೋ ಹೀಗೆ ಮಿತಿ ಮೀರಿದರೆ ಸಮಯ ಹೋಗಿದ್ದು ತಿಳಿಯದು. ಈ ರೀತಿಯಲ್ಲಿ ಸಮಯ ವ್ಯರ್ಥ ವಾಗದಂತೆ ಮಿತಿಯಲ್ಲಿ ಬಳಸಿದರೆ ಈ ಸಮಸ್ಯೆ ಆಗದು.

ಕೊರತೆ ೯. ದ್ವೇಷ, ವಿಷ ಕಾರುವ ಚರ್ಚೆಗಳು, ಮಾರ್ಕೆಟಿಂಗ್ ಕಂಟೆಂಟ್, ಸುಳ್ಳು ಕಂಟೆಂಟ್

ಇದು ಕಂಪ್ಯೂಟರ್ ನ ಕೊರತೆ ಅಲ್ಲ ಆದರೆ ಕಂಪ್ಯೂಟರ್ ಅಲ್ಲಿ ಲಭ್ಯ ವಿರುವ ಸೋಶಿಯಲ್ ಮಿಡಿಯಾ(ಸಾಮಾಜಿಕ ತಾಣ) ಗಳ ತೊಂದರೆ ಹಾಗೂ ಇತರ ತಾಣಗಳ ತೊಂದರೆ.

ಸೋಶಿಯಲ್ ಮಿಡಿಯಾದಲ್ಲಿ ಮುಕ್ತವಾಗಿ ಅನಿಸಿಕೆ ಹಂಚಿಕೊಳ್ಳ ಬಹುದು. ಕೆಲವರು ಮಾರು ವೇಷದಲ್ಲಿ ಬಂದು ಕಮೆಂಟ್ ಹಾಕುತ್ತಾರೆ. ಸಿಟ್ಟು ಬಂದಾಗ ಅವಾಚ್ಯ ಶಬ್ದ ಬಳಸಲೂ ಹಿಂಜರಿಯರು.
ಈ ರೀತಿ ಕಂಪ್ಯೂಟರ್ ದ್ವೇಷ ಪ್ರಸಾರಕ್ಕೂ ಕಾರಣವಾಗುವ ಸಾಧ್ಯತೆ ಇದೆ.

ಅದೇ ರೀತಿ ಕೆಲವರು ಗೌಪ್ಯವಾಗಿಡ ಬೇಕಾದ ವಿಷಯಗಳನ್ನು, ಮನದೊಳಗಿರುವ ಆಕ್ರೋಶವನ್ನು ಬಹಿರಂಗವಾಗಿ ಹಿಂದೆ ಮುಂದೆ ನೋಡದೇ ಹಂಚುವ ಸಾಧ್ಯತೆ ಇದೆ. 

ಇನ್ನೂ ಕೆಲ ಸಮಯ ವ್ಯವಸ್ಥಿತವಾಗಿ ಸುಳ್ಳು ಕಂಟೆಂಟ್ ಹಾಕಿ ಕುತಂತ್ರ ಮಾಡುವವರು, ಸೈಕಾಲಜಿ ಅರಿತು ಜನಕ್ಕೆ ಮರುಳು ಮಾಡುವ ಮಾರ್ಕೆಟಿಂಗ್ ಹಾಗೂ ಕುತಂತ್ರಿಗಳ ಕಂಟೆಂಟ್ ಗೂ ಇಲ್ಲಿ ಕೊರತೆಯಿಲ್ಲ.

ಹಂಸ ಕ್ಷೀರದ ನ್ಯಾಯದಂತೆ ಒಳ್ಳೆಯದನ್ನು ನೋಡಿ ಕೆಟ್ಟದ್ದನ್ನು ದೂರ ತಳ್ಳುವ ಜಾಣ್ಮೆ ನೀವು ತೋರಬೇಕು.

ಕೊನೆಯ ಮಾತು

ಒಟ್ಟಿನಲ್ಲಿ ಕಂಪ್ಯೂಟರ್ ಅಗಾಧ ಮಾಹಿತಿ ರಕ್ಷಿಸಲು, ಸಂಸ್ಕರಿಸಲು, ಬೇಕಾದಾಗ ಹೊರ ಪಡೆಯಲು ಸಹಾಯ ಮಾಡುವ ಯಂತ್ರ. ಇದು ಕೆಲಸ ಮಾಡುವದೇ ಗಣಿತ ಹಾಗೂ ತರ್ಕದ ಆಧಾರದ ಮೇಲೆ. ಮೊದ ಮೊದಲು ಬರೀ ಲೆಕ್ಕಾಚಾರಕ್ಕೆ ಬಳಸಲ್ಪಡುತ್ತಿದ್ದ ಈ ಯಂತ್ರ ಇಂದು ಮಾಡದ ಕೆಲಸ ಕಡಿಮೆ ಎನ್ನಬಹುದು. ವಿಡಿಯೋ/ಆಡಿಯೋ ಎಡಿಟಿಂಗ್, ವಿಡಿಯೋ ಗೇಮಿಂಗ್ ಹೀಗೆ ಹಲವು ರಂಗಗಳಲ್ಲಿ ಅವಿಭಾಜ್ಯ ಅಂಗವಾಗಿದೆ.

ಕಂಪ್ಯೂಟರ್ ನ ಇತ್ತೀಚಿನ ರೂಪ ಆದ ಸ್ಮಾರ್ಟ್ ಫೋನ್ ಇಂದು ಪ್ರತಿ ಮನೆಯಲ್ಲೂ ಪ್ರತಿಯೊಬ್ಬರ ಕೈಯಲ್ಲೂ ರಾರಾಜಿಸುತ್ತಿದೆ! ಭವಿಷ್ಯದಲ್ಲಿ ಇದು ಯಾವ ರೂಪ ತಳೆಯುತ್ತೋ ಆ ಬ್ರಹ್ಮನೇ ಬಲ್ಲ.

ಕಂಪ್ಯೂಟರ್ ಏನು? ಉದಾಹರಣೆಗಳು ಯಾವು? ಅನುಕೂಲ ಹಾಗೂ ಅನನಕೂಲ ಏನು ಅನ್ನುವದರ ಬಗ್ಗೆ ಈ ಲೇಖನ ಓದಿ ಅರಿತಿರಿ. ಮುಂದಿನ ಲೇಖನ ದಲ್ಲಿ ಕಂಪ್ಯೂಟರ್ ಬಗೆಗಳ ಬಗ್ಗೆ ವಿವರವಾಗಿ ತಿಳಿಯೋಣ.

ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ?

ಚಿತ್ರಕೃಪೆ: Joshua Woroniecki ಅವರು Pixabay ತಾಣದಿಂದ

ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು

ಪ್ರಶ್ನೆ: ಕಂಪ್ಯೂಟರ್‌ಗಳ ಇತಿಹಾಸ ಏನು?

ಉತ್ತರ: 19 ನೇ ಶತಮಾನದ ಆರಂಭದಲ್ಲಿ ಮೊದಲು ಕಂಪ್ಯೂಟರ್‌ಗಳನ್ನು  ಆವಿಷ್ಕಾರ ಮಾಡಲಾಯ್ತು. ಅತ್ಯಂತ ಹಳೆಯ ಯಾಂತ್ರಿಕ ಕಂಪ್ಯೂಟರ್ ಚಾರ್ಲ್ಸ್ ಬ್ಯಾಬೇಜ್ ವಿನ್ಯಾಸಗೊಳಿಸಿದ ವಿಶ್ಲೇಷಣಾತ್ಮಕ (ಎನಾಲಿಟಿಕಲ್) ಎಂಜಿನ್‌. ಮೊದಲ ಎಲೆಕ್ಟ್ರಾನಿಕ್ ಕಂಪ್ಯೂಟರ್, ENIAC ಅನ್ನು 1945 ರಲ್ಲಿ ನಿರ್ಮಿಸಲಾಯಿತು ಮತ್ತು ಇದನ್ನು ಮಿಲಿಟರಿ ಲೆಕ್ಕಾಚಾರಗಳಿಗೆ ಬಳಸಲಾಯಿತು.

ಪ್ರಶ್ನೆ: ವಿವಿಧ ರೀತಿಯ ಕಂಪ್ಯೂಟರ್‌ಗಳು ಯಾವುವು? 

ಉತ್ತರ: ಕಂಪ್ಯೂಟರ್ ಗಳು ಹಲವು ರೀತಿಯಲ್ಲಿ ಲಭ್ಯವಿದೆ. ಮುಖ್ಯವಾಗಿ

 • ಪರ್ಸನಲ್ ಕಂಪ್ಯೂಟರ್‌ಗಳು
 • ಲ್ಯಾಪ್‌ಟಾಪ್‌ಗಳು
 • ಟ್ಯಾಬ್ಲೆಟ್‌ಗಳು
 • ಸ್ಮಾರ್ಟ್‌ಫೋನ್‌ಗಳು
 • ಸರ್ವರ್‌ಗಳು
 • ಮೇನ್‌ಫ್ರೇಮ್‌ಗಳು ಇತ್ಯಾದಿ.

ಪ್ರಶ್ನೆ: ಕಂಪ್ಯೂಟರ್‌ಗಳು ಡೇಟಾವನ್ನು ಹೇಗೆ ಸಂಗ್ರಹಿಸುತ್ತವೆ? 

ಉತ್ತರ: ಕಂಪ್ಯೂಟರ್‌ಗಳು ಹಾರ್ಡ್ ಡಿಸ್ಕ್ ಡ್ರೈವ್‌ಗಳು, ಸಾಲಿಡ್ ಸ್ಟೇಟಿಕ್ ಡ್ರೈವ್‌ಗಳು ಮತ್ತು ಫ್ಲ್ಯಾಷ್ ಡ್ರೈವ್‌ಗಳಂತಹ ವಿವಿಧ ರೀತಿಯಲ್ಲಿ ಡೇಟಾವನ್ನು ಸಂಗ್ರಹಿಸುತ್ತವೆ. ಕ್ಲೌಡ್ ಸಂಗ್ರಹಣೆಯನ್ನು ಕೂಡಾ ಮಾಹಿತಿ ಉಳಿಸಲು ಬಳಸುತ್ತಾರೆ.

ಪ್ರಶ್ನೆ: ವೈರಸ್‌ಗಳು ಮತ್ತು ಮಾಲ್‌ವೇರ್‌ಗಳಿಂದ ನನ್ನ ಕಂಪ್ಯೂಟರ್ ಅನ್ನು ನಾನು ಹೇಗೆ ರಕ್ಷಿಸಿಕೊಳ್ಳಬಹುದು? 

ಉತ್ತರ: ವೈರಸ್ ಹಾಗೂ ಮಾಲ್ ವೇರ್ ಗಳಿಂದ ಕಂಪ್ಯೂಟರ್ ಅನ್ನು ರಕ್ಷಿಸಲು ಮುಖ್ಯವಾಗಿ ಈ ಮುಂದಿನ ವಿಧಾನಗಳನ್ನು ಅನುಸರಿಸಿರಿ.

 • ಆಂಟಿವೈರಸ್ ಸಾಫ್ಟ್‌ವೇರ್ ಅನ್ನು ಸ್ಥಾಪಿಸಿ, ಬಳಸಿ.
 • ನಿಮ್ಮ ಆಪರೇಟಿಂಗ್ ಸಿಸ್ಟಂ ಮತ್ತು ಸಾಫ್ಟ್‌ವೇರ್ ಅನ್ನು ಆಗಾಗ ನವೀಕರಿಸಿ.
 • ಅನುಮಾನಾಸ್ಪದ ಇಮೇಲ್ ಲಗತ್ತುಗಳನ್ನು ಓಪನ್ ಮಾಡ ಬೇಡಿ.
 • ವಿಶ್ವಾಸಾರ್ಹವಲ್ಲದ ಮೂಲಗಳಿಂದ ಸಾಫ್ಟ್‌ವೇರ್ ಡೌನ್‌ಲೋಡ್ ಮಾಡ ಬೇಡಿ, ಬಳಸ ಬೇಡಿ.

ಪ್ರಶ್ನೆ: ನನ್ನ ಕಂಪ್ಯೂಟರ್‌ನ ಕಾರ್ಯಕ್ಷಮತೆಯನ್ನು ನಾನು ಹೇಗೆ ಸುಧಾರಿಸಬಹುದು?

ಉತ್ತರ: ಕಂಪ್ಯೂಟರ್ ಅನ್ನು ವೇಗ ಮಾಡಲು ಹಲವು ಉಪಾಯಗಳಿವೆ. 

 • ಹೆಚ್ಚಿನ RAM ಅನ್ನು ಸೇರಿಸುವ ಮೂಲಕ ವೇಗಗೊಳಿಸಬಹುದು.
 • ಹಾರ್ಡ್ ಡಿಸ್ಕ್ ನಿಂದ ಸಾಲಿಡ್ ಸ್ಟೇಟ್ ಡ್ರೈವ್‌ಗೆ ಅಪ್‌ಗ್ರೇಡ್ ಮಾಡುವ ಮೂಲಕ ಕಂಪ್ಯೂಟರ್ ಸ್ಪೀಡ್ ಜಾಸ್ತಿ ಆಗುತ್ತೆ.
 • ಬಳಕೆಯಾಗದ ಪ್ರೋಗ್ರಾಂಗಳನ್ನು ಅನ್‌ಇನ್‌ಸ್ಟಾಲ್ ಮಾಡುವ ಮೂಲಕ ಅನವಶ್ಯಕವಾಗಿ ರನ್ ಆಗುವ ಬ್ಯಾಕ್ ಗ್ರೌಂಡ್ ಪ್ರಾಸೆಸ್ ಗಳನ್ನು ಕಡಿಮೆ ಮಾಡಿ ವೇಗ ಮಾಡ ಬಹುದು.
 • ನಿಮ್ಮ ಕಂಪ್ಯೂಟರ್ ಅನ್ನು ಮಾಲ್‌ವೇರ್ ಮತ್ತು ವೈರಸ್‌ಗಳಿಂದ ಮುಕ್ತವಾಗಿಟ್ಟರೆ ಕೂಡಾ ಕಂಪ್ಯೂಟರ್ ವೇಗ ಆದೀತು.

ಪ್ರಶ್ನೆ: ಅತಿಯಾದ ಕಂಪ್ಯೂಟರ್ ಬಳಕೆಯ ಅಪಾಯಗಳೇನು?

ಉತ್ತರ: ಅತಿಯಾದ ಕಂಪ್ಯೂಟರ್ ಬಳಕೆಯು ದೈಹಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಉದಾಹರಣೆಗೆ ಕಣ್ಣಿನ ಆಯಾಸ, ಬೆನ್ನು ನೋವು ಮತ್ತು ಕಾರ್ಪಲ್ ಟನಲ್ ಸಿಂಡ್ರೋಮ್. 

ಇದು ಸಾಮಾಜಿಕ ಪ್ರತ್ಯೇಕತೆ, ವ್ಯಸನ ಮತ್ತು ದೈಹಿಕ ಚಟುವಟಿಕೆಯ ಕೊರತೆಗೆ ಕೂಡಾ ಕಾರಣವಾಗಬಹುದು.


0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ ಏನು? ತಿಳಿಸಿ.

Advertisement

blogger
© ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ, ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ವಿಸ್ಮಯನಗರಿ.ಕಾಂ