ನಿಮಗೆ ವರ್ಕ್ ಫ್ರಮ್ ಹೋಂ ಟೈಂ ಅಲ್ಲಿ ಬೇಕಾಗುವ ವಸ್ತುಗಳು

ವರ್ಕ್ ಫ್ರಮ್ ಹೋಂ ಅನ್ನುವ ಪರಿಕಲ್ಪನೆ ಐಟಿಗೆ ಹೊಸತೇನಲ್ಲ. ಆದರೆ ಕೊರೋನಾ ಮಹಾಮಾರಿ ಬಂದಾಗ ಇದರ ಬಳಕೆ ಜಾಸ್ತಿ ಆಯ್ತು. 

ಈಗ ವರ್ಕ್ ಫ್ರಮ್ ಹೋಂ ಮಹಾಮಾರಿ ಕಮ್ಮಿ ಆದಾಗಲೂ ಪೂರ್ತಿ ಅಲ್ಲದಿದ್ದರೂ ಸ್ವಲ್ಪ ಮುಂದುವರಿಯಲಿದೆ. ವರ್ಕ್ ಫ್ರಮ್ ಹೋಂ ವೇಳೆಯಲ್ಲಿ ಕಂಪ್ಯೂಟರ್ ಇಂಜಿನಿಯರ್ ಗೆ ಬೇಕಾಗುವ ಕೆಲವು ಉಪಯುಕ್ತ ವಸ್ತುಗಳನ್ನು ಇಲ್ಲಿ ನೋಡೋಣ.

ಚಿತ್ರಕೃಪೆ: Samule Sun on Unsplash

{tocify} $title={ವಿಷಯ ಸೂಚಿ}

ಈ ಲೇಖನದಲ್ಲಿ ಅಫಿಲಿಯೇಟ್ ಲಿಂಕ್ ಗಳು ಇವೆ. ಈ ಕಂಟೆಂಟ್ ಯಾವುದೇ ರೀತಿಯಲ್ಲಿ ಅವುಗಳನ್ನು ನಿಮಗೆ ಮಾರಲು ಬರೆದಿಲ್ಲ. ಈ ಲಿಂಕ್ ಬಳಸುವದು ಬಿಡುವದು ನಿಮಗೆ ಬಿಟ್ಟಿದ್ದು. ಒತ್ತಾಯ ಇಲ್ಲ. ಬಳಸಿದರೆ ನಿಮಗೆ ಒಂದು ಪೈಸೆ ಸಹ ಎಕ್ಸ್ಟ್ರಾ ಖರ್ಚಾಗದೆ ನಿಮ್ಮ ಗಣಕಪುರಿಗೆ ಆರ್ಥಿಕ ಬೆಂಬಲ ದೊರೆಯುತ್ತದೆ. ವಂದನೆಗಳು.

ವರ್ಕ್ ಫ್ರಮ್ ಹೋಂ ಅನ್ನುವದು ಅಪರೂಪ ಆಗಿದ್ದಾಗ ಮನೆಯಲ್ಲಿ ಯಾವುದೇ ವ್ಯವಸ್ಥೆ ಬೇಕಿಲ್ಲ. ಆದರೆ ಜಾಸ್ತಿ ದಿನ ಮಾಡಲು ಮನೆಯಲ್ಲಿ ಹೋಂ ಆಫೀಸ್ ಸಜ್ಜುಗೊಳಿಸಿಕೊಳ್ಳುವದು ಉತ್ತಮ.

ನನ್ನ ಅನುಭವದ ಪ್ರಕಾರ ಈ ಮುಂದಿನ ವಸ್ತುಗಳು ನಮ್ಮ ಹೋಂ ಆಫೀಸಲ್ಲಿ ಇದ್ದರೆ ಉತ್ತಮ. ಹೋಂ ಆಫೀಸ್ ಪ್ರತ್ಯೇಕವಾದ ರೂಂ ಆದರೂ ಸರಿ ಅಥವಾ ಮನೆಯ ಯಾವುದಾದರೊಂದು ರೂಂ ನ ಮೂಲೆ ಆದರೂ ಸರಿ.

ಲ್ಯಾಪ್ ಟಾಪ್


ಚಿತ್ರಕೃಪೆ: Christopher Gower on Unsplash

ಹೆಚ್ಚಿನವರಿಗೆ ಆಫೀಸಲ್ಲೇ ಲ್ಯಾಪ್ ಟಾಪ್ ಕೊಡಲಾಗುತ್ತೆ. ಆದರೆ ನೀವೇ ತೆಗೆದುಕೊಳ್ಳ ಬೇಕಿದ್ದರೆ ಉತ್ತಮ ವೇಗದ ಜಾಸ್ತಿ ರಾಮ್ ಇರುವ ಲ್ಯಾಪ್ ಟಾಪ್ ಖರೀದಿಸುವದು ಒಳ್ಳೆಯದು.

ಇನ್ನು ಬೇಕಿದ್ದರೆ ಪ್ರತ್ಯೇಕ ಮಾನಿಟರ್ ಸಹ ಇಟ್ಟು ಕೊಳ್ಳಬಹುದು.

ನನ್ನ ಆಯ್ಕೆಯ ಲ್ಯಾಪ್ ಟಾಪ್ ಗಳು ಈ ಕೆಳಗಿವೆ

ಎಪಲ್ ಮ್ಯಾಕ್ ಬುಕ್ ಪ್ರೋ ಎಂ೧ ಪ್ರೋ ಚಿಪ್

ಎಸುಸ್ ರೋಗ್ ಝೆಫಿರಸ್ ಜಿ೧೪ ಪ್ರೀಮಿಯಂ

ಎಸುಸ್ ರೋಗ್ ಝೆಫಿರಸ್ ಜಿ೧೪ - ಮಿಡ್ ರೇಂಜ್

ಟೇಬಲ್


ಚಿತ್ರಕೃಪೆ: Remy_Loz on Unsplash

ಲ್ಯಾಪ್ ಟಾಪ್ ಅನ್ನು ಬಳಸುವಾಗ ಟೇಬಲ್ ಮೇಲೆ ಇಟ್ಟು ಕೊಂಡು ಬಳಸುವದು ಉತ್ತಮ.

ತೊಡೆ ಮೇಲೆ, ಮಂಚ, ಸೋಫಾ ಅಥವಾ ನೆಲದ ಮೇಲೆ ಇಟ್ಟು ಕೊಂಡು ಬಳಸ ಬಹುದಾದರೂ ಹೆಚ್ಚು ಕಾಲ ಬಳಸಿದಾಗ ಬೆನ್ನು ಮೂಳೆಗೆ ಸಂಬಂಧಿಸಿದ, ಕುತ್ತಿಗೆ ನೋವು ಇತ್ಯಾದಿ ಬಂದೀತು. 

ತೊಡೆ ಮೇಲೆ ಇಟ್ಟುಕೊಂಡರೆ ಲ್ಯಾಪ್ ಟಾಪ್ ರೇಡಿಯೇಶನ್, ಬಿಸಿ ಅನವಶ್ಯಕ ನಿಮ್ಮ ದೇಹಕ್ಕೆ ತಾಗುತ್ತದೆ ಅಲ್ವಾ.

ಟೇಬಲ್  ಬರೀ ಲ್ಯಾಪ್ ಟಾಪ್ ಹಿಡಿಯುವಷ್ಟೇ ಚಿಕ್ಕದು ಬೇಡ. ದೊಡ್ಡದಾಗಿರಲಿ. ಇದರಿಂದ ನೋಟ್ ಬುಕ್ ಇಡಲು, ಹೆಡ್ ಫೋನ್, ಮೊಬೈಲ್ ಇತ್ಯಾದಿ ಇಡಲು ಜಾಗ ಇರುತ್ತದೆ. 

ತೀರಾ ಸಮಯ ಇರದ ಪಕ್ಷದಲ್ಲಿ ಊಟ, ತಿಂಡಿ ಮಾಡಲೂ ಸಹ ಬಳಸಬಹುದು. ;)

ಒಂದೆರಡು ಟೇಬಲ್ ಉದಾಹರಣೆ ಕೆಳಗಿದೆ.

ಆಫೀಸ್ ಟೇಬಲ್ - ವೇಕ್ ಫಿಟ್ ಸೇಜ್

ಆಫೀಸ್ ಟೇಬಲ್ - ಸನ್ ಆನ್ ಆಫೀಸ್

ಇರ್ಗೊನಾಮಿಕ್ ಆಫೀಸ್ ಚೇರ್


ಚಿತ್ರಕೃಪೆ: Arthur Lambillotte on Unsplash

ಆಫೀಸ್ ಅಲ್ಲಿ ಬೈ ಡಿಫಾಲ್ಟ್ ಇರ್ಗೊನೊಮಿಕ್ ಚೇರ್ ಕೊಡುತ್ತಾರೆ. ಮನೆಯಲ್ಲಿ ನಾವು ಈಗಾಗಲೇ ಇರುವ ಮರದ ಕುರ್ಚಿ, ಪ್ಲಾಸ್ಟಿಕ್ ಕುರ್ಚಿ, ಸೋಫಾ ಕುರ್ಚಿ ಅಥವಾ ಕಬ್ಬಿಣದ ಕುರ್ಚಿ ಬಳಸ ಬಾರದು. ಇನ್ನು ಕುಶನ್ ಇದ್ದರೂ ಇರ್ಗೊನೊಮಿಕ್ ಅಲ್ಲದ ಚೇರ್ ಬಳಸುವದು ಒಳ್ಳೆಯದಲ್ಲ.

ಕಂಪ್ಯೂಟರ್ ಮುಂದೆ 8 ರಿಂದ 12 ಗಂಟೆಗಳ ಕಾಲ ಪ್ರತಿದಿನ ಕೆಲಸ ಮಾಡುವ ಅನಿವಾರ್ಯತೆ ಇರುತ್ತದೆ. ಹೀಗಿರುವಾಗ ಸಾದಾ ಚೇರ್ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಬೆನ್ನು ನೋವು, ಕುತ್ತಿಗೆ ನೋವು ಉಂಟು ಮಾಡುತ್ತೆ.

ಒಂದು ಇರ್ಗೊನೊಮಿಕ್ ಆಫೀಸ್ ಚೇರ್ ಕೂಡಾ ವರ್ಕ್ ಫ್ರಮ್ ಹೋಂ ಗೆ ಉಪಯುಕ್ತ.

ಒಂದೆರಡು ಉದಾಹರಣೆಗಳು ಕೆಳಗಿವೆ. ಅಮೇಜಾನ್ ಅಲ್ಲಿ ವಿವರ ನೋಡಿ.

ಕೆಪ್ಲರ್ ಬ್ರೂಕ್ಸ್ ಹೈ ಬ್ಯಾಕ್

ದ ಅರ್ಬನ್ ಬೆಮ್ಪ್ಟನ್ ಹೈ ಬ್ಯಾಕ್

ಗ್ರೀನ್ ಸೌಲ್ ವಿಯಾನ್ನಾ ಹೈ ಬ್ಯಾಕ್

ಗ್ರೀನ್ ಸೌಲ್ ಜ್ಯುಪಿಟರ್ ಎರ್ಗೊನೊಮಿಕ್ ಚೇರ್

ಲ್ಯಾಪ್ ಟಾಪ್ ಗೆ ಗದ್ದಲ  ಕಡಿಮೆ ಮಾಡುವ ಹೆಡ್ ಫೋನ್


ಚಿತ್ರಕೃಪೆ: Pedro Sanz on Unsplash

ಲ್ಯಾಪ್ ಟಾಪ್ ನಲ್ಲಿ ಸ್ಕೈಪ್, ಝೂಮ್ ಮೀಟಿಂಗ್ ಕಾಮನ್. ಇದಕ್ಕೆ ಒಂದು ಹೆಡ್ ಫೋನ್ ಇದ್ದರೆ ಉತ್ತಮ.

ಮನೆ ಎಂದ ಮೇಲೆ ಮಕ್ಕಳು, ಟಿವಿ, ಕುಕ್ಕರ್, ಮಿಕ್ಸರ್,  ಗದ್ದಲ ಇದ್ದದ್ದೇ. ಇನ್ನು ಅಕ್ಕ ಪಕ್ಕದ ಮನೆಗಳದ್ದು ಕೇಳಲೇ ಬೇಡಿ!

ಅವೆಲ್ಲ ನಮ್ಮ ಕಂಟ್ರೋಲ್ ಅಲ್ಲಿ ಇಲ್ಲ. ಅದಕ್ಕೆ ನಾವೇ ಗದ್ದಲ ಕಡಿಮೆ ಮಾಡುವ ಹೆಡ್ ಫೋನ್ ಬಳಸೋಣ ಏನಂತೀರಾ? 

3.5 ಆಡಿಯೋ ಜ್ಯಾಕ್ ಗಿಂತ ಯು ಸ್ ಬಿ ಹೆಡ್ ಫೋನ್ ಒಳ್ಳೆಯದು. ಹೆಡ್ ಫೋನ್ ನಿಮ್ಮ ಲ್ಯಾಪ್ ಟಾಪ್ ಜೊತೆ ಕಂಪಾಟಿಬಲ್ ಇದೆ ಎಂದು ಖಚಿತ ಪಡಿಸಿಕೊಳ್ಳಿ.

ಈ ಕೆಳಗಿನ ಹೆಡ್ ಫೋನ್ ನಾನು ಸುಮಾರು ೧೧ ತಿಂಗಳಿಂದ ಬಳಸುತ್ತಿದ್ದೇನೆ. ನನಗೆ ಉತ್ತಮ ಅನುಭವ ನೀಡಿದೆ. ಇದೇ ರೀತಿಯ ಹೆಡ್ ಫೋನ್ ಜಾಬ್ರಾ, ಸೋನಿ ಕಂಪನಿಗಳಿಂದ ಸಹ ಲಭ್ಯವಿದೆ.

ಸೆನ್ ಹೈಸರ್ ಯು ಎಸ್ ಬಿ ಹೆಡ್ ಫೋನ್

ಮೌಸ್


ಚಿತ್ರಕೃಪೆ: Oscar Ivan Esquivel Arteaga on Unsplash

ಲ್ಯಾಪ್ ಟಾಪ್ ಅಲ್ಲಿ ಟಚ್ ಪ್ಯಾಡ್ ಇರುತ್ತೆ ನಿಜ. ಆದರೆ ಬರಿ ಟಚ್ ಪ್ಯಾಡ್ ಗಿಂತ ಜೊತೆಗೆ ಮೌಸ್ ಸಹ ಬಳಸಿದರೆ ಕೈ ಗೆ ಒಳ್ಳೆಯದು.

ಮೌಸ್ ವೈರ್ಡ್ ಅಥವಾ ವೈರ್ ಲೆಸ್ ಆದ್ರೂ ಪರವಾಗಿಲ್ಲ. ಆದರೆ ವೈರ್ ಲೆಸ್ ಮೌಸ್ ಬಳಸಿದರೆ ಉತ್ತಮ ಅನುಭವ ಕೊಡುತ್ತೆ. ನೀವು ತಡ ರಾತ್ರಿ ಕೆಲಸ ಮಾಡುವವರಾದರೆ ಜಾಸ್ತಿ ಕ್ಲಿಕ್ ಸೌಂಡ್ ಮಾಡದ ಸೈಲಂಟ್ ಮೌಸ್ ಒಳ್ಳೆಯದು.

ಪ್ರೋಟ್ರಾನಿಕ್ಸ್ ವೈರ್ ಲೆಸ್ ಮೌಸ್ ಟೋಡ್ ೧೨ - ಬಜೆಟ್

ಲಾಜಿಟೆಕ್ ಎಂ೨೨೧ ಸೈಲಂಟ್ ವೈರ್ ಲೆಸ್ ಮೌಸ್

ವಾಟರ್ ಬಾಟಲ್


ಚಿತ್ರಕೃಪೆ: Steve Johnson on Unsplash

ದಿನಕ್ಕೆ ಕನಿಷ್ಟ 1.5 ಯಿಂದ 2 ಲೀಟರ್ ನೀರು ದೇಹಕ್ಕೆ ಒಳ್ಳೆಯದು. ಹಾಗಂತ ಒಮ್ಮೆಲೆ ಗಟ ಗಟ ಎಂದು ಕುಡಿಯುವದಲ್ಲ. ಕೆಲಸದಲ್ಲಿ ಬ್ಯುಸಿ ಇರುವಾಗ ನೀರು ಕುಡಿಯುವದು ಮರೆಯುವದು ಜಾಸ್ತಿ.

ಒಂದು ನೀರಿನ ಬಾಟಲ್ ಪ್ರತಿದಿನ ತುಂಬಿಸಿ ಪಕ್ಕದಲ್ಲೇ ಇಟ್ಟು ಕೊಳ್ಳಿ. ಗಂಟೆಗೊಮ್ಮೆ ಸ್ವಲ್ಪ ಸ್ವಲ್ಪ ಹೀರಿ. ಬಾಟಲ್ ಪ್ಲಾಸ್ಟಿಕ್, ಅಲ್ಯುಮಿನಿಯಂ ಬೇಡ. ಸ್ಟೀಲ್ ಒಳ್ಳೆಯದು.

ಅಮೇಜಾನ್ ಸೋಲಿಮೊ ಸ್ಟೀಲ್ ಬಾಟಲ್ ಒಂದು ಉತ್ತಮ ಸ್ಟೀಲ್ ಬಾಟಲ್ ಗೆ ಉದಾಹರಣೆ.

ಟೇಬಲ್ ಅಥವಾ ಗೋಡೆ ಗಡಿಯಾರ


ಚಿತ್ರಕೃಪೆ: Julian Hochgesang on Unsplash

ಸಮಯ ಈಗೀಗ ಸ್ಮಾರ್ಟ್ ಫೋನ್ ಅಲ್ಲಿ ನೋಡೋದು ಜಾಸ್ತಿ. ಆದರೆ ಸ್ಮಾರ್ಟ್ ಫೋನ್ ಸಮಸ್ಯೆ ಏನೆಂದರೆ ಅಲ್ಲಿ ಮನಸ್ಸನ್ನು ಬೇರೆ ಕಡೆ ಎಳೆಯೋ ಸಾಮಾಜಿಕ ತಾಣಗಳು.  ಅಷ್ಟೇ ಅಲ್ಲ ಈಗಾಗಲೇ ಕಂಪ್ಯೂಟರ್ ನೋಡಿ ನೋಡಿ ನಿಮ್ಮ ಕಣ್ಣಿಗೆ ಸುಸ್ತಾಗಿರುತ್ತೆ. ಸಮಯಕ್ಕಾಗಿ ಇನ್ನೊಂದು ಪರದೆ ನೋಡೋ ಗ್ರಹಚಾರ ಬೇಡ.

ಅದಕ್ಕೆ ಒಂದು ಪುಟ್ಟ ಟೇಬಲ್ ಟಾಪ್ ಅಥವಾ ಗೋಡೆ ಗಡಿಯಾರ ಯಾವಾಗಲೂ ಕಾಣುವ ಹಾಗಿರಲಿ.

ಟೇಬಲ್ ಟಾಪ್ ಆದ್ರೆ ಅದರಲ್ಲಿ ಅಲಾರಂ ವ್ಯವಸ್ಥೆ ಸಹ ಇರಲಿ.

ಟೇಬಲ್ ಅಲಾರಂ ಕ್ಲಾಕ್ ಗೆ ಇದೊಂದು ಉದಾಹರಣೆ.

ಉತ್ತಮ ಮೊಬೈಲ್ ಫೋನ್


ಚಿತ್ರಕೃಪೆ: Jonas Lee on Unsplash

ಒಂದು ಉತ್ತಮ ಮೊಬೈಲ್ ಫೋನ್ ಸಹ ಇದ್ದರೆ ಒಳ್ಳೆಯದು. ಝೂಮ್ ಕಾಲ್, ವ್ಹಾಟ್ಸ್ ಎಪ್, ಫೋನ್ ಕಾಲ್, ಕ್ಯಾಮೆರಾ ಹೀಗೆ ಹಲವು ಕಡೆ ಇದು ಅತ್ಯವಶ್ಯಕ. 

ನನ್ನ ಅನುಭವ ಏನೆಂದರೆ 12  ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್ ಕ್ರಮೇಣ ಸ್ಲೋ ಆಗುತ್ತೆ. ಕಡಿಮೆ ಎಂದರೂ 128 ಜಿಬಿ ಸ್ಟೋರೇಜ್ ಇರಲಿ. ಮಿಡಲ್ ರೇಂಜಿನ್ ಫೋನ್ ನನ್ನ ಪ್ರಕಾರ ಸಾಕು. ತೀರಾ ಪ್ರಿಮಿಯಂ ಫೋನ್ ಬೇಕಿಲ್ಲ. ಪರದೆ ಸೂಪರ್ ಅಮೋಲ್ಡ್ ಇದ್ದರೆ ಕಣ್ಣಿಗೆ ಒಳ್ಳೆಯದು.

ಒಂದಿಷ್ಟು ಉತ್ತಮ ಫೋನ್ ಲಿಸ್ಟ್ ನಿಮಗಾಗಿ. ಇದರಲ್ಲಿ ಹೆಚ್ಚಿನವು ಅಮೋಲ್ಡ್ ಪರದೆ ಇರುವ ಫೋನ್ ಗಳು.

ಒನ್ ಪ್ಲಸ್ ನೋರ್ಡ್ ೨ ೫ಜಿ

ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ೨೧ ೨೦೨೧

ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ೫೨ ೫ಜಿ

ಒನ್ ಪ್ಲಸ್ ನೋರ್ಡ್ ಸಿಇ ೫ಜಿ

ರೆಡ್ ಮಿ ನೋಟ್ ೧೦ ಪ್ರೋ

ರೆಡ್ ಮಿ ನೋಟ್ ೧೦ಎಸ್

ಎಪಲ್ ಐಫೋನ್ ೧೨

ಎಪಲ್ ಐಫೋನ್ ೧೩ ಮಿನಿ

ಐಕ್ಯೂ ಝೀ ೩ ೫ಜಿ

ನಿಮ್ಮ ಮೊಬೈಲ್ ಫೋನ್ ಗೆ ಹೆಡ್ ಫೋನ್

ನಿಮ್ಮ ಮೊಬೈಲ್ ಗೂ ಸಹ ಹೆಡ್ ಫೋನ್ ಇದ್ದರೆ ಒಳ್ಳೆಯದು. ಜಾಸ್ತಿ ಫೋನ್ ಅಲ್ಲಿ ಮಾತನಾಡುವಾಗ ಕಿವಿಗೆ ಫೋನ್ ಹಿಡಿದು ರೇಡಿಯೇಶನ್ ಹೀರುವ ಬದಲು ಹೆಡ್ ಫೋನ್ ಬಳಸಿ ಫೋನ್ ದೂರ ಇಟ್ಟುಕೊಳ್ಳುವದು ಒಳ್ಳೆಯದು.

ಕಿವಿಯ ಒಳಗೆ ಹೋಗುವ ಇಯರ್ ಬಡ್ ಗಳಿಗಿಂತ ಕಿವಿಯ ಮೇಲೆ ಇರುವ ಹೆಡ್ ಫೋನ್ ನಿಮ್ಮ ಕಿವಿಯ ಆರೋಗ್ಯಕ್ಕೆ ಉತ್ತಮ.

ನಾನು ಲ್ಯಾಪ್ ಟಾಪ್ ಗೆ ಯು ಎಸ್ ಬಿ ಹೆಡ್ ಫೋನ್ ಹಾಗೂ ಮೊಬೈಲ್ ಗೆ 3.5 ಆಡಿಯೋ ಜ್ಯಾಕ್ ಫೋನ್ ತೆಗೆದುಕೊಂಡೆ. ನೀವು ನಿಮ್ಮ ಫೋನ್ ಹಾಗೂ ಲ್ಯಾಪ್ ಟಾಪ್ ಗೆ ಕಾಮನ್ ಪೋರ್ಟ್ ಯು ಎಸ್ ಬಿ ಸಿ ಇದ್ದರೆ ಒಂದೇ ತೆಗೆದು ಕೊಂಡರೂ ಸಾಕು. ಬ್ಲ್ಯೂ ಟೂತ್ ಹೆಡ್ ಫೋನ್ ಕೂಡಾ ಉತ್ತಮ ಆಯ್ಕೆ.

ಆದರೆ ನನಗೆ ವೈರ್ಡ್ ಹೆಡ್ ಫೋನ್ ಉತ್ತಮ ಏಕೆಂದರೆ ಅವನ್ನು ಪೇರ್ ಮಾಡಿ ಬಳಸುವ ಗೋಜಿಲ್ಲ. ಧ್ವನಿ ಗುಣಮಟ್ಟ ವೈರ್ಡ್ ಹೆಡ್ ಫೋನ್ ಅಲ್ಲಿ ಯಾವಾಗಲೂ ಬ್ಲ್ಯೂ ಟೂತ್ ಗಿಂತ ಉತ್ತಮ ಆಗಿರುತ್ತೆ.

ಯುಎಸ್ ಬಿ ಹೆಡ್ ಫೋನ್ ಅಲ್ಲಿ ನಿಮ್ಮ ಮೈಕ್ ಗುಣಮಟ್ಟ ಚೆನ್ನಾಗಿದ್ದು ಬೇರೆ ಎಲ್ಲರಿಗೂ ನಿಮ್ಮ ಧ್ವನಿ ಸ್ಟಿರಿಯೋ ಫೋನಿಕ್ ಆಗಿ ಕೇಳಿಸುತ್ತೆ.

ನಿಮಗೆ ೩.೫ ಆಡಿಯೋ ಜ್ಯಾಕ್ ಹೆಡ್ ಫೋನ್ ಮೈಕ್ ಜೊತೆ ಬೇಕಿದ್ದರೆ ಸೋನಿ ಎಂಡಿಆರ್ ಎಪಿ೩೧೦ ಕಡೆ ಒಮ್ಮೆ ನೋಡಿ.

ಮೊಬೈಲ್ ಫೋನ್ ಸ್ಟ್ಯಾಂಡ್


ಚಿತ್ರಕೃಪೆ: Daniel Gotteswinter on Unsplash

ಝೂಮ್ ಅಥವಾ ವಾಟ್ಸ್ ಎಪ್ ಅಥವಾ ಸ್ಕೈಪ್ ವಿಡಿಯೋ ಕಾಲ್ ಸಂದರ್ಭದಲ್ಲಿ ಮೊಬೈಲ್ ಸ್ಟಾಂಡ್ ಬಳಸಿದರೆ ಮೊಬೈಲ್ ಸರಿಯಾದ ಕೋನದಲ್ಲಿ ನಿಂತಿದ್ದು ವಿಡಿಯೋ ಚೆನ್ನಾಗಿ ಬರುತ್ತೆ.

ಇದು ಬೇಡ ಎಂದರೆ ಒಂದಿಷ್ಟು ಪುಸ್ತಕ ಬಳಸಿ ಕೂಡಾ ಫೋನ್ ಬ್ಯಾಲೆನ್ಸ್ ಮಾಡಿ ಇಡಬಹುದು.

ಈ ಮೊಬೈಲ್ ಸ್ಟ್ಯಾಂಡ್ ಒಮ್ಮೆ ವೀಕ್ಷಿಸಿ.

ಅಂಟುವ ನೋಟ್ಸ್


ಚಿತ್ರಕೃಪೆ: Ravi Palwe on Unsplash

ಆಫೀಸಿನ ಕೆಲಸ ಜೊತೆಗೆ ಮನೆಯ ಹಲವು ಕೆಲಸ ಕೂಡಾ ಮ್ಯಾನೆಜ್ ಮಾಡುವದು ಸುಲಭ ಅಲ್ಲ. ಮುಖ್ಯ ಕೆಲಸ, ದಿನಗಳು, ಫೋನ್ ಅಥವಾ ಮೀಟಿಂಗ್ ನಂಬರ್ ಗಳು ಇತ್ಯಾದಿಗಳನ್ನು ಅಂಟುವ ನೋಟ್ಸ್ ಬಳಸಿ ಬರೆದಿಡಬಹುದು.

ನಿಮ್ಮ ಕಂಪ್ಯೂಟರ್ ಅಲ್ಲೇ ಇರುವ ಸ್ಟಿಕಿ ನೋಟ್ಸ್ ಎಪ್ ಅನ್ನೇ ಬಳಸಿ ಬೇಡ ಅಂದವರು ಯಾರು? ;)

400 ಶೀಟ್ ಇರುವ ಬಣ್ಣ ಬಣ್ಣ ದ ಸ್ಟಿಕಿ ನೋಟ್ಸ್ ಗಳು ಇಲ್ಲಿವೆ.

ಪೆನ್ ಹಾಗೂ ನೋಟ್ ಪ್ಯಾಡ್


ಚಿತ್ರಕೃಪೆ: Kelly Sikkema on Unsplash

ಪೆನ್ ಮತ್ತು ನೋಟ್ ಪ್ಯಾಡ್ ಯಾವಾಗಲೂ ಇರಲಿ. ಟೆಕ್ ಸಪೋರ್ಟ್ ನಂಬರ್, ಮೀಟಿಂಗ್ ಐಡಿ, ಚರ್ಚೆ ಮಾಡಬೇಕಾದ ಪಾಯಿಂಟ್ ನಂತಹ ತುಂಬಾ ಉಪಯುಕ್ತ ಮಾಹಿತಿ ಬರೆದಿಡಿ. 

ಕಂಪ್ಯೂಟರ್ ಅಲ್ಲೂ ಸಹ ಬರೆದಿಡಬಹುದು. ಆದರೆ ಅದನ್ನು ನೋಡಲು ಲಾಗಿನ್ ಆಗಬೇಕು. ಮೊಬೈಲ್ ಅಲ್ಲಿ ಸ್ಟೋರ್ ಮಾಡಿಟ್ಟರೂ ಒಕೆ.

ಕಾಫಿ ಮಗ್


ಚಿತ್ರಕೃಪೆ: John Matychuk on Unsplash

ನೀವು ಟೀ / ಕಾಫಿ ಕುಡಿಯುತ್ತೀರಾ? ಹಾಗಿದ್ದರೆ ಒಂದು ಉತ್ತಮ ಕಾಫಿ ಮಗ್ ಜೊತೆಗಿರಲಿ.

ಒಂದು ಸ್ಯಾಂಪಲ್ ಕಾಫೀ ಮಗ್ ಇಲ್ಲಿದೆ.

ಯೋಗ ಮ್ಯಾಟ್


ಚಿತ್ರಕೃಪೆ: Junseong Lee on Unsplash

ದಿನಕ್ಕೊಮ್ಮೆ ತಪ್ಪದೇ ಕನಿಷ್ಟ 30 ನಿಮಿಷ ಯೋಗ / ಲಘು ವ್ಯಾಯಾಮ ಮಾಡಿ. ಅದಕ್ಕೆ ಒಂದು ಯೋಗ ಮ್ಯಾಟ್ ಖರೀದಿಸಿ.

ಟ್ರೆಸ್ಕಾ ಯೋಗಾ ಮ್ಯಾಟ್ - ಪ್ರಿಮಿಯಂ

ಸಂಪ್ರಿ ಯೋಗಾ ಮ್ಯಾಟ್ - ಬಜೆಟ್

ಸ್ಮಾರ್ಟ್ ವಾಚ್


ಚಿತ್ರಕೃಪೆ: Solen Feyissa on Unsplash

ಆರೋಗ್ಯದ ಟ್ರ್ಯಾಕ್ ಮಾಡುವ ಸ್ಮಾರ್ಟ್ ವಾಚ್ ಅಥವಾ ಫಿಟ್ನೆಸ್ ವಾಚ್ ಇದ್ದರೆ ಉತ್ತಮ. ತುಂಬಾ ದುಬಾರಿ ಆಗಬೇಕಿಲ್ಲ. ಆದರೆ ಕನಿಷ್ಟ ಹೆಜ್ಜೆಯನ್ನು ಲೆಕ್ಕ ಮಾಡುವ ಹಾಗೂ ಜಾಸ್ತಿ ದಿನ ಚಾರ್ಜ್ ಬರುವಂತಹ ವಾಚ್ ಆಗಿರಲಿ.

ಪ್ರತಿದಿನ ಕನಿಷ್ಟ 4000-5000  ಹೆಜ್ಜೆಯ ಗುರಿ ಇಟ್ಟು ಕೊಂಡು ಪೂರೈಸಿದರೆ ಉತ್ತಮ.

ಎಂಐ ಸ್ಮಾರ್ಟ್ ಬ್ಯಾಂಡ್  ಅನ್ನು ಚೆಕ್ ಮಾಡಿ.

ಪ್ರಿಂಟರ್


ಚಿತ್ರಕೃಪೆ: FilterGrade on Unsplash

ನಿಮ್ಮ ದಿನ ನಿತ್ಯದ ಕೆಲಸದಲ್ಲಿ ಪದೇ ಪದೇ ಪ್ರಿಂಟಿಂಗ್ ಮಾಡುವ ಅಗತ್ಯ ಇದೆಯಾ? ಪುಟಗಳನ್ನು ಮುದ್ರಿಸಲು ಅಥವಾ ಜೆರಾಕ್ಸ್ ಮಾಡಲು ಮಲ್ಟಿ ಪರ್ಪೋಸ್ ಕಲರ್ ಪ್ರಿಂಟರ್ ಇಟ್ಟುಕೊಳ್ಳಿ.

ಅಪರೂಪಕ್ಕೆ ಬಳಸುವವರಾದರೆ ಬೇಕಾದಾಗ ಹೊರಗಡೆ ಅಂಗಡಿಯಲ್ಲಿ ಪ್ರಿಂಟ್ ಮಾಡಿಸಿಕೊಂಡರೆ ಸಾಕು.

ಎಚ್ ಪಿ ಕಲರ್ ಪ್ರಿಂಟರ್

ಇಷ್ಟೇ ಅಲ್ಲ ಡ್ಯುಯಲ್ ಮಾನಿಟರ್, ಕೀಬೋರ್ಡ್ ಇದನ್ನೂ ಕೂಡಾ ಈ ಲಿಸ್ಟ್ ಗೆ ಸೇರಿಸಬಹುದು. ನಿಮ್ಮ ಅಗತ್ಯ ಏನಿದೆಯೋ ಅದರ ಪ್ರಕಾರ ಖರೀದಿಸಿ ನಿಮ್ಮ ಹೋಂ ಆಫೀಸ್ ಸೆಟ್ ಮಾಡಿ.

ಕೊನೆಯ ಮಾತು

ವರ್ಕ್ ಫ್ರಮ್ ಹೋಂ ಅನ್ನುವದು ಉದ್ಯೋಗಿಗಳಿಗೆ ಒಂದು ವರದಾನ ಎಂದರೂ ತಪ್ಪಿಲ್ಲ. ನಗರಗಳಲ್ಲಿ ಟ್ರಾಫಿಕ್ ಜಂಟಾಟ ತಪ್ಪಿಸಿ ಆ ಸಮಯವನ್ನು ಮನೆಯ ಸಲುವಾಗೋ ಅಥವಾ ಕೆಲಸಕ್ಕೋ ಬಳಸಬಹುದಾಗಿದೆ.

ಒಂದಿಷ್ಟು ಮನೆಯಲ್ಲಿ ಮೂಲಭೂತ (ಬೇಸಿಕ್) ವ್ಯವಸ್ಥೆ ಮಾಡಿಕೊಂಡರೆ ಆರೋಗ್ಯದ ಸಮಸ್ಯೆ ಸಹ ಇರದು.

ಯಾವುದಕ್ಕೂ ಹಾಸಿಗೆ ಇದ್ದಷ್ಟೇ ಕಾಲು ಚಾಚಿ. ತೀರಾ ದುಬಾರಿ ವಸ್ತುಗಳ ಖರೀದಿ ಬೇಡ.

ನೀವು ಯಾವ ರೀತಿಯಲ್ಲಿ ವರ್ಕ್ ಫ್ರಮ್ ಹೋಂ ಗೆ ಸಜ್ಜು ಗೊಳಿಸಿಕೊಂಡಿದ್ದೀರಾ? ನಿಮ್ಮ ಹೋಂ ಆಫೀಸಲ್ಲಿ ಇನ್ನೇನಾದರೂ ಬೇರೆ ವಸ್ತುಗಳನ್ನು ಬಳಸುತ್ತಿದ್ದೀರಾ? ಕಮೆಂಟ್ ಹಾಕಿ ತಿಳಿಸಿ.

ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.


ಒನ್ ಪ್ಲಸ್ 10 ಪ್ರೋ 5ಜಿ ಫೋನ್ ಭಾರತದಲ್ಲಿ ಯಾವಾಗ?

ಫ್ಲ್ಯಾಗ್ ಶಿಪ್ ಫೋನ್ ಆದ ಒನ್ ಪ್ಲಸ್ 10 ಪ್ರೋ ಚೀನಾ ಮಾರುಕಟ್ಟೆಗೆ ಜನವರಿ 11 2022ರಂದು ಬಿಡುಗಡೆ ಆಗಿದೆ. 

ಈ ಫೋನ್ ಭಾರತದಲ್ಲಿ  ಯಾವಾಗ ಬರುತ್ತೆ? 

ಈ ಫ್ಲ್ಯಾಗ್ ಶಿಪ್ ಫೋನ್ ಅಲ್ಲಿ ಏನೇನು ವಿಶಿಷ್ಟತೆ ಇರಲಿದೆ? 

ಭಾರತದಲ್ಲಿ ಇದರ ಬೆಲೆ ಎಷ್ಟಿರಬಹುದು? ಬನ್ನಿ ನೋಡೋಣ .

{tocify} $title={ವಿಷಯ ಸೂಚಿ}

ಒನ್ ಪ್ಲಸ್ ಫೋನ್ ಎಂದರೆ ಸಾಕು ಸ್ಮಾರ್ಟ್ ಫೋನ್ ಪ್ರಿಯರ ಕನಸಿನ ಫೋನ್ ಅದು. ಯಾಕೆ? ಯಾವಾಗಲೂ "ನೆವರ್ ಸೆಟಲ್" ಅನ್ನೋ ಟ್ಯಾಗ್ ಲೈನ್ ಜೊತೆ ಟಾಪ್ ವಿಶಿಷ್ಟತೆಯ ಜೊತೆ ಬರುವ ಫೋನ್ ಅದು. ಫಾಸ್ಟ್ ಚಾರ್ಜಿಂಗ್, ಒಲ್ ಇಡಿ ಪರದೆ, ಒಪ್ಟಿಕಲ್ ಇಮೇಜ್ ಸ್ಟೆಬಿಲೈಜೇಶನ್ ಇರೋ ಕ್ಯಾಮರಾ, 8ಜಿಬಿ/12ಜಿಬಿ ರಾಮ್  ಹೀಗೆ ಎಲ್ಲಾನೂ ಲಲ್ಲನ್ ಟಾಪ್ !

ಒಂದು ಲ್ಯಾಪ್ ಟಾಪ್ ಅಲ್ಲೇ 4ಜಿಬಿ ರಾಮ್ ಇರುತ್ತಿದ್ದ ಕಾಲದಲ್ಲಿ ಒನ್ ಪ್ಲಸ್ ಫೋನ್ ಅಲ್ಲಿ ೬ಜಿಬಿ ರಾಮ್ ಬರುತ್ತಿತ್ತು!

ಇದು ಎಪಲ್, ಸ್ಯಾಮಸಂಗ್ ಪ್ರಿಮಿಯಂ ಫೋನ್ ಗಳ ಜೊತೆಗೆ ಸ್ಪರ್ಧೆ ನೀಡುತ್ತಿರುವ ಬ್ರ್ಯಾಂಡ್. ಭಾರತದ ಪ್ರಿಮಿಯಂ ಬ್ರ್ಯಾಂಡ್ ಮಾರುಕಟ್ಟೆಯಲ್ಲಿ 15% ಪಾಲು ಹೊಂದಿದೆ! ಎಪಲ್, ಸ್ಯಾಮ್ಸಂಗ್ ಬಿಟ್ಟರೆ ಇದೇ ಬ್ರ್ಯಾಂಡ್!

ಒನ್ ಪ್ಲಸ್ ಚೀನಾದ ಬಿಬಿಕೆ ಇಲೆಕ್ಟ್ರಾನಿಕ್ಸ್ ಕಂಪನಿಯ ಬ್ರ್ಯಾಂಡ್. ಒನ್ ಪ್ಲಸ್ ಜೊತೆ ವಿವೋ (Vivo), ರಿಯಲ್ ಮಿ (Realme), ಒಪ್ಪೋ (Oppo), ಐಕ್ಯೂ (iQOO) ಎಂಬ ಬ್ರ್ಯಾಂಡ್ ಗಳು ಸಹ ಅವರದ್ದೇ ಆಗಿವೆ. 

ಇತ್ತೀಚೆಗೆ ಒಪ್ಪೋ ಟೀಂ ಜೊತೆ ಒನ್ ಪ್ಲಸ್ ರೀಸರ್ಚ್ ಟೀಂ ಅನ್ನು ಒಟ್ಟಿಗೆ ಮಾಡಲಾಯ್ತು. ಒಪ್ಪೋ ಹಾಗೂ ಒನ್ ಪ್ಲಸ್ ಇನ್ನು ಮುಂದೆ ಒಂದೇ ರೀಸರ್ಚ್ ಟೀಂ ಮೂಲಕ ವಿನ್ಯಾಸ ಗೊಳ್ಳಲಿದೆ. 

ಒನ್ ಪ್ಲಸ್ 10 ಪ್ರೋ ಬೆಲೆ ಎಷ್ಟು?

ಚೀನಾದಲ್ಲಿ ಇದರ ಆರಂಭಿಕ ಬೆಲೆ 4699 ಚೀನಾ ಕರೆನ್ಸಿ ಇದೆ. ಅಂದ್ರೆ ಸುಮಾರು 54940 ರೂ.

ಭಾರತದ ಬೆಲೆ ಎಷ್ಟು ಎಂದು ಕಂಪನಿ ಇನ್ನೂ ತಿಳಿಸಿಲ್ಲ.

ಆದರೆ ಭಾರತದಲ್ಲಿ ಇದರ ಎಂಆರ್ ಪಿ ಬೆಲೆ ಸುಮಾರು 65 ಸಾವಿರದ ಹತ್ತಿರ ಇರ ಬಹುದು . ಜಾಸ್ತಿ ರಾಮ್, ಸ್ಟೋರೇಜ್ ಗೆ ಇನ್ನೂ ನಾಲ್ಕೈದು ಸಾವಿರ ಹೆಚ್ಚು ಬೆಲೆ ನೀಡ ಬೇಕು. 

ಯಾಕೆ ಅಂತೀರಾ? ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಒನ್ ಪ್ಲಸ್ 9 ಪ್ರೋ 8ಜಿಬಿ ಬೆಲೆ 64 ಸಾವಿರ ರೂ ಅಮೇಜಾನ್ ಅಲ್ಲಿದೆ. ಇನ್ನು ಒನ್ ಪ್ಲಸ್ 9 ಪ್ರೋ 12ಜಿಬಿ  ಕೂಡಾ 70 ಸಾವಿರ ರೂ. ಅದಕ್ಕಿಂತ ಜಾಸ್ತಿ ವಿಶಿಷ್ಟತೆ ಇರುವ ಒನ್ ಪ್ಲಸ್ 10 ಪ್ರೋ ಅಷ್ಟೇ ಬೆಲೆ ಅಥವಾ ಅದಕ್ಕಿಂತ ಜಾಸ್ತಿ ಇರುವ ಸಾಧ್ಯತೆ ಇದೆ. ಕಾದು ನೋಡೋಣ.

ಇದು ತುಂಬಾ ಜಾಸ್ತಿ ಅಂತೀರಾ? ಇದು ಸ್ಪರ್ಧೆ ಮಾಡ್ತಾ ಇರೋದು ಸುಮಾರು ೧.೪ ಲಕ್ಷ ಬೆಲೆ ಇರುವ ಎಪಲ್ 13 ಮ್ಯಾಕ್ಸ್ ಪ್ರೋ ಅಂತಹ ಫೋನ್ ಜೊತೆಗೆ. ಈಗ ಕಡಿಮೆ ಬೆಲೆ ಅನ್ನಿಸ್ತಾ ಇದೆಯಾ?

ಒನ್ ಪ್ಲಸ್ 9 ಪ್ರೋ 8ಜಿಬಿ ಅಥವಾ ಒನ್ ಪ್ಲಸ್ 9 ಪ್ರೋ 12ಜಿಬಿ  ಖರೀದಿಸುವ ಪ್ಲ್ಯಾನ್ ಇದ್ದರೆ ಒನ್ ಪ್ಲಸ್ ೧೦ ಪ್ರೋ ರಿಲೀಸ್ ಆಗೊವರೆಗೆ ವೇಟ್ ಮಾಡಿದ್ರೆ ಅವುಗಳ ಬೆಲೆ ಆಗ ಕಡಿಮೆ ಆಗುತ್ತೆ!

ಒನ್ ಪ್ಲಸ್ 10 ಪ್ರೋ ಭಾರತದಲ್ಲಿ ಯಾವಾಗ?

ಜನವರಿ 11ರಂದು ಚೀನಾದಲ್ಲಿ ಬಿಡುಗಡೆ ಆದ ಒನ್ ಪ್ಲಸ್ ೧೦ ಪ್ರೋ ಭಾರತದಲ್ಲಿ ಮಾರ್ಚ್ 15 ಕ್ಕೆ ಬಿಡುಗಡೆ ಆಗುವ ಮಾತಿದೆ.

ಅದಕ್ಕೆ ಮುಖ್ಯ ಕಾರಣ ಚೀನಾದ ಮಾರ್ಕೆಟ್ ಅಲ್ಲಿ 2 ತಿಂಗಳು ಎಕ್ಸ್ಲೂಸಿವ್ ಆಗಿ ಬಿಡುಗಡೆ ಮಾಡಿ ನಂತರ ಜಾಗತಿಕ ಮಾರುಕಟ್ಟೆಗೆ ಬಿಡುವ ಕಂಪನಿ ನಿರ್ಧಾರ. 

ಅಷ್ಟೇ ಅಲ್ಲ ಒನ್  ಪ್ಲಸ್ 9ಆರ್ ಟಿ ಅಕ್ಟೋಬರ್ 2021ರ ಬದಲು ಜನವರಿ 14 2022 ರಂದು ಬಿಡುಗಡೆ ಆಯ್ತು. ಅದು ಕೂಡಾ ಬಿಡುಗಡೆಯ ಸಮಯದ ಮೇಲೆ ಪ್ರಭಾವ ಬೀರಬಹುದು. ಆ ಮೊಡೆಲ್ ಗೆ ಸ್ವಲ್ಪ ಮಾರುಕಟ್ಟೆಯಲ್ಲಿ ಸಮಯ ನೀಡುವ ಉದ್ದೇಶದಿಂದ ಮಾರ್ಚ್ ಬದಲು ಎಪ್ರಿಲ್ / ಮೇ ಅಲ್ಲಿ ಬಿಡುಗಡೆ ಮಾಡಿದ್ರೂ ಅಚ್ಚರಿ ಇಲ್ಲ!

ಆಕಾರ

ಉದ್ದ 163ಎಂಎಂ * ಅಗಲ 73.9ಎಂಎಂ * ದಪ್ಪ 8.55ಎಂಎಂ, ಭಾರ 200 ಗ್ರಾಂ

ಆಪರೇಟಿಂಗ್ ಸಿಸ್ಟೆಮ್ ಯಾವುದು?

ಚೀನಾದ ಮಾಡೆಲ್ ಅಲ್ಲಿ ಕಲರ್ ಒಎಸ್ ೧೨ ಇದೆ.  ಆದ್ರೆ ಉಳಿದ ದೇಶಗಳಲ್ಲಿ ಅಂಡ್ರಾಯಿಡ್ 12 ಆಧಾರಿತ ಆಕ್ಸಿಜನ್ ಒಎಸ್ 12 ಇರಲಿದೆ. ಒಪ್ಪೋ ಹಾಗೂ ಒನ್ ಪ್ಲಸ್ ಟೀಂ ಒಟ್ಟಿಗೆ ಮಾಡಿದ ಮೇಲೆ ಒಎಸ್ ನಲ್ಲಿ ಕೆಲವು ಬದಲಾವಣೆ ಆಗಲಿದೆ. ಏನು ಎಂಬುದು ಕಾದು ನೋಡಬೇಕು.

ಪ್ರಾಸೆಸರ್ ಯಾವುದು?

ಸ್ನ್ಯಾಪ್ ಡ್ರಾಗನ್ 8 ಜೆನರೇಶನ್ 1 ಎಂಬ ಕ್ವಾಲ್ ಕಾಂ ಅವರ 4 ನ್ಯಾನೋ ಮೀಟರ್ ತಂತ್ರಜ್ಞಾನ ಬಳಸುವ ಎಂಟು ಕೋರ್ ನ್ ಫ್ಲ್ಯಾಗ್ ಶಿಪ್ ಪ್ರಾಸೆಸರ್ ಇರಲಿದೆ.

ಪರದೆ

3216 * 1440 ರಿಸಾಲ್ಯೂಶನ್ ಹೊಂದಿರುವ 120ಹರ್ಟ್ಜ್ ರಿಫ್ರೆಶ್ ರೇಟ್ ಅಮೋಲ್ಡ್(AMOLED) 6.7ಇಂಚಿನ ಪರದೆ ಇರಲಿದೆ. 526ಪಿಪಿಐ, 1300 ನಿಟ್ಸ್ ವರೆಗಿನ ಬ್ರೈಟ್ನೆಸ್ ಸಾಮರ್ಥ್ಯ ಈ ಪರದೆ ಹೊಂದಿರಲಿದೆ. 

ರಾಮ್ ಮತ್ತು ಸ್ಟೋರೇಜ್

8ಜಿಬಿ ಹಾಗೂ 12ಜಿಬಿ ರಾಮ್ ಇರುವ ಎರಡು ಮಾಡೆಲ್ ಇರಲಿದೆ. ಸ್ಟೋರೇಜ್ ಅಲ್ಲೂ 128ಜಿಬಿ ಹಾಗೂ 256 ಜಿಬಿ ಆಯ್ಕೆ ಇದ್ದು ಈ ಫೋನ್ ಅಲ್ಲಿ ಬೇರೆ ಎಸ್ ಡಿ ಕಾರ್ಡ್ ಹಾಕಲು ಸೌಲಭ್ಯ ಇಲ್ಲ. ಸ್ಟೋರೇಜ್ ಯು ಎಫ್ ಎಸ್ 3.1 ಮಾಡೆಲ್ ಆಗಿದೆ.

ಸಂಪರ್ಕ

ಡ್ಯೂಯಲ್ ನಾನೋ ಸಿಮ್, ವೈಫೈ 6, 5ಜಿ / 4ಜಿ, ಬ್ಲ್ಯೂ ಟೂತ್ 5.2, ಡ್ಯುಯಲ್ ಬ್ಯಾಂಡ್ ಜಿಪಿಎಸ್, ಯುಎಸ್ ಬಿ ಟೈಪ್ ಸಿ ಪೋರ್ಟ್

ಬ್ಯಾಟರಿ

5000 ಎಂ ಎ ಎಚ್ ಬ್ಯಾಟರಿ, 80W ಸೂಪರ್ ಫಾಸ್ಟ್ ಚಾರ್ಜಿಂಗ್, 50W ವೈರ್ ಲೆಸ್ ಚಾರ್ಜಿಂಗ್ ಇರಲಿದೆ.

ಕ್ಯಾಮೆರಾ


ಹಿಂದೆ ಈ ಕೆಳಗಿನ ಮೂರು ಕ್ಯಾಮೆರಾ ಇರಲಿದೆ. ಇವು ಹ್ಯಾಸೆಲ್ ಬ್ಲೇಡ್ ಜೊತೆ ಸಹಯೋಗದಲ್ಲಿ ಮಾಡಲ್ಪಟ್ಟ ಕ್ಯಾಮೆರಾಗಳು. 8ಕೆ ವಿಡಿಯೋ, ೪ಕೆ ವಿಡಿಯೋ ರೆಕಾರ್ಡಿಂಗ್ ಎಲ್ಲಾ ಸಾಧ್ಯ!
 • ಸೋನಿ ಐಎಂಎಕ್ಸ್ 789 ಸೆನ್ಸರ್ 48ಎಂಪಿ ಒಪ್ಟಿಕಲ್ ಇಮೇಜ್ ಸ್ಟೆಬಿಲೈಜರ್, ಎಫ್/1.8 ಅಪರ್ಚರ್
 • ಸ್ಯಾಮ್ಸಂಗ್ ಜೆ ಎನ್೧ ಸೆನ್ಸರ್ 50ಎಂಪಿ 150ಡಿಗ್ರೀ ಅಲ್ಟ್ರಾ ವೈಡ್
 • 8 ಎಂಪಿ ಟೆಲೆಫೋಟೋ ಕ್ಯಾಮೆರಾ ಎಫ್/2.4 ಅಪರ್ಚರ್, ಒಪ್ಟಿಕಲ್ ಇಮೇಜ್ ಸ್ಟೆಬಿಲೈಜರ್, 3.3x ಆಪ್ಟಿಕಲ್ ಝೂಮ್
ಮುಂದೆ 32 ಎಂಪಿ ಸೆಲ್ಫಿ ಕ್ಯಾಮೆರಾ ಇರಲಿದೆ.

ಕ್ಯಾಮೆರಾ 10 ಬಿಟ್ ಹಾಗೂ 12 ಬಿಟ್ ರಾ ಫಾರ್ಮಾಟ್ ಅಲ್ಲಿ ಚಿತ್ರ ಉಳಿಸುವ ಸಾಮರ್ಥ್ಯ ಇದ್ದು ೧ ಬಿಲಿಯನ್ ಬಣ್ಣಗಳ ಸಪೋರ್ಟ್ ಇದೆ.

ಆಡಿಯೋ

ಸ್ಟಿರೀಯೋ ಸ್ಪೀಕರ್, ಎರಡು ಮೈಕ್ರೋಫೋನ್, ಗದ್ದಲ ಕಡಿಮೆ ಮಾಡುವ ಮೈಕ್ರೋ ಫೋನ್ ಇದೆ. ಆದರೆ 3.5ಎಂಎಂ ಆಡಿಯೋ ಜ್ಯಾಕ್ ಇರುವದಿಲ್ಲ. ಅಡಾಪ್ಟರ್ ಬಳಸಬೇಕು.

ಕೊನೆ ಮಾತುಪ್ರಿಮಿಯಂ ಫೋನ್ ಮಾರ್ಕೆಟ್ ಶೇರ್ ಅಲ್ಲಿ ಎಪಲ್, ಸ್ಯಾಮ್ಸಂಗ್ ನಂತರ ಹೆಚ್ಚು ಪಾಲು ಹೊಂದಿರುವ ಬ್ರ್ಯಾಂಡ್ ಒನ್ ಪ್ಲಸ್.

ಒಟ್ಟಿನಲ್ಲಿ ಒನ್ ಪ್ಲಸ್ 10 ಪ್ರೋ ಫ್ಲ್ಯಾಗ್ ಶಿಪ್ ಫೋನ್ ಮಾರ್ಚ್ 11 ನಂತರ ಜೂನ್ 2022ರ ಒಳಗೆ ಭಾರತದ ಮಾರುಕಟ್ಟೆ ಲಗ್ಗೆ ಹಾಕಲಿದೆ.  ವೇಗದ ಪ್ರಾಸೆಸರ್, 5ಜಿ, ಅದ್ಭುತ ಕ್ಯಾಮೆರಾ, ಉತ್ತಮ ಪರದೆ ಹೊಂದಿರುವ ಫೋನ್ ಮಾರುಕಟ್ಟೆಯಲ್ಲಿ ದೂಳೆಬ್ಬಿಸುವದರಲ್ಲಿ ಅನುಮಾನವೇ ಇಲ್ಲ.

ನೀವು ಒನ್ ಪ್ಲಸ್ ಫೋನ್ ಬಳಸಿದ್ದೀರಾ? ನಿಮ್ಮ ಅನುಭವ ಏನು? ನೀವು ಯಾವ ಫೋನ್ ಬ್ರ್ಯಾಂಡ್ ಅಭಿಮಾನಿ? ಕಮೆಂಟ್ ಅಲ್ಲಿ ತಿಳಿಸಿ.

ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

ಮಾಹಿತಿ ಮೂಲ: ಒನ್ ಪ್ಲಸ್ ತಾಣ

ಕ್ಲೌಡ್ ಕಂಪ್ಯೂಟಿಂಗ್ ಏನಿದರ ಒಳಗುಟ್ಟು?

ಹೀಗೊಮ್ಮೆ ಕಲ್ಪನೆ ಮಾಡಿ. ನೀವು 2 ಟೆರ್ರಾ ಬೈಟ್ ಎಕ್ಸ್ಟರ್ನಲ್ ಹಾರ್ಡಡಿಸ್ಕ್ ಖರೀದಿ ಮಾಡುವ ಬದಲಾಗಿ ಅಂತರ್ಜಾಲದ ಮೂಲಕ 2 ಟೆರ್ರಾ ಬೈಟ್ ಸ್ಟೋರೇಜ್ ಖರೀದಿ ಮಾಡಿ ಅಲ್ಲಿ ನಿಮ್ಮ ಫೋಟೋ ವಿಡಿಯೋ ಎಲ್ಲ ಉಳಿಸುವಂತಾದರೆ? 

ಹಾರ್ಡ್ ಡಿಸ್ಕ್ ನಿಮ್ಮ ಕಂಪ್ಯೂಟರ್ ಗೆ ಪ್ಲಗ್ಗಿನ್ ಮಾಡುವ ಚಿಂತೆ ಇಲ್ಲ. ಎಲ್ಲಿ ಬ್ಯಾಡ್ ಕ್ಲಸ್ಟರ್ ಅಥವಾ ಒಳಗಿನ ಸರ್ಕ್ಯೂಟ್ ಸುಟ್ಟು ಹಾಳಾಗುವ ಹೆದರಿಕೆ ಇಲ್ಲ. ಕಾಲ ಕಾಲಕ್ಕೆ ಹೊಸ ಹಾರ್ಡ್ ಡಿಸ್ಕ್ ಖರೀದಿಸಿ ಅದಕ್ಕೆ ಕಾಪಿ ಮಾಡುತ್ತಾ ಕೂರ ಬೇಕಿಲ್ಲ. 

ಪ್ರತಿ ವರ್ಷ ಬಾಡಿಗೆ ಕಟ್ಟುತ್ತಿದ್ದರಾಯ್ತು. ಯಾವಾಗ ಬೇಕಾದರೂ ಇನ್ನೂ ಬರಿ 2 ಅಲ್ಲ 200 ಟೆರ್ರಾ ಬೈಟ್ ಸ್ಟೋರೇಜ್ ಬೇಕಿದ್ದರೂ ಖರೀದಿ ಮಾಡಿ ಬಳಸಬಹುದು. ಅಷ್ಟು ಜಾಸ್ತಿ ಮೆಮರಿಗಾಗಿ ದೊಡ್ಡ ಸ್ಟೋರೇಜ್ ಖರೀದಿಸಿ ಅದಕ್ಕೆ ತಡೆರಹಿತ ವಿದ್ಯುತ್ ಕೊಟ್ಟು ಮೆಂಟೆನನ್ಸ್ ಮಾಡಬೇಕಿಲ್ಲ. ಅಥವಾ 4-5 ಹಾರ್ಡ್ ಡಿಸ್ಕ್ ಖರೀದಿ ಮಾಡಿ ಅವುಗಳ ನಡುವೆ ಬದಲಾವಣೆ ಮಾಡುತ್ತಾ ಕೂರ ಬೇಕಿಲ್ಲ.

ಒಳ್ಳೆ ಚಿಂತನೆ ಅಲ್ವಾ? ನೀವು ಗೂಗಲ್ ಡ್ರೈವ್ ಬಳಸಿದ್ದೀರಾ? ಒನ್ ಡ್ರೈವ್? ಡ್ರಾಪ್ ಬಾಕ್ಸ್? ಐ ಕ್ಲೌಡ್?

ಬಹುಶಃ ನಿಮ್ಮ ಸ್ಮಾರ್ಟ್ ಫೋನ್ ಅಲ್ಲಿ ಫೋಟೋ, ವಿಡಿಯೋ ಬ್ಯಾಕ್ ಅಪ್ ಉಳಿಸಲು ಇದರ ಉಚಿತ ವರ್ಶನ್ ಬಳಸಿರುವ ಸಾಧ್ಯತೆ ಇದೆ. ನಿಮ್ಮ ಫೋನ್ ಕಳುವಾದರೂ ಅಥವಾ ಬಿದ್ದು ಹಾಳಾದರೂ ನಿಮ್ಮ ಮಾಹಿತಿ ಅಲ್ಲಿ ಸುರಕ್ಷಿತ ಆಗಿರುತ್ತದೆ. ಅಲ್ವಾ?

ಇವೆಲ್ಲ ಕ್ಲೌಡ್ ಸ್ಟೋರೇಜ್ ಸೇವೆಗಳು! ಅಂತರ್ಜಾಲದ ಮೂಲಕ ಸ್ಟೋರೇಜ್ ಸೇವೆ ನೀಡುತ್ತವೆ. 

ಇದೇ ಮಾದರಿಯಲ್ಲಿ ಸರ್ವರ್ ಗಳು, ವರ್ಚುವಲ್ ಮಶೀನುಗಳು, ಡಾಟಾ ಬೇಸ್, ಸಾಫ್ಟವೇರ್ ಗಳು ಸಹ ಲಭ್ಯ ಇದೆ. ಹೀಗೆ ಕಂಪ್ಯೂಟರ್ ಹಾರ್ಡವೇರ್ ಅಥವಾ ಸಾಫ್ಟವೇರ್ ಸೇವೆ ಬಾಡಿಗೆಗೆ ತೆಗೆದುಕೊಂಡು ಇಂಟರ್ನೆಟ್ ಮೂಲಕ ಬಳಸುವದಕ್ಕೆ ಕ್ಲೌಡ್ ಕಂಪ್ಯೂಟಿಂಗ್ ಎನ್ನಬಹುದು.

ಉದಾಹರಣೆಗೆ ಅಡೋಬೆ ಕ್ರಿಯೇಟಿವ್ ಕ್ಲೌಡ್ ಮೂಲಕ ಫೋಟೋ ಶಾಪ್, ಪ್ರಿಮಿಯರ್ ಹೀಗೆ ಹಲವು ಎಪ್ ಪಡೆಯಬಹುದು. ಅದೂ ಕೂಡಾ ಕ್ಲೌಡ್ ಕಂಪ್ಯೂಟಿಂಗ್!

ಕ್ಲೌಡ್ ಕಂಪ್ಯೂಟಿಂಗ್ ಎಂದರೆ ಬೇಡಿಕೆಗೆ ಅನುಗುಣವಾಗಿ ಕಂಪ್ಯೂಟರ್ ನ ವಿವಿಧ ಸೇವೆಯನ್ನು ಅಂತರ್ಜಾಲದ(ಇಂಟರ್ನೆಟ್ ನ) ಮೂಲಕ ಪಡೆದು ಬಳಸುವದು. ಆ ಸೇವೆ ಸರ್ವರ್, ಡಾಟಾಬೇಸ್, ಸ್ಟೋರೇಜ್, ಸಾಫ್ಟವೇರ್, ಮಾಹಿತಿ ಪ್ರಾಸೆಸಿಂಗ್, ಕೃತಕ ಬುದ್ಧಿಮತ್ತೆ(ಆರ್ಟಿಫಿಶಿಯಲ್ ಇಂಟೆಲಿಜೆನ್ಸ್),  ಮಾಹಿತಿ ವಿಶ್ಲೇಷಣೆ ಹೀಗೆ ಯಾವುದೇ ಕಂಪ್ಯೂಟರ್ ಸೇವೆ ಇರಬಹುದು. ಇವೆಲ್ಲವನ್ನು ಕ್ಲೌಡ್ ಕಂಪ್ಯೂಟಿಂಗ್ ಮೂಲಕ ಪಡೆಯಬಹುದು. 

ಇಲ್ಲಿ ಹಾರ್ಡವೇರ್ ಖರೀದಿ ಮಾಡಿ ಸಾಫ್ಟವೇರ್ ಇನ್ಸ್ಟಾಲ್ ಮಾಡಿ ಮೆಂಟೆನನ್ಸ್ ಮಾಡುವ ತಲೆ ಬಿಸಿ ಎಲ್ಲ ಕ್ಲೌಡ್ ಪ್ರೊವೈಡರ್ ದು. ನಿಮಗೆ ಬೇಕಾದಾಗ ಬಳಸಿ ಬಳಸಿದಷ್ಟಕ್ಕೆ ಬಾಡಿಗೆ ಹಣ ಕೊಟ್ಟರೆ ಆಯ್ತು. ನಿಮಗೆ ಸೇವೆ ಜಾಸ್ತಿ ಬೇಕಾದಾಗ ಜಾಸ್ತಿ ಬಳಸಿ. ಕಡಿಮೆ ಬೇಕಾದಾಗ ಕಡಿಮೆ ಬಳಸಿ. ಅಷ್ಟೇ. 

ಚಿತ್ರಕೃಪೆ: Mudassar Iqbal from Pixabay

{tocify} $title={ವಿಷಯ ಸೂಚಿ}

ಕ್ಲೌಡ್ ಕಂಪ್ಯೂಟಿಂಗ್ ನ ಮುಖ್ಯ ಲಾಭ ಎಂದರೆ 

 • ಖರ್ಚು ಕಡಿಮೆ
 • ನಿಮಗೆ ಎಷ್ಟು ಬೇಕೋ ಅಷ್ಟೇ ಬಳಸಿ ಅಷ್ಟಕ್ಕೆ ಹಣ ಕೊಟ್ಟರೆ ಸಾಕು.
 • ನೀವು ಯಾವುದೇ ಸರ್ವರ್, ಇಂಟರ್ನೆಟ್ ಬ್ಯಾಂಡ್ ವಿಡ್ತ್, ಪವರ್ ಬ್ಯಾಕಪ್, ಕೂಲಿಂಗ್ ಎಸಿ ಇತ್ಯಾದಿ ಖರೀದಿಸಿ ಮೆಂಟೇನ್ (ನಿರ್ವಹಣೆ) ಮಾಡಬೇಕಿಲ್ಲ. ಎಲ್ಲ ಕ್ಲೌಡ್ ಪ್ರೊವೈಡರ್ ನೋಡಿಕೊಳ್ಳುತ್ತಾನೆ.
 • ಅತಿ ಕಡಿಮೆ ಸಮಯದಲ್ಲಿ ಸ್ಕೇಲ್ ಅಪ್ ಹಾಗೂ ಡೌನ್ ಮಾಡಬಹುದು. 

ಜನಪ್ರಿಯ ಪಬ್ಲಿಕ್ ಕ್ಲೌಡ್ ಇನ್ಸ್ಪ್ರಾಸ್ಟ್ರಕ್ಚರ್ ಸೇವೆಗಳು

 • ಅಮೆಜಾನ್ ವೆಬ್ ಸರ್ವೀಸ್ (ಎ ಡಬ್ಲ್ಯೂ ಎಸ್ /  AWS)
 • ಮೈಕ್ರೊಸಾಫ್ಟ್ ಅಝ್ಯುರ್ (Azure)
 • ಗೂಗಲ್ ಕ್ಲೌಡ್ ಪ್ಲಾಟ್ ಪಾರ್ಮ್ (ಜಿಸಿಪಿ / GCP)
 • ರೆಡ್ ಹ್ಯಾಟ್ ಒಪನ್ ಶಿಫ್ಟ್
 • ಸೇಲ್ಸ್ ಫೋರ್ಸ್
 • ಅಲಿಬಾಬಾ ಕ್ಲೌಡ್

ಕ್ಲೌಡ್ ಕಂಪ್ಯೂಟಿಂಗ್ ಗೆ ಕ್ಲೌಡ್ ಅಂತಾ ಯಾಕೆ ಕರೀತಾರೆ?


ಚಿತ್ರಕೃಪೆ: Wynn Pointaux ಇಂದ Pixabay

ಕ್ಲೌಡ್ ಎಂದರೆ ಇಂಗ್ಲಿಷ್ ಅಲ್ಲಿ ಮೋಡ. ಅಲ್ಲ ಈ ಮೋಡಕ್ಕೂ ಈ ಇಂಟರ್ನೆಟ್ ಸೇವೆಗಳಿಗೆ ಏನು ಸಂಬಂಧ? ಯಾಕೆ ಹಾಗೆ ಕರೀತಾರೆ?

ಮೊದ ಮೊದಲು ಇಂಟರ್ನೆಟ್ ಆರಂಭ ಆದಾಗ ಟೆಕ್ನಿಕಲ್ ಡೈಗ್ರಾಮ್ ಗಳಲ್ಲಿ ಇಂಟರ್ನೆಟ್ ಸರ್ವರ್ ಹಾಗೂ ನೆಟವರ್ಕ್ ಮೂಲ ಸೌಕರ್ಯಗಳನ್ನು ಮೋಡದ ಚಿತ್ರ ಅಂದ್ರೆ ಕ್ಲೌಡ್ ಚಿತ್ರದ ಮೂಲಕ ಸೂಚಿಸಲಾಗುತ್ತಿತ್ತು. ಹೆಚ್ಚು ಹೆಚ್ಚು ಕಂಪ್ಯೂಟಿಂಗ್ ಇಂಟರ್ನೆಟ್ ಗೆ ಸ್ಥಾನ ಪಲ್ಲಟ ಆದ ಹಾಗೆ ಸ್ವಾಭಾವಿಕವಾಗಿ ತಂತ್ರಜ್ಞಾನ ಚರ್ಚೆ ಗಳಲ್ಲಿ ಕ್ಲೌಡ್ ಗೆ ಮೂವ್ ಮಾಡ್ತಿವಿ ಅಂತಾ ಸಂಕ್ಷಿಪ್ತವಾಗಿ ಹೇಳೋದು ರೂಢಿ ಆಯ್ತು.

ಇದು ಕೇವಲ ಆ ಡೈಗ್ರಾಮ್ ಅಲ್ಲಿ ಇಂಟರ್ನೆಟ್ ಗೆ ಸಾಂಕೇತಿಕವಾಗಿ ಬಳಸಿದ ಮೋಡದ ಚಿತ್ರಕ್ಕೆ ಹೋಲಿಕೆ ಮಾಡಿ ಬಂದ ಹೆಸರೇ ಹೊರತು ಮೋಡಕ್ಕೂ ಅರ್ಥಾತ್ ಕ್ಲೌಡ್ ಗೂ ಕ್ಲೌಡ್ ಕಂಪ್ಯೂಟಿಂಗ್ ಗೂ ಇನ್ನಾವ ಸಂಬಂಧ ಇಲ್ಲ!

ಕ್ರಮೇಣ ಈ ಅಂತರ್ಜಾಲದಲ್ಲಿ ಲಭ್ಯವಾದ ಎಲ್ಲ ಕಂಪ್ಯೂಟಿಂಗ್ ಸೇವೆಗೆ ಕ್ಲೌಡ್ ಅಂತಾನೇ ಕರೆಯಲ್ಪಟ್ಟಿತು. 

ಕ್ಲೌಡ್ ಕಂಪ್ಯೂಟಿಂಗ್ ವಿಧಗಳು


1. ಪಬ್ಲಿಕ್ ಕ್ಲೌಡ್

ಪಬ್ಲಿಕ್ ಕ್ಲೌಡ್ ಅಂದರೆ ಸಾರ್ವಜನಿಕ ಕ್ಲೌಡ್ ಸೇವೆಯನ್ನು ಅನೇಕ ಕಂಪನಿಗಳು ಒದಗಿಸುತ್ತವೆ. ಎಲ್ಲವನ್ನೂ ಆ ಕಂಪನಿಗಳೇ ನೋಡಿಕೊಳ್ಳುತ್ತವೆ. ಬಳಸುವವರು ಕ್ರೋಮ್, ಎಡ್ಜ್, ಸಫಾರಿಯಂತಹ ವೆಬ್ ಬ್ರೌಸರ್ ಬಳಸಿ ಈ ಸೇವೆಯನ್ನು ಪಡೆದು ಅವುಗಳನ್ನು ಮ್ಯಾನೇಜ್ ಕೂಡಾ ಮಾಡಬಹುದು. 

ಇಲ್ಲಿ ಡಾಟಾ ಸೆಂಟರ್ ಗಳು ಸಾರ್ವಜನಿಕ ಬಳಕೆದಾರರ ನಡುವೆ ಶೇರ್ ಮಾಡಲ್ಪಡುತ್ತದೆ.

ಉದಾ: ಎ ಡಬ್ಲ್ಯೂ ಎಸ್, ಅಝ್ಯೂರ್, ಜಿಸಿಪಿ. ಸೇಲ್ಸ್ ಫೋರ್ಸ್

2. ಪ್ರೈವೇಟ್ ಕ್ಲೌಡ್

ಸಾಮಾನ್ಯವಾಗಿ ಪ್ರೈವೇಟ್ ಕ್ಲೌಡ್ ಒಂದು ಕಂಪನಿಗೆ ಸೀಮಿತವಾಗಿದ್ದು ಅವರದ್ದೇ ಆದ ಡಾಟಾಸೆಂಟರ್ ಅಲ್ಲಿ ಹೋಸ್ಟ್ ಮಾಡಲಾಗಿರುತ್ತದೆ. ಕೆಲವೊಮ್ಮೆ ನಿಮ್ಮ ಕಂಪನಿಯು ಬೇರೆ ಕಂಪನಿಗೆ ಅವರ ಡಾಟಾ ಸೆಂಟರ್ ಅಲ್ಲಿ ಪ್ರೈವೇಟ್ ಕ್ಲೌಡ್ ಹೋಸ್ಟ್ ಮಾಡಲು ಹಣ ನೀಡಿರಲೂ ಬಹುದು. 

ಆದರೆ ಅದು ಕೇವಲ ನಿಮ್ಮ ಕಂಪನಿಯ ಪ್ರೈವೇಟ್ ನೆಟ್ ವರ್ಕ್ ಅಲ್ಲಿ ಮಾತ್ರ ಲಭ್ಯ ಇರುತ್ತದೆ. ಹಾಗೂ ಆ ಡಾಟಾ ಸೆಂಟರ್ ನಿಮ್ಮ ಕಂಪನಿ ಮಾತ್ರ ಬಳಸುತ್ತದೆ. ಬೇರೆಯವರು ಬಳಸುವಂತಿಲ್ಲ.

3. ಹೈಬ್ರಿಡ್ ಕ್ಲೌಡ್

ಪಬ್ಲಿಕ್ ಕ್ಲೌಡ್ ಹಾಗೂ ಪ್ರೈವೇಟ್ ಕ್ಲೌಡ್ ಎರಡರ ನಡುವೆ ಮಾಹಿತಿ ಹಾಗೂ ಅಪ್ಲಿಕೇಷನ್ ಹಂಚಲು ಅವಕಾಶ ಮಾಡಿ ಕೊಡುವ ತಂತ್ರಜ್ಞಾನಕ್ಕೆ ಹೈಬ್ರಿಡ್ ಕ್ಲೌಡ್ ಎನ್ನುತ್ತಾರೆ. 

ಇಲ್ಲಿ ಎರಡೂ ರೀತಿಯ ಕ್ಲೌಡ್ ಬಳಕೆ ಮಾಡಿ ಹೆಚ್ಚಿನ ಸುರಕ್ಷತೆ ಹಾಗೂ ಈಗಾಗಲೇ ನಿಮ್ಮ ಕಂಪನಿ ಬಳಿ ಇರುವ ಹಾರ್ಡವೇರ್ ಬಳಕೆ ಕೂಡಾ ಸಾಧ್ಯವಾಗುತ್ತದೆ.

ಕ್ಲೌಡ್ ಕಂಪ್ಯೂಟಿಂಗ್ ನ ಅನುಕೂಲತೆಗಳೇನು? 

ಅನುಕೂಲ ೧: ಮೊದಲು ಬೇಕಾಗುವ ಬಂಡವಾಳ ಕಡಿಮೆ

ನೀವು ಹಾರ್ಡವೇರ್ ಆದ ಸರ್ವರ್ ಗಳನ್ನು ಅಥವಾ ಸಾಫ್ಟವೇರ್ ಗಳನ್ನು ಖರೀದಿ ಮಾಡಬೇಕಿಲ್ಲ. ನಿಮ್ಮ ಜಾಗದಲ್ಲಿ ಡಾಟಾ ಸೆಂಟರ್ ಗಳನ್ನು ಸಜ್ಜು ಗೊಳಿಸಿ ಅವನ್ನು ನಡೆಸಬೇಕಿಲ್ಲ. 

ಒಂದು ಡಾಟಾ ಸೆಂಟರ್ ಅಂದ್ರೆ ಸರ್ವರ್ ಗಳು, ಅವುಗಳಿಗೆ ತಡೆರಹಿತವಾದ ವಿದ್ಯುತ್ ನೀಡಲು ಯುಪಿಎಸ್ ಸೌಲಭ್ಯ, ಹೈ ಸ್ಪೀಡ್ ಇಂಟರ್ ನೆಟ್ ಸೌಲಭ್ಯ, ಬಿಸಿ ಆಗುವ ಸರ್ವರ್ ಗಳನ್ನು ತಣ್ಣಗೆ ಮಾಡಲು ಎಸಿ ಹಾಗೂ ಕೂಲಿಂಗ್ ಸೌಲಭ್ಯ ಎಲ್ಲ ಬೇಕು. ಅಷ್ಟೇ ಅಲ್ಲ ಅದನ್ನು ನೋಡಿಕೊಂಡು ಹೋಗಲು ಇಂಜಿನಿಯರ್ ಗಳ ದೊಡ್ಡ ಟೀಂ ಬೇಕು. ಇಡಲು ಸುಸಜ್ಜಿತ ಹಾಗೂ ಸುರಕ್ಷಿತ ಬಿಲ್ಡಿಂಗ್ ಬೇಕು. ಎಲ್ಲಕ್ಕೂ ಹಲವು ಕೋಟ್ಯಂತರ ಆರಂಭಿಕ ಬಂಡವಾಳ ಹಾಗೂ ಅಷ್ಟೇ ಅಲ್ಲ ಪ್ರತಿ ವರ್ಷ ಹಲವು ಕೋಟಿ ಮೆಂಟೆನನ್ಸ್ ಗೆ ಬೇಕು. 

ಇವೆಲ್ಲ ಇಲ್ಲದೇ ಕ್ಲೌಡ್ ಕಂಪ್ಯೂಟಿಂಗ್ ಬಳಸಿ ಅದೇ ಸಾಮರ್ಥ್ಯದ ಅಪ್ಲಿಕೇಶನ್ ನಡೆಸಲು ಸಾಧ್ಯ. ಕೇವಲ ಬಳಸಿದ ಸೌಲಭ್ಯಕ್ಕೆ ಹಣ ಸಂದಾಯ ಮಾಡುತ್ತಿದ್ದರೆ ಆಯ್ತು.

ಅನುಕೂಲ ೨: ಖರ್ಚು ಕಡಿಮೆ

ಕ್ಲೌಡ್ ಕಂಪ್ಯೂಟಿಂಗ್ ಸೇವೆ ನೀಡುವ ಕಂಪನಿಗಳು ತಮ್ಮ ಸಾಮರ್ಥ್ಯವನ್ನು ತುಂಬಾ ದೊಡ್ಡ ಮಟ್ಟದಲ್ಲಿ ಸಜ್ಜು ಗೊಳಿಸುವದರಿಂದ ಅವು ಕಡಿಮೆ ಬೆಲೆಗೆ ನೀಡಲು ಸಾಧ್ಯ ಆಗುತ್ತೆ. ಇದರಿಂದ ಬಳಕೆ ಮಾಡುವವರಿಗೆ ಖರ್ಚು ಕಡಿಮೆ.

ಅನುಕೂಲ ೩:  ಬೇಡಿಕೆಗೆ ಅನುಗುಣವಾಗಿ ಬಳಕೆ

ಆಯಾ ಕಾಲಕ್ಕೆ ಎಷ್ಟು ರಾಮ್ ಮೆಮರಿ ಬೇಕು ಅಷ್ಟೇ ಬಳಸಿ. ಸ್ಟೋರೆಜ್, ಸರ್ವರ್ ಎಲ್ಲ ಬೇಕಾದಷ್ಟೇ ಬಳಸಿ ಅಷ್ಟಕ್ಕೆ ಹಣ ಕೊಟ್ಟರೆ ಆಯ್ತು. ವಾರದ ದಿನಗಳಲ್ಲಿ ಜಾಸ್ತಿ ಸರ್ವರ್, ವಾರಾಂತ್ಯದಲ್ಲಿ ಯಾವ ಸರ್ವರ್ ಬಳಸಲ್ವಾ. ಅದೂ ಓಕೆ. ಇದನ್ನು ನಿಮ್ಮ ಡಾಟಾ ಸೆಂಟರ್ ಅಲ್ಲಿ ಮಾಡಲಾಗದು. ಬಳಸಲಿ ಬಿಡಲಿ ಇಡೀ ಡಾಟಾ ಸೆಂಟರ್ ನಡೆಯುತ್ತಲೇ ಇರಬೇಕು. 

ಅನುಕೂಲ ೪: ಸಮಯ ಉಳಿತಾಯ

ನಿಮ್ಮ ಕಂಪನಿಗೆ ಕ್ಲೌಡ್ ಸೇವೆ ಬಳಸಲು ಆರಂಭಿಸಲು ತುಂಬಾ ಸಮಯ ಬೇಡ. ಒಂದು ಬ್ರೌಸರ್ ಬಳಸಿ ಕ್ಲೌಡ್ ಸೇವೆ ಬಳಸಲು ರಿಜಿಸ್ಟರ್ ಮಾಡಿ ಬೇಕಿರುವ ರಿಸೋರ್ಸ್ ವಿವರ ನೀಡಿದರೆ ಸಾಕು ಅರ್ಧ ಗಂಟೆಯಲ್ಲಿ ಬಳಸಲು ಆರಂಭಿಸಬಹುದು. ಅದೇ ಸ್ವಂತ ಡಾಟಾಸೆಂಟರ್ ನಿರ್ಮಾಣಕ್ಕೆ ಹಲವು ತಿಂಗಳ ಪರಿಶ್ರಮ ಬೇಕು.
ಅಷ್ಟೇ ಅಲ್ಲ ಹಾರ್ಡವೇರ್ ಅಪ್ ಗ್ರೇಡ್, ಸಾಫ್ಟವೇರ್ ಅಪ್ ಗ್ರೇಡ್. ಪ್ಯಾಚ್ಸ್ ಅಪ್ಲೈ ಮಾಡೋದಕ್ಕೆ ಸಮಯ ವ್ಯರ್ಥ ಮಾಡಬೇಕಿಲ್ಲ. ಎಲ್ಲ ಕ್ಲೌಡ್ ಕಂಪನಿಗಳೇ ಮಾಡಿ ಬಿಡುತ್ತವೆ. ಈ ಎಲ್ಲ ಸಮಯ ಉಳಿತಾಯ ಆಗುತ್ತೆ.

ಅನುಕೂಲ ೫: ಜಾಸ್ತಿ ವೇಗ

ಕ್ಲೌಡ್ ಕಂಪನಿಗಳು ಕಾಲ ಕಾಲಕ್ಕೆ ಲೇಟೆಸ್ಟ್ ಹಾರ್ಡವೇರ್ ಅಪ್ ಡೇಟ್ ಮಾಡಿ ಅಥವಾ ಹೊಸ ಹೊಸ ಡಾಟಾ ಸೆಂಟರ್ ನಿರ್ಮಿಸಿ ನೀಡುತ್ತಾ ಇರುವದರಿಂದ ವೇಗವಾಗಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ ನೀವು ಎಷ್ಟು ಬೇಕೋ ಅಷ್ಟು ಅಪ್ ಸ್ಕೇಲಿಂಗ್ ಅನ್ನು ಜಾಸ್ತಿ ಸರ್ವರ್, ಡಾಟಾ ಬೇಸ್ ಇತ್ಯಾದಿ ಸೇರಿಸುವದರ ಮೂಲಕ ಮಾಡಬಹುದು.

ಅನುಕೂಲ ೬: ನಂಬಿಕೆಗೆ ಅರ್ಹವಾದುದು

ಕ್ಲೌಡ್ ಸೇವೆ ಕಡಿಮೆ ಬೆಲೆಯದ್ದು ಆದುದರಿಂದ ಕ್ಲೌಡ್ ಅಲ್ಲಿ ಡಾಟಾ (ಮಾಹಿತಿ) ವನ್ನು ಹಲವು ತಾಣಗಳಲ್ಲಿ ಮಿರರ್ ಕಾಪಿ ಮಾಡಿಡಬಹುದು. ಆದ್ದರಿಂದ ಹೆಚ್ಚು ನಂಬಿಕೆಗೆ ಅರ್ಹ. ನಮ್ಮ ಮಾಹಿತಿ ಕಳೆದು ಹೋಗುವ ಅಥವಾ ಕರಪ್ಟ್ ಆಗಿ ಹಾಳಾಗುವ ಭಯ ಇಲ್ಲ.

ಅನುಕೂಲ ೭: ಸುರಕ್ಷತೆ ಸೌಲಭ್ಯಗಳು

ಎಲ್ಲ ಕ್ಲೌಡ್ ಸೌಲಭ್ಯಗಳು ಹಲವು ಸುರಕ್ಷತೆಯ ಫೀಚರ್ ನೀಡುತ್ತವೆ. ಅವನ್ನು ಬಳಸಿ ನಿಮ್ಮ ಮಾಹಿತಿ, ಅಪ್ಲಿಕೇಶನ್ ಎಲ್ಲ ಸುರಕ್ಷತವಾಗಿದ್ದು ದುಷ್ಟರ ಕೈಗೆ ಸಿಗದಂತೆ ರಕ್ಷಿಸಬಹುದು. ಇವೆಲ್ಲವನ್ನು ಕಂಪನಿಗಳು ತಾವೇ ಮಾಡಬೇಕೆಂದರೆ ಜಾಸ್ತಿ ಬಂಡವಾಳ ಬೇಕು.

ಕ್ಲೌಡ್ ಕಂಪ್ಯೂಟಿಂಗ್ ನ ಎಲ್ಲೆಲ್ಲಿ ಬಳಸುತ್ತಾರೆ?

ಬಳಕೆ ೧: ಕ್ಲೌಡ್ ನೇಟಿವ್ ಅಪ್ಲಿಕೇಶನ್ ಗಳು

ನಿಮಗೆ ವೆಬ್ ಅಪ್ಲಿಕೇಶನ್ ಹೋಸ್ಟ್ ಮಾಡಬೇಕೆ? ಅಥವಾ ಮೊಬೈಲ್ ಅಪ್ಲಿಕೇಶನ್ ಗೆ ಅಗತ್ಯ ವಿರುವ ಸರ್ವೀಸ್ ಗಳನ್ನು ನಡೆಸಬೇಕೆ? ಇಲ್ಲಾಂದ್ರೆ ರೆಸ್ಟ್ ಏಪಿಐ (API) ಅನ್ನು ಹೋಸ್ಟ್ ಮಾಡಿ ನಡೆಸ ಬೇಕೆ? ಇವೆಲ್ಲವನ್ನು ಕ್ಲೌಡ್ ನೇಟಿವ್ ಅಪ್ಲಿಕೇಶನ್ ತಂತ್ರಜ್ಞಾನ ಬಳಸಿ ಬಿಲ್ಡ್ (build) ಮಾಡಿ ಡಿಪ್ಲೊಯ್(deploy) ಮಾಡಬಹುದು.

ಬಳಕೆ ೨: ಮಾಹಿತಿ ಉಳಿಸುವಿಕೆ

ನಿಮ್ಮ ಅಮೂಲ್ಯ ಮಾಹಿತಿ ಅದು ಅಕ್ಷರ, ಫೋಟೋ, ವಿಡಿಯೋ, ಆಡಿಯೋ ಯಾವುದೇ ರೂಪದಲ್ಲಿರಲಿ ಅಥವಾ ಟಿವಿ ಸಿರಿಯಲ್ / ಡಾಕ್ಯುಮೆಂಟರಿ / ಸಿನಿಮಾ ಡಿಜಿಟಲ್ ಮಾಸ್ಟರ್ ಕಾಪಿ ಹೀಗೆ ಎಲ್ಲದರ ಬ್ಯಾಕ ಅಪ್ ಸಹ ಕ್ಲೌಡ್ ಅಲ್ಲಿ ಸುರಕ್ಷಿತವಾಗಿಡಬಹುದು.

ಬಳಕೆ ೩: ಮಾಹಿತಿ ವಿಶ್ಲೇಷಣೆ ಸಲುವಾಗಿ

ಕ್ಲೌಡ್ ಅಲ್ಲಿ ಅಪಾರ ಪ್ರಮಾಣದ ಮಾಹಿತಿ ಉಳಿಸಿ ಕ್ರೋಢಿಕರಿಸಿ ಅದರ ವಿಶ್ಲೇಷಣೆ ಮಾಡಿ ಉಪಯುಕ್ತ ರೀತಿಯಲ್ಲಿ ಬಳಕೆದಾರರಿಗೆ ತೋರಿಸಬಹುದು.

ಬಳಕೆ ೪: ವಿಡಿಯೋ ಹಾಗೂ ಆಡಿಯೋ ಸ್ಟ್ರೀಮೀಂಗ್ ಸಲುವಾಗಿ

ಇಂದು ಹೆಚ್ಚಿನ ಆನ್ ಡಿಮಾಂಡ್ ವಿಡಿಯೋ/ ಆಡಿಯೋ ಸ್ಟ್ರೀಮಿಂಗ್ ಬಳಸುವದು ಕ್ಲೌಡ್ ಅನ್ನು. ನೆಟ್ ಫ್ಲಿಕ್ಸ್, ಅಮೇಜಾನ್ ಪ್ರೈಮ್ ಇದಕ್ಕೆ ಉದಾಹರಣೆಗಳು. ಅಂತಹ ವಿಡಿಯೋ ಸ್ಟ್ರೀಮಿಂಗ್ ಸೇವೆ ನೀಡಲು ಕ್ಲೌಡ್ ಸೇವೆ ಬಳಸಬಹುದು.

ಬಳಕೆ ೫: ಆನ್ ಡಿಮಾಂಡ್ ಸಾಫ್ಟವೇರ್ ಸೇವೆ ಒದಗಿಸಲು

ಕ್ಲೌಡ್ ಕಂಪ್ಯೂಟಿಂಗ್ ಬಳಸಿ ಆನ್ ಡಿಮಾಂಡ್ ಸಾಫ್ಟವೇರ್ ಸೇವೆ ಒದಗಿಸಬಹುದು. ಉದಾ: ಅಡೋಬೆ ಕ್ರಿಯೆಟಿವ್ ಕ್ಲೌಡ್, ಆಫೀಸ್ ೩೬೫

ಬಳಕೆ ೬: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸೇವೆಗಾಗಿ

ಕ್ಲೌಡ್ ಕಂಪ್ಯೂಟಿಂಗ್ ಕೃತಕ ಬುದ್ದಿಮತ್ತೆಗೆ ಅಗತ್ಯವಾದ ಮೊಡೆಲಿಂಗ್ ಹಾಗೂ ಅಪಾರ ಮಾಹಿತಿ ವಿಶ್ಲೇಷಣೆ ಸಾಮರ್ಥ್ಯವನ್ನು ನೀಡಬಲ್ಲುದು. ಇದು ಹಲವು ಕೆಲಸಗಳಿಗೆ ಉಪಯುಕ್ತ.

ಕ್ಲೌಡ್ ಕಂಪ್ಯೂಟಿಂಗ್ ನ ಸೇವೆಗಳು

ಇನ್ಫ್ರಾಸ್ಟ್ರಕ್ಚರ್ ಎಸ್ ಎ ಸರ್ವೀಸ್ (ಐಯಾಸ್ / IaaS)

ಇದು ತುಂಬಾ ಮೂಲಭೂತ (ಬೇಸಿಕ್) ಬಗೆಯ ಕ್ಲೌಡ್ ಸೇವೆ ಆಗಿದೆ. ಇಲ್ಲಿ ನೀವು ವರ್ಚುವಲ್ ಸರ್ವರ್, ಡಾಟಾ ಬೇಸ್, ನೆಟ್ ವರ್ಕ್ ಸಂಪರ್ಕಗಳು ಇವೆಲ್ಲವನ್ನು ಕ್ಲೌಡ್ ಸೇವೆ ನೀಡುವ ಕಂಪನಿಯಿಂದ ಪಡೆಯಬಹುದು.

ಇನ್ಫ್ರಾಸ್ಟ್ರಕ್ಚರ್ ಎಂದರೆ ಮೂಲ ಸೌಕರ್ಯಗಳು. ಇಲ್ಲಿ ನಿಮಗೆ ಸರ್ವರ್ ಗಳು, ಡಾಟಾಬೇಸ್ ಗಳು ಸಿಗುತ್ತವೆ. ಇವುಗಳ ಅಡ್ಮಿನಿಸ್ಟ್ರೇಶನ್ (ಮೇಲ್ವಿಚಾರಣೆ) ಎಲ್ಲ ನಿಮ್ಮ ಕೆಲಸ.

ಈ ಸೌಲಭ್ಯ ನೀಡುವ ಮುಖ್ಯ ಕಂಪನಿಗಳು

ಪ್ಲಾಟ್ ಪಾರ್ಮ್ ಎಸ್ ಎ ಸರ್ವೀಸ್ (ಪಾಸ್ / PaaS)

ಪ್ಲಾಟ್ ಪಾರ್ಮ್ ಎಸ್ ಸರ್ವೀಸ್ ಅಲ್ಲಿ ಡಾಟಾಬೇಸ್ ಮ್ಯಾನೆಜ್ ಮೆಂಟ್, ಡೆವೆಲಪ್ ಮೆಂಟ್ ಸಲಕರಣೆಗಳು, ಕ್ಯುಬರ್ನೇಟ್ಸ್ ಅಂತಹ ಒರ್ಕಿಸ್ಟ್ರೇಶನ್ ಸೇವೆಗಳು ಸಹ ಇರುತ್ತದೆ. ಅಷ್ಟೇ ಅಲ್ಲ ಐಯಾಸ್ (IAAS) ನಂತೆ ವರ್ಚುಅಲ್ ಮಶೀನ್ ಗಳು, ಸ್ಟೋರೇಜ್ ಸಹ ಲಭ್ಯ ಇರುತ್ತದೆ.

ಸಾಫ್ಟವೇರ್ ಎಸ್ ಎ ಸರ್ವೀಸ್ (ಸಾಸ್ / SaaS)

ಸಾಫ್ಟವೇರ್ ಎಸ್ ಸರ್ವೀಸ್ ಅಲ್ಲಿ ನೀವು ನೇರವಾಗಿ ವೆಬ್ ಅಪ್ಲಿಕೇಶನ್ ಅಥವಾ ಮೊಬೈಲ್ ಎಪ್ ಬಳಸಿ ಸರ್ವೀಸ್ ಅನ್ನು ಬಳಸುತ್ತೀರಿ. 

ಉದಾಹರಣೆಗೆ ಆಫೀಸ್ ೩೬೫ ಮೂಲಕ ವರ್ಡ್, ಎಕ್ಸೆಲ್, ಪವರ್ ಪಾಯಿಂಟ್, ಔಟ್ ಲುಕ್ ಮೊದಲಾದ ಅಪ್ಲಿಕೇಶನ್  ಬಳಸಬಹುದು. ಗೂಗಲ್ ವರ್ಕ್ ಸ್ಪೇಸ್ ಕೂಡಾ ಅದೇ ರೀತಿ ಹಲವು ಅಪ್ಲಿಕೇಶನ್ ನೀಡುತ್ತದೆ. ವೆಬ್ ಎಕ್ಸ್ ಹಾಗೂ ಗೋ ಟೂ ಮೀಟಿಂಗ್ ಬಳಸಿ ವಿಡಿಯೋ ಕಾಲ್ ಹಾಗೂ ಮೆಸೆಜಿಂಗ್ ಮಾಡಬಹುದು.

ಇಲ್ಲಿ ಅಪ್ಲಿಕೇಶನ್ ನಿರ್ಮಾಣ, ಮೆಂಟೆನನ್ಸ್, ಅಪಡೇಟ್ ಎಲ್ಲಾ ಕ್ಲೌಡ್ ಪ್ರೊವೈಡರ್ ನೋಡಿಕೊಳ್ಳುತ್ತಾರೆ. ಬಳಕೆದಾರ ಬಳಸಿದರೆ ಆಯ್ತು.

ಈ ಸಾಸ್ ಕ್ಲೌಡ್ ಸೇವೆ ನೀಡುವ  ಕೆಲವು ಉದಾಹರಣೆಗಳು

ಸರ್ವರ್ ಲೆಸ್ ಕಂಪ್ಯೂಟಿಂಗ್

ಸರ್ವರ್ ಲೆಸ್ ಕಂಪ್ಯೂಟಿಂಗ್ ಅಂದರೆ ಕ್ಲೌಡ್ ಕಂಪ್ಯೂಟಿಂಗ್ ಪ್ರೊವೈಡರ್ ಸರ್ವರ್ ನ ಮ್ಯಾನೆಜ್ ಮಾಡುವದು ಎಲ್ಲ ಮಾಡುತ್ತದೆ. ಕೇವಲ ಬ್ಯಾಕೆಂಡ್ ಎಪಿಐ ಬಳಕೆ ಆಧಾರದ ಮೇಲೆ ಚಾರ್ಜ್ ಮಾಡಲಾಗುತ್ತದೆ. ಇಲ್ಲಿ ಡೆವೆಲಪರ್ ವರ್ಚುವಲ್ ಮಶೀನ್, ಡಾಟಾಬೇಸ್ ಹೀಗೆ ತಲೆ ಕೆಡಿಸಿ ಕೊಳ್ಳ ಬೇಕಿಲ್ಲ.

ಡೆಸ್ಕ್ ಟಾಪ್ ಎಸ್ ಎ ಸರ್ವೀಸ್ (DaaS)

ಡೆಸ್ಕ್ ಟಾಪ್ ಎಸ್ ಎ ಸರ್ವೀಸ್ ಇಲ್ಲಿ ಕ್ಲೌಡ್ ಪ್ರೊವೈಡರ್ ವರ್ಚುವಲ್ ಡೆಸ್ಕ್ ಟಾಪ್ ಅನ್ನು ಬಳಕೆದಾರರಿಗೆ ಬಳಸಲು ನೀಡುತ್ತಾರೆ. ಕ್ಲೌಡ್ ಪ್ರೊವೈಡರ್ ಆಪರೇಟಿಂಗ್ ಸಿಸ್ಟೆಮ್, ಸೆಕ್ಯುರಿಟಿ ಅಪಡೇಟ್, ಡಾಟಾ ಬ್ಯಾಕ್ ಅಪ್ ಹೀಗೆ ಎಲ್ಲವನ್ನು ನೋಡಿಕೊಂಡರೆ ಬಳಕೆದಾರ ಅಪ್ಲಿಕೇಶನ್ ಸ್ಥಾಪನೆ ಹಾಗೂ ಬಳಕೆ ಮಾಡುತ್ತಾನೆ. ಈ ಡೆಸ್ಕ್ ಟಾಪ್ ಅನ್ನು ವಿಡಿ ಐ (VDI) ಅನ್ನುತ್ತಾರೆ.

ಯಾವ ಕ್ಲೌಡ್ ಸೇವೆ ಎಷ್ಟು ಜನಪ್ರಿಯ?


ಕ್ಲೌಡ್ ಮೂಲ ಸೌಕರ್ಯ ನೀಡುವದರಲ್ಲಿ ಅಮೇಜಾನ್ ವೆಬ್ ಸರ್ವೀಸ್ ದು ಸಿಂಹ ಪಾಲು. ಅದು 32% ಮಾರ್ಕೆಟ್ ಶೇರ್ ಎ ಡಬ್ಲ್ಯೂ ಎಸ್ (AWS) ಹೊಂದಿದೆ. ಅದರ ನಂತರದ ಸ್ಥಾನ ಮೈಕ್ರೊಸಾಫ್ಟ್ ಅಝ್ಯೂರ್ ಹೊಂದಿದ್ದು 21%, ಆಮೇಲೆ ಗೂಗಲ್ ಕ್ಲೌಡ್ 8% ಮಾರುಕಟ್ಟೆ ಪಾಲು ಹೊಂದಿದೆ. ಆಮೇಲೆ ಉಳಿದ ಎಲ್ಲ ಕ್ಲೌಡ್ ಸೇವೆಗಳು ಸೇರಿ 39% ಇನ್ಪ್ರಾಸ್ಟ್ರಕ್ಚರ್ ಕ್ಲೌಡ್ ಮಾರುಕಟ್ಟೆ ಪಾಲು ಹೊಂದಿದೆ.
ಮಾಹಿತಿ ಕೃಪೆ: ಸ್ಟೆಟಿಸ್ಟಾ.ಕಾಂ

ಯಾವ ಕ್ಲೌಡ್ ಸೇವೆ ನೀವು ಕಲಿಯುವದು ಒಳ್ಳೆಯದು?

ಕ್ಲೌಡ್ ಕೆಲಸಕ್ಕೆ ೨೦೨೨ರಲ್ಲಿ ತುಂಬಾ ಡಿಮ್ಯಾಂಡ್ ಇದೆ. ನೀವು ಡೆವೆಲಪರ್ ಅಥವಾ ಟೆಸ್ಟರ್ ಆಗಿದ್ದರೆ ಕ್ಲೌಡ್ ಕಂಪ್ಯೂಟಿಂಗ್ ಕಲಿಕೆ ನಿಮ್ಮ ಮುಖ್ಯ ಗುರಿ ಆಗಿರಲಿ. 

ನೀವು ಯಾವುದಾದರೂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಆ ಕಂಪನಿಯ ರೋಡ್ ಮ್ಯಾಪ್ ಅಲ್ಲಿ ಯಾವ ಕ್ಲೌಡ್ ಸೇವೆ ಬಳಸಲು ಪ್ಲ್ಯಾನ್ ಮಾಡಿದ್ದಾರೋ ಅಥವಾ ಈಗಾಗಲೇ ಬಳಸುತ್ತಿದ್ದಾರೋ ಅದನ್ನೇ ಕಲಿಯಿರಿ.

ಕಂಪ್ಯೂಟರ್ ಇಂಜಿನಿಯರಿಂಗ್ ಅಥವಾ ಇನ್ಯಾವುದೇ ವಿದ್ಯಾರ್ಥಿ ಆಗಿದ್ದರೆ ಅಮೇಜಾನ್ ವೆಬ್ ಸರ್ವೀಸ್ ಅಥವಾ ಅಝ್ಯೂರ್ ಅಥವಾ ಗೂಗಲ್ ಕ್ಲೌಡ್ ಇವುಗಳಲ್ಲಿ ಯಾವುದಾದರೊಂದು ಒಳ್ಳೆಯದು.

ಯಾವುದೇ ಕ್ಲೌಡ್ ಸೇವೆ ಬಗ್ಗೂ ವಿವರವಾಗಿ ಕಲಿಯಿರಿ ಪರವಾಗಿಲ್ಲ. ಆದರೆ ಪರಿಕಲ್ಪನೆ ಅರ್ಥ ಮಾಡಿ ಕೊಂಡು ಬಳಸಿ. ಯಾಕೆಂದರೆ ಈ ಕನ್ಸೆಪ್ಟ್ ಗಳು ಎಲ್ಲ ಕ್ಲೌಡ್ ಸೇವೆ ಗಳಿಗೂ ಅನ್ವಯ ಆಗುತ್ತೆ. ನಾಳೆ ಬೇರೆ ಕ್ಲೌಡ್ ಸೇವೆ ಬಳಸುವ ಅಗತ್ಯ ಬಂದರೆ ಅದನ್ನು ಬೇಗ ಕಲಿಯಬಹುದು.

ಎಲ್ಲ ಕ್ಲೌಡ್ ಸೇವೆ ಅರ್ಧ ಮರ್ಧ ಕಲಿಯುವದರ ಬದಲು ಯಾವುದಾದರೊಂದನ್ನು ಮೊದಲಿನಿಂದ ಕೊನೆಯವರೆಗೆ ಪರಿಪೂರ್ಣವಾಗಿ ಕಲಿಯಿರಿ. ಸಾಧ್ಯವಾದರೆ ಆ ಕ್ಲೌಡ್ ಸರ್ಟಿಫಿಕೇಶನ್ ಸಹಾ ಮಾಡಿ.

ಕೊನೆಯ ಮಾತು

ಆರಂಭಿಕ ದಿನಗಳಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಅನ್ನು ಬಳಸಲು ಅನೇಕ ಎಂಟರ್ ಪ್ರೈಸ್ ಗಳು ಸುರಕ್ಷತೆಯ ಕಾರಣಕ್ಕೆ ಹಿಂದೇಟು ಹಾಕಿದ್ದರೂ ಕಾಲಕ್ರಮೇಣ ಬಳಕೆಗೆ ಮನಸ್ಸು ಮಾಡಿದೆ. 

ಇದಕ್ಕೆ ಮುಖ್ಯ ಕಾರಣ ಕ್ಲೌಡ್ ಸೇವೆಗಳು ಸುರಕ್ಷತಾ ಸೌಲಭ್ಯಗಳನ್ನು ಉತ್ತಮ ಗೊಳಿಸಿರುವದು ಮತ್ತು ಮೂಲ ಸೌಕರ್ಯ (ಇನ್ಫ್ರಾಸ್ಟ್ರಕ್ಚರ್) ದ ಖರ್ಚಲ್ಲಿ ಉಳಿತಾಯ. ಅಷ್ಟೇ ಅಲ್ಲ ಕ್ಲೌಡ್ ಡೆವೆಲಪ್ ಮೆಂಟ್ ನಿಂದ ಹಿಡಿದು ಬ್ಯಾಕ್ ಅಪ್ ವರೆಗೆ ಎಲ್ಲ ಕೆಲಸವನ್ನು ಸರಳ ಗೊಳಿಸುತ್ತದೆ.

ಈಗಾಗಲೇ ಡಾಟಾಸೆಂಟರ್ ಹೊಂದಿರುವ ಕಂಪನಿಗಳು ಹೈಬ್ರಿಡ್ ಕ್ಲೌಡ್ ಮಾಡೆಲ್ ಆಯ್ದು ಇರುವ ಹಾರ್ಡವೇರ್ ಸದುಪಯೋಗ ಮಾಡುವ ಸಾಧ್ಯತೆ ಜಾಸ್ತಿ.

ಇನ್ನೂ ಅನೇಕ ಕಂಪನಿಗಳು ಕ್ಲೌಡ್ ಗೆ ಸಾಗುವ ಹಂತದಲ್ಲಿದೆ. ಅಂದರೆ ಕ್ಲೌಡ್ ಗೆ ಉತ್ತಮ ಭವಿಷ್ಯವಿದೆ. ನೀವು ಕಂಪ್ಯೂಟರ್ ಇಂಜಿನಿಯರ್ ಆಗಿದ್ದರೆ ತಪ್ಪದೇ ಕ್ಲೌಡ್ ಬಗ್ಗೆ ತಿಳಿದು ಕೊಳ್ಳಿರಿ.

ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

ಐಫೋನ್ ಗೆ ೧೫ ವರ್ಷ!! ಈ ಫೋನ್ ಗೆದ್ದಿದ್ದು ಹೇಗೆ?


ಇಂದು ಸಾವಿರಾರು ಸ್ಮಾರ್ಟ್ ಫೋನ್ ಮೊಡೆಲ್ ಗಳಿವೆ. ಲೆಕ್ಕವಿಲ್ಲದಷ್ಟು ಬ್ರ್ಯಾಂಡ್ ಗಳಿವೆ. ಆದರೆ ಐಫೋನ್ ಒಂದೇ ಸಾಕು ಅವೆಲ್ಲವನ್ನು ಸೋಲಿಸಲು. ಐ ಫೋನ್ ಗೆ ಅದೊಂದೇ ಸಾಟಿ. ನಿಜ ಅದು ದುಬಾರಿ ಪ್ರಿಮಿಯಂ ಫೋನ್. 

ಹಣಕ್ಕೆ ತಕ್ಕ ಮೌಲ್ಯ ಕೊಡುವ ಫೋನ್ ಐಫೋನ್ ಅಲ್ಲ. ಆ ವಿಚಾರದಲ್ಲಿ ಎಂಡ್ರಾಯಿಡ್ಡೇ ವಾಸಿ!!

ಇರಲಿ ಬನ್ನಿ ಐಫೋನ್ ನ ಇತಿಹಾಸಕ್ಕೆ ಸಂಬಂಧಿಸಿದ ಹಲವು ಕೌತುಕದ ವಿಷಯಗಳನ್ನು ಈ ಲೇಖನದಲ್ಲಿ ತಿಳಿಯೋಣ. ಅದಕ್ಕೇನು ಹಣ ಕೊಡಬೇಕಿಲ್ಲ ಅಲ್ಲವೇ?

ನಿಮ್ಮ ಬಳಿ ಐಫೋನ್ ಇದೆಯಾ? ಹೇಗನ್ನಿಸುತ್ತೆ?

ಮುಖಪುಟ ಚಿತ್ರಕೃಪೆ: Jeremy Bezanger on Unsplash

{tocify} $title={ವಿಷಯ ಸೂಚಿ} 

ಈ ಮೊದಲು ಯಾರೂ ಐಫೋನ್ ಈ ಮಟ್ಟದ ಯಶಸ್ಸು ಸಾಧಿಸುತ್ತೆ ಅಂದು ಕೊಂಡೇ ಇರಲಿಲ್ಲ. ಇದು ಬಿಡುಗಡೆ ಆದಾಗ ಆಗಲೇ ಜನಪ್ರಿಯ ಸ್ಮಾರ್ಟ್ ಫೋನ್ ಕಂಪನಿಗಳು, ಮೈಕ್ರೋಸಾಫ್ಟ್ ಕೂಡಾ ಇದನ್ನು ಹಗುರವಾಗಿ ತಗೊಂಡಿದ್ದರು. ಮೊದಲಿನಿಂದ ಸಿರಿಯಸ್ ಆಗಿ ತಗೊಂಡಿದ್ದು ಗೂಗಲ್ ಮಾತ್ರ. ಆಮೇಲೆ ಈ ಗಾಢ ನಿದ್ದೆಯಿಂದ ಉಳಿದವರು ಎದ್ದರೂ ಅದು ತುಂಬಾ ತಡ ಆಗಿತ್ತು.

ಇಂದು ಎಪಲ್ ೩ ಟ್ರಿಲಿಯನ್ ಡಾಲರ್ (ಸುಮಾರು ೨೨೨ ಲಕ್ಷ ಕೋಟಿ ರೂ, ಹೆಚ್ಚು ಕಡಿಮೆ ಇಡೀ ಭಾರತದ ಈಗಿನ ಜಿಡಿಪಿ) ಕಂಪನಿ ಆಗಿದ್ದರೆ ಅದಕ್ಕೆ ಅವರ ಐಫೋನ್ ಉತ್ಪನ್ನ ಮುಖ್ಯ ಕಾರಣ.

ಐಫೋನ್ ಗಿಂತ ಮುಂಚೆ ಎಪಲ್ ಸ್ಥಿತಿ

ಎಪಲ್ ನ ಮ್ಯಾಕಿಂತೋಷ್ ಇರಬಹುದು, ಮ್ಯಾಕ್ ಬುಕ್, ಮ್ಯಾಕ್ ಏರ್ ಎಲ್ಲ ಸೂಪರ್ ಡ್ಯೂಪರ್ ಹಿಟ್. ಇನ್ನಾವ ಲ್ಯಾಪ್ ಟಾಪ್ ಅಲ್ಲೂ ಆ ರೀತಿಯ ಬ್ಯಾಟರಿ ಲೈಫ್, ಅಡೆ ತಡೆ ಇಲ್ಲದ ಅನುಭವ ಸಿಗದು. ವಿಂಡೋಸ್ ಪಾಳೆಯದಲ್ಲಿ ಕಡಿಮೆ ಗುಣಮಟ್ಟದ ಲ್ಯಾಪ್ ಟಾಪ್ ನಿಂದ ಹಿಡಿದು ಉತ್ತಮ ವೇಗದ ಗೇಮಿಂಗ್ ಲ್ಯಾಪ್ ಟಾಪ್ ಸಹ ಇದೆ. ಆದರೆ ಎಪಲ್ ಮ್ಯಾಕ್ ಅಲ್ಲಿ ಹಾಗಲ್ಲ. ಇರುವದೆಲ್ಲ ಪ್ರಿಮಿಯಂ ಮಾತ್ರ.

ನೀವು ಒಂದು ಪ್ರಿಮಿಯಂ ಲ್ಯಾಪ್ ಟಾಪ್ ಹುಡುಕುತ್ತಿದ್ದರೆ ಎಪಲ್ ಮ್ಯಾಕ್ ಬುಕ್ ಒಂದು ಉತ್ತಮ ಆಯ್ಕೆ. ಆದರೆ ಹಾಗೆಯೇ ನಿಮ್ಮ ಜೇಬು ಖಾಲಿ ಆಗುತ್ತೆ!

ಆಪಲ್ ಹೊರತಂದ ಐಪಾಡ್ ಕೂಡಾ ಕ್ರಾಂತಿಕಾರಿಯೇ. ಐಪೊಡ್ ಶಫಲ್, ಐಪೊಡ್ ನ್ಯಾನೋ, ಐಪೊಡ್ ಟಚ್ ಒಂದಕ್ಕಿಂತ ಇನ್ನೊಂದು.

ಐಫೋನ್ ರಿಲೀಸ್ ಮಾಡುವಾಗ ಆಪಲ್ ನ ಐಪೊಡ್ ಉತ್ಪನ್ನ ಪ್ರಪಂಚಾದ್ಯಂದ ಅತಿ ಜನಪ್ರಿಯ ಆಗಿತ್ತು. 

ಚಿತ್ರಕೃಪೆ: Glen Carrie on Unsplash

ಇಂದೂ ಕೂಡಾ ಆ ಒಂದೂವರೆ ಇಂಚು ಉದ್ದಗಲ ಹಾಗೂ ಕಾಲಿಂಚು ಅದಕ್ಕಿಂತ ಕಡಿಮೆ ದಪ್ಪದ ಚಿಕ್ಕ ಐಪಾಡ್ ಶಫಲ್ (Ipod Shuffle) ಹೇಗೆ ಸಾವಿರಾರು ಹಾಡು ಉಳಿಸಿಕೊಂಡು ದಿನವಿಡೀ ಹಾಡನ್ನು ಪ್ಲೇ ಮಾಡುತ್ತಿತ್ತು ಎಂಬುದನ್ನು ನೋಡಿದರೆ ನೀವು ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುತ್ತೀರಿ.

ಆಪಲ್ ನ ಸಿ ಇ ಓ ಸ್ಟೀವ್ ಜಾಬ್ಸ್ ಒಬ್ಬ ಪರ್ಫೆಕ್ಷನಿಸ್ಟ್ ಆಗಿದ್ದು ಹೊಸ ಉತ್ಪನ್ನ ಏನನ್ನು ತಯಾರಿಸಲಿ ಎಂದು ವಿಚಾರ ಮಾಡುತ್ತಲೇ ಇದ್ದ.  ಅವರ ಆ ಗುಣವೇ ಉತ್ತಮ ಡೆಸ್ಕ್ ಟಾಪ್, ಲ್ಯಾಪ್ ಟಾಪ್, ಐಪೊಡ್, ಐಫೋನ್ ಹೀಗೆ ಮಾಡಲು ಎಪಲ್ ಗೆ ಅನುಕೂಲ ಆಯ್ತು ಎಂದರೆ ತಪ್ಪಿಲ್ಲ.

ಸ್ಟೈಲಸ್ ಪೆನ್ ಬಳಸಿ ಆಪರೇಟ್ ಮಾಡುವ ಕಂಪ್ಯೂಟರ್ ಗಳು ೨೦೦೦ ಇಸವಿ ಸುಮಾರಿಗೆ ಸಾಮಾನ್ಯವಾಗಿ ಲಭ್ಯ ಇದ್ದವು. ಆಗ ಎಪಲ್ ನ ಸ್ಟೀವ್ ಜಾಬ್ಸ್ ಅವರಿಗೆ ಸ್ಟೈಲಸ್ ಪೆನ್ ಬದಲಾಗಿ ಕೈ ಬೆರಳುಗಳ ಬಳಸಿ ಬಳಸುವ ಕಂಪ್ಯೂಟರ್ ತಯಾರಿಸುವ ಯೋಚನೆ ಬಂತು.

ಆಪಲ್ ನಿಂದ ಐಫೋನ್ ನ ರಹಸ್ಯವಾಗಿ ತಯಾರಿಕೆ

ಯಾಕೆಂದರೆ ಆ ಸಮಯದಲ್ಲಿ ಬಂದ ಸ್ಮಾರ್ಟ್ ಫೋನ್ ಗಳು ಎಂಪಿ೩ ಹಾಡನ್ನು ಪ್ಲೇ ಮಾಡುವ ಸಾಮರ್ಥ್ಯ ಹೊಂದಿದ್ದವು. ಅವು ಐಪೊಡ್ ಮಾರುಕಟ್ಟೆ ಎಳೆದು ಕೊಳ್ಳುವ ಸಾಧ್ಯತೆ ಇತ್ತು.

ಮೊಟೊರೊಲಾ ಜೊತೆ ಎಪಲ್ ಐಟ್ಯೂನ್ಸ್ ಸಾಫ್ಟವೇರ್ ಅನ್ನು ಮೊಟೊರೊಲಾ ರೋಕ್ರ್ (ROKR) ಜೊತೆ ಬಳಸುವ ಒಪ್ಪಂದ ಮಾಡಿಕೊಂಡರು. ಆದರೆ ಅದು ಯಶಸ್ವಿ ಆಗಲಿಲ್ಲ. ಹೀಗೆ ಬೇರೆ ಫೋನ್ ಕಂಪನಿ ಜೊತೆ ಐಟ್ಯೂನ್ ಮಾರಿ ಐಪೊಡ್ ಉಳಿಸಲಾಗದು ಎಂದು ಎಪಲ್ ತಾನೇ ಐಪೊಡ್ ಸೌಲಭ್ಯ ಇರುವ ಫೋನ್ ಮಾಡುವ ನಿರ್ಧಾರ ಕೈಗೊಂಡಿತು.

ಆಮೇಲೆ ೨೦೦೫ರ ಸುಮಾರಿಗೆ ರಹಸ್ಯವಾಗಿ ಪ್ರಾಜೆಕ್ಟ್ ಪರ್ಪಲ್ ೨ ಹೆಸರಲ್ಲಿ ಟಚ್ ಸ್ಕ್ರೀನ್ ಹೊಂದಿರುವ ಮೊಬೈಲ್ ಫೋನ್, ಐಪೊಡ್ ಹಾಗೂ ಅಂತರ್ಜಾಲ ಬ್ರೌಸಿಂಗ್ ಈ ಎಲ್ಲ ಸೌಲಭ್ಯ ಇರುವ ಉತ್ಪನ್ನದ  ವಿನ್ಯಾಸ ಆರಂಭಿಸಲಾಯ್ತು.

ಅದಕ್ಕಾಗಿ ಪ್ರೋಟೋಟೈಪ್ ನಿರ್ಮಿಸಲಾಯ್ತು. ಇದರ ಮುಖ್ಯ ಉದ್ದೇಶ ಐಪೊಡ್ ಹಾಗೂ ಐಟ್ಯೂನ್  ಜೊತೆ ಫೋನ್ ಸೌಲಭ್ಯ ನೀಡುವದಾಗಿತ್ತು.

ಐಫೋನ್ ನ ವಿನ್ಯಾಸ ಹಾಗೂ ನಿರ್ಮಾಣ ಎಷ್ಟು ರಹಸ್ಯವಾಗಿತ್ತೆಂದರೆ ಯೂಟ್ಯೂಬ್ / ಗೂಗಲ್ ಮ್ಯಾಪ್ ಎರಡು ಎಪ್ ಐಫೋನ್ ೧ ರಲ್ಲಿ ಇದ್ದರೂ ಗೂಗಲ್ ಗೆ ಸಹ ಫೋನಿನ ಬಗ್ಗೆ ಪೂರ್ಣ ವಿವರ ತಿಳಿದಿರಲಿಲ್ಲ!

ಐಫೋನಲ್ಲಿ ಬಳಸಲಾದ ತಂತ್ರಜ್ಞಾನ ಯಾವುದೂ ಹೊಸತಲ್ಲ. ಆದರೆ ಅದೆಲ್ಲವನ್ನು ಬಳಸಿ ಬೆರಳಿಂದ ಆಪರೇಟ್ ಮಾಡುವ ಕೀಲಿಮಣೆ ಇಲ್ಲದಿರುವ ಫೋನ್ ಹೊಸ ಕಲ್ಪನೆ. 

ಐಫೋನ್ ಗೂ ಮೊದಲು ಕೀಲಿಮಣೆ ಹಾಗೂ ಸ್ಟೈಲಸ್ ಪೆನ್ ಸ್ಮಾರ್ಟ್ ಫೋನ್ ಅವಿಭಾಜ್ಯ ಅಂಗ ಆಗಿತ್ತು.ಈ ಸಂಪ್ರದಾಯ ಮೊದಲು ಮುರಿದಿದ್ದು ಐಫೋನ್.

ಸುಮಾರು ಎರಡುವರೆ ವರ್ಷ ತೆಗೆದುಕೊಂಡ ಈ ಫೋನ್ ವಿನ್ಯಾಸ ಹಾಗೂ ಸಾಫ್ಟವೇರ್ ಅಲ್ಲಲ್ಲಿ ಗಾಳಿ ಮಾತಿದ್ದರೂ ವಿವರಗಳ ರಹಸ್ಯವನ್ನು ಕೊನೆಯವರೆಗೆ ಎಪಲ್ ಕಾಪಿಟ್ಟಿತ್ತು. 

ಐಫೋನ್ ಬಿಡುಗಡೆ

ಹದಿನೈದು ವರ್ಷಗಳ ಹಿಂದಿನ ಮಾತಿದು. 

ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿರುವ ಮೊಸ್ಕೋನ್ ಸೆಂಟರ್ ನಲ್ಲಿ ಜನವರಿ ೯ ೨೦೦೭ರ ಬೆಳಿಗ್ಗೆ ೯ ಗಂಟೆಗೆ ಮ್ಯಾಕ್ ವರ್ಲ್ಡ್ ಕಾರ್ಯಕ್ರಮದಲ್ಲಿ  ಕಪ್ಪು ಫುಲ್ ಕೈ ಶರ್ಟ್ ಮತ್ತು ನೀಲಿ ಜೀನ್ಸ್  ಹಾಕಿದ್ದ ಆಪಲ್ ನ ಸಿಇಓ ಆದ ಸ್ಟೀವ್ ಜಾಬ್ಸ್ ಕೀನೋಟ್ಸ್ ಆರಂಭಿಸಿದರು. 

ಅಂದು ಅವರು ಐಫೋನ್ ಅನ್ನು ಕ್ರಾಂತಿಕಾರಿ ಉತ್ಪನ್ನ ಎಂದಾಗ ಅದನ್ನು ಆಗ ತಳ್ಳಿ ಹಾಕಿದವರೇ ಜಾಸ್ತಿ.

ಫೋನ್, ಐಪೋಡ್ ಹಾಗೂ ಇಂಟರ್ನೆಟ್ ಈ ಮೂರೂ ಸೌಲಭ್ಯ ಇರುವ ಐಫೋನ್ ಹೇಗೆ ಕ್ರಾಂತಿ ಮಾಡಬಲ್ಲುದು ಎಂದು ಸ್ಟೀವ್ ಜಾಬ್ ಸ್ಟೇಜ್ ಮೇಲೆ ಹೇಳುತ್ತಿದ್ದರೆ ಅಲ್ಲಲ್ಲೇ ಒಳ ಒಳಗೆ ನಗುತ್ತಾ ಸಾಕು ಮಾಡಯ್ಯ ಈ ಕೀಲಿ ಮಣೆ ಇಲ್ಲದ ಲ್ಯಾಪ್ ಟಾಪ್ ತರಹ ಬೂಟ್ ಆಗೋ ಫೋನ್ ಯಾರಾದ್ರೂ ಬಳಸ್ತಾರಾ ಕೆಲವರು ಅಂದು ಕೊಂಡವರೇ! 

ಇದಕ್ಕೆ ಟೆಕ್ ಕ್ರಂಚ್, ಎಂಗ್ಯಾಜೆಟ್ ನಂತಹ ಟೆಕ್ ವಿಮರ್ಶೆಗಳೇ ಸಾಕ್ಷಿ!

ಐಫೋನ್ ಅಲ್ಲಿ ಆರಂಭದಲ್ಲಿ ಈಗಿರುವ ಹೆಚ್ಚಿನ ಫೀಚರ್ ಇರಲಿಲ್ಲ!

ಆಗ ನೋಕಿಯಾ, ಬ್ಲ್ಯಾಕ್ ಬೆರಿ ಎಲ್ಲ ೩ಜಿ ಫೋನ್ ಮಾರುಕಟ್ಟೆಯಲ್ಲಿತ್ತು. ಮೊದಲ ಐಫೋನ್ ಬರಿ 2ಜಿ ಆಗಿತ್ತು!  ಜೊತೆಗೆ ೨.೪ಗಿಗಾ ಹರ್ಟ್ಜ್ ವೈ ಫೈ ಸೌಲಭ್ಯ ಸಹ ಇತ್ತು. ಬರಿ ಫೋಟೋ ತೆಗೆಯುವ ಕ್ಯಾಮೆರಾ ಇದ್ದ ಐಫೋನ್ ಅಲ್ಲಿ ಸೆಲ್ಫಿ ಕ್ಯಾಮೆರಾ ಹಾಗೂ ವಿಡಿಯೋ ರೆಕಾರ್ಡಿಂಗ್ ಸಹ ಇರಲಿಲ್ಲ! 

ಎಪ್ ಸ್ಟೋರ್, ಎಸ್ ಡಿ ಕಾರ್ಡ್ ಸ್ಲಾಟ್ ಸಹ ಇರಲಿಲ್ಲ. ಆದರೂ ಅದರ ಯೂಸರ್ ಎಕ್ಸ್ಪಿರಿಯನ್ಸ್ ಬೇರೆಲ್ಲ ಫೋನ್ ಗಿಂತ ಬೇರೆಯಾಗಿದ್ದು ಅಮೋಘವಾಗಿತ್ತು ಅನ್ನುವದು ಉತ್ಪ್ರೇಕ್ಷೆ ಅಲ್ಲ.

 ಐಫೋನ್ ಎಪ್ ಸ್ಟೋರ್ ಸುಮಾರು ಒಂದು ವರ್ಷದ ನಂತರ ಬಂತು.

ಒಂದು ಐಫೋನ್ ಬೆಲೆ ಒಂದು ಲ್ಯಾಪ್ ಟಾಪ್ ನಷ್ಟಿತ್ತು!


ಚಿತ್ರಕೃಪೆ: BUMIPUTRA ಇಂದ Pixabay

ಮೊದಲ ಐಫೋನ್ ಬೆಲೆ 499 ಡಾಲರ್ ( ಅಂದ್ರೆ 19 ಸಾವಿರ ರೂ. ೨೦೦೭ ರಲ್ಲಿ ೧ ಡಾಲರ್ = ೩೯.೪೨ ರೂ) ಆಗಿತ್ತು. ಈಗಲೂ ಏನು ಕಡಿಮೆ ಏನಿಲ್ಲ! ಅದು ಇನ್ನೂ ಜಾಸ್ತಿ ಆಗಿದೆ. ಇಂದು ಐಫೋನ್ ೧೩ ಮಾಡೆಲ್ ಗಳು  1000 ಡಾಲರ್ ಗೂ ಜಾಸ್ತಿ ಬೆಲೆಗೆ ಮಾರಾಟ ಆಗುತ್ತದೆ. 

ಹೆಚ್ಚು ಕಡಿಮೆ ಒಂದು ಮಿಡ್ ರೇಂಜ್ ನ ಲ್ಯಾಪ್ ಟಾಪ್ ಬೆಲೆ ಈ ಐ ಫೋನ್ ಗೆ ಇದೆ. ಆದರೂ ಪ್ರತಿ ಬಾರಿ ಬಿಡುಗಡೆ ಆದಾಗ ಜನ ಬರಗೆಟ್ಟವರಂತೆ ಅಂಗಡಿಗಳ ಮುಂದೆ ಇಡೀ ರಾತ್ರಿ ಕ್ಯೂ ನಿಂತು  ಖರೀದಿಸುತ್ತಾರೆ!

ಇತ್ತೀಚೆಗೆ ಅಂಡ್ರಾಯಿಡ್ ಅಲ್ಲೂ ಉತ್ತಮ ಕ್ಯಾಮೆರಾ ಫೋನ್ ಬಂದಿವೆ ಆದರೂ ಪ್ರಿಮಿಯಂ ಫೋನ್ ಮಾರ್ಕೆಟ್ ಅಲ್ಲಿ ಇದಕ್ಕೆ ಮೊದಲ ಆದ್ಯತೆ.

ಇದು ಫೇಲ್ ಆಗುತ್ತೆ ಅಂದು ಕೊಂಡವರೇ ಜಾಸ್ತಿ


ಚಿತ್ರಕೃಪೆ: Thai Nguyen ಇಂದ Unsplash

ಸ್ಟೀವ್ ಬಾಲ್ಮರ್ ೫೦೦ ಡಾಲರಿನ ಐಫೋನ್ ಯಾವುದೇ ದೊಡ್ಡ ಮಾರ್ಕೆಟ್ ಶೇರ್ ಪಡೆಯುವ ಸಾಧ್ಯತೆ ಇಲ್ಲ ಎಂದು ಹೇಳಿದ್ದರು. ಆಮೇಲೆ ಅವರು ಮಾತನ್ನು ಐಫೋನ್ ಸುಳ್ಳು ಮಾಡಿತು. 

ಇಂದು ಹೈಎಂಡ್ ಐಫೋನ್ ಬೆಲೆ ೧೫೦೦ ಡಾಲರ್ ದಾಟುತ್ತದೆ. (ಭಾರತದಲ್ಲಿ ಐಫೋನ್ ೧೩ ಪ್ರೋ ಮ್ಯಾಕ್ಸ್ ಬೆಲೆ ಹೆಚ್ಚು ಕಡಿಮೆ ೧.೪ ಲಕ್ಷ ರೂ ಇದೆ!) ಆದರೂ ಜನ ಮುಗಿ ಬಿದ್ದು ಅದರ ಹಳೆ ವರ್ಶನ್ ಆದ್ರೂ ಸರಿ ತಗೋತಾರೆ. ಒಟ್ಟಿನಲ್ಲಿ ಐಫೋನ್ ಆಗಬೇಕು ಅಷ್ಟೇ!

ಬ್ಲ್ಯಾಕ್ ಬೆರ್ರಿ ಯ ಸಿ ಇ ಓ ಕೂಡಾ ಐಫೋನ್ ನಿಂದ ಬ್ಲ್ಯಾಕ್ ಬೆರಿ ಗೆ ತೊಂದರೆ ಇಲ್ಲವೆಂದೇ ನಂಬಿದ್ದರು. ನೋಕಿಯಾ ಕಂಪನಿ ಕೂಡಾ ಐಫೋನ್ ನಿಂದ ತನ್ನ ವ್ಯಾಪಾರಕ್ಕೆ ಅಡ್ಡಿ ಆಗುತ್ತೆ ಮೊದ ಮೊದಲು ಭಾವಿಸಲಿರಲಿಲ್ಲ.

ಗೂಗಲ್ ಕಂಪನಿಗೆ ಮಾತ್ರ ಇದರಲ್ಲಿ ವಿಶ್ವಾಸ ಇತ್ತು. ಅದಕ್ಕೆ ಗೂಗಲ್ ಎಪಲ್ ನ ಕೀನೋಟ್ ನೋಡಿದ ತಕ್ಷಣ ಅಂಡ್ರಾಯ್ಡ್ ಪ್ರಾಜೆಕ್ಟ್ ಅನ್ನು ಬದಲಾಯಿಸಿ ಪುನರಾರಂಭಿಸಿತು.

ಐಫೋನ್ ಯಾಕೆ ಜನಪ್ರಿಯ ಆಯ್ತು?

ಒಂದು ಐಫೋನ್ ಗೆ ಸರಿಯಾದ ಸ್ಪರ್ಧಿ ಅನೇಕ ಕಾಲದ ವರೆಗೆ ಬರಲಿಲ್ಲ. ಎಪಲ್ ಮೊದಲಿನಿಂದಲೂ  ಕಂಪ್ಯೂಟರ್ ಹಾರ್ಡವೇರ್ ವಿನ್ಯಾಸ ಹಾಗೂ ಸಾಫ್ಟವೇರ್ ನಿರ್ಮಾಣ ಎರಡರಲ್ಲೂ ನಿಸ್ಸೀಮ ಆಗಿತ್ತು. ಅದೇ ಹಾರ್ಡವೇರ್ ವಿನ್ಯಾಸ ಗೊಳಿಸಿ ಸಾಫ್ಟವೇರ್ ನಿರ್ಮಿಸಿದುದರಿಂದ ಅದು ಉತ್ತಮ ವೇಗ, ಬ್ಯಾಟರಿ ಸಮಯ ಎಲ್ಲವನ್ನೂ ಹೊಂದಿತ್ತು. 

ನೋಕಿಯಾ, ಪಾಲ್ಮ್, ಬ್ಲ್ಯಾಕ್ ಬೆರಿ ಆರಂಭದಲ್ಲಿ ಈ ಸ್ಪರ್ಧೆಯನ್ನು ಕಡೆಗಣಿಸಿ ದ್ದವು. ಗೂಗಲ್ ಅಂಡ್ರಾಯಿಡ್ ಸ್ವಲ್ಪ ಮುನ್ನಡೆ ಹೊಂದಿದ್ದರು ಹಲವು ಹಾರ್ಡವೇರ್ ರೀತಿ ಸಪೋರ್ಟ್, ಚೀಪ್ ಹಾರ್ಡವೇರ್ ಗಳು, ಹೀಟಿಂಗ್ ಸಮಸ್ಯೆ, ಎಪ್ ಸ್ಟೋರ್ ನಲ್ಲಿನ ಎಪ್ ಗುಣಮಟ್ಟ ಹೀಗೆ ಹಲವು ಸಮಸ್ಯೆಗಳಿದ್ದವು.

ಎಪಲ್ ತನ್ನ ಅತ್ಯುತ್ತಮ ಗುಣಮಟ್ಟದ ಬಳಕೆದಾರರ ಅನುಭವಕ್ಕೆ ಮುಖ್ಯ ಆದ್ಯತೆ ನೀಡಿತು ಅಷ್ಟೇ ಅಲ್ಲ ತನ್ನ ಡೆಸ್ಕ್ ಟಾಪ್, ಲ್ಯಾಪ್ ಟಾಪ್, ವಾಚ್ ಎಲ್ಲದರ ಇಂಟಿಗ್ರೇಶನ್ ಕೂಡಾ ಅಡೆ ತಡೆ ಇಲ್ಲದೇ ನಿರ್ವಹಿಸಿ ಜನರಿಗೆ ಸುಲಭ ಆಗುವಂತೆ ಮಾಡಿತ್ತು.

ಇಂದು ಅನೇಕ ಫೋನ್ ಗಳು ಐಫೋನ್ ಮಟ್ಟ ಅಲ್ಲದಿದ್ದರೂ ಅದಕ್ಕೆ ಪರ್ಯಾಯ ಅನ್ನಿಸುವ ಗುಣಮಟ್ಟದ ಅನುಭವ ಕಡಿಮೆ ಬೆಲೆಗೆ ನೀಡುತ್ತಿದ್ದಾರೆ. ಆದರೆ ಎಪಲ್ ಐಫೋನ್ ತನ್ನ ದೊಡ್ಡ ಅಭಿಮಾನಿಗಳ ಬಳಗ ನಿರ್ಮಿಸಿಕೊಂಡು ತನ್ನ ಸೇವೆಯನ್ನು ಬಳಸುವಂತೆ ಮಾಡಿಕೊಂಡಿದೆ.

ಎಪಲ್ ತನ್ನ ಎಪ್ ಸ್ಟೋರ್ ನಲ್ಲಿ ಗುಣಮಟ್ಟದ ಬೇಡಿಕೆಯ ಮಟ್ಟ ಜಾಸ್ತಿ ಇಟ್ಟಿದೆ. ಅಷ್ಟೇ ಅಲ್ಲ ಎಪ್ ಸ್ಟೋರ್ ಸುರಕ್ಷತೆಯಲ್ಲೂ ಮುಂದು.

ಐಫೋನ್ ಕಾರಣದಿಂದ ಮುಚ್ಚಿದ ಕಂಪನಿಗಳು


ಚಿತ್ರಕೃಪೆ:Thai Nguyen on Unsplash

ಐಫೋನ್ ಆಗಿನ ಕಾಲದಲ್ಲಿನ ಬ್ಲ್ಯಾಕ್ ಬೆರಿ, ನೋಕಿಯಾ, ಪಾಲ್ಮ್ ಮೊದಲಾದ ಕಂಪನಿ ಲಾಸ್ ಆಗಿ ಅಂಗಡಿ ಮುಚ್ಚುವಂತೆ ಮಾಡಿದೆ. ಇದಕ್ಕೆ ಮುಖ್ಯ ಕಾರಣ ಐಫೋನ್ ಬಂದಾಗ ಅದಕ್ಕೆ ಸರಿಯಾದ ಪ್ರತಿಸ್ಪರ್ಧಿ ಉತ್ಪನ್ನ ತರುವದರ ಬದಲು ತಮ್ಮ ಹಳೆಯ ಉತ್ಪನ್ನಗಳ ಪ್ರೋಮೋಟ್ ಮಾಡಿ ಮಾರುತ್ತಾ ಕುಳಿತದ್ದೇ ಕಾರಣ!

ಇಂದು ಆ ಕಂಪನಿಗಳು ಚಿಕ್ಕ ಕಂಪನಿಗಳಾಗಿವೆ. ಇಲ್ಲ ಮುಚ್ಚಿ ಹೋಗಿವೆ.

ಅಂಡ್ರಾಯಿಡ್ ಅಥವಾ ವಿಂಡೋಸ್ ಫೋನ್ ಸಾಫ್ಟವೇರ್ ಆಯ್ಕೆ ಮಾಡ ಬೇಕಿದ್ದ ನೋಕಿಯಾ ಕೂಡಾ ಎಡವಿ ವಿಂಡೋಸ್ ಫೋನ್ ಆರಿಸಿತು. ಮೈಕ್ರೊಸಾಫ್ಟ್ ಜೊತೆ ಮಾಡಿ ಕೊಂಡ ಒಡಂಬಡಿಕೆ ನೋಕಿಯಾಗೆ ಭಾರಿ ಹೊಡೆತ ಕೊಟ್ಟಿದ್ದು ಸುಳ್ಳಲ್ಲ. ಯಾಕೋ ನೋಕಿಯಾ ಆಗಲೇ ಅಂಡ್ರಾಯಿಡ್ ಆರಿಸಿಕೊಂಡಿದ್ದರೆ ಅದರ ಕಥೆ ಬೇರೆ ಆಗುತ್ತಿತ್ತೇನೋ! ಈಗ ಅಂಡ್ರಾಯಿಡ್ ಪಾಳೆಯಕ್ಕೆ ಅದು ಬಂದಿದೆ. ಆದರೆ ಬೇರೆ ಕಂಪನಿಗಳ ಕಾಂಪಿಟೇಶನ್ ಜೋರಾಗಿದೆ.

ಸ್ಯಾಮ್ಸಂಗ್ ಗೂಗಲ್ ನ ಅಂಡ್ರಾಯಿಡ್ ಬಳಸಿ ಹಾಗೂ ತನ್ನದೇ ಟೈಜನ್ ಆಪರೇಟಿಂಗ್ ಸಿಸ್ಟೆಮ್ ತಯಾರಿಸಿ ಗೂಗಲ್ ನ ಅಂಡ್ರಾಯಿಡ್ ಪಾಳೆಯದಲ್ಲಿದ್ದು ಎಪಲ್ ಗೆ ಪ್ರಬಲ ಸ್ಪರ್ಧೆ ನೀಡಿದ್ದು ಸುಳ್ಳಲ್ಲ. ಸ್ಯಾಮ್ಸಂಗ್ ಹಲವು ಬೆಲೆ ಮಟ್ಟಕ್ಕೆ ಎಪಲ್ ಐಫೋನ್ ಗೆ ಸಡ್ಡು ಹೊಡೆಯುವ ಪ್ರಿಮಿಯಂ ಫೋನ್ ಸಹ ನಿರ್ಮಿಸುತ್ತಿದೆ. ಅದಕ್ಕೆ ಎಪಲ್ ಹಲವು ಪೇಟೆಂಟ್ ಲಾ ಸೂಟ್ ಅನ್ನು ಸ್ಯಾಮ್ಸಂಗ್ ಮೇಲೆ ಹಾಕಿ ಗೆದ್ದಿದೆ ಕೂಡಾ.

ಆಮೇಲೆ ಗೂಗಲ್, ಶಿಯೋಮಿ, ಒನ್ ಪ್ಲಸ್, ವಿವೋ, ಒಪ್ಪೋ ಹೀಗೆ ಹಲವು ಕಂಪನಿಗಳು ಅಂಡ್ರಾಯಿಡ್ ಫೋನ್ ಗಳನ್ನು ಹಲವು ಬೆಲೆಯ ಮಟ್ಟಕ್ಕೆ ಬಿಟ್ಟು ಬಜೆಟ್ ಖರೀದಿದಾರರನ್ನು ಎಳೆದದ್ದು ಸುಳ್ಳಲ್ಲ.

ಮೊದಲ ಐಫೋನ್ ರಿಲೀಸ್ ಕಾರ್ಯಕ್ರಮ ನೋಡಿ ಹೈರಾಣಾದ ಗೂಗಲ್ ಇಂಜಿನಿಯರ್ ಗಳು 

ಚಿತ್ರಕೃಪೆ: Denny Müller on Unsplash

ಗೂಗಲ್ ಕೂಡಾ ೨೦೦೭ರಲ್ಲಿ ಸ್ಮಾರ್ಟ್ ಫೋನ್ ರಿಲೀಸ್ ಮಾಡಬೇಕು ಎಂದು ಬಯಸಿತ್ತು ಅಂಡ್ರಾಯಿಡ್ ಕಂಪನಿಯನ್ನು ೨೦೦೫ರಲ್ಲೇ ಖರೀದಿ ಮಾಡಿತ್ತು. ಗೂಗಲ್ ಇಂಜಿನಿಯರ್ ಗಳು ಎರಡು ವರ್ಷ ಹಗಲು ರಾತ್ರಿ ಪರಿಶ್ರಮ ಪಟ್ಟು ಅಂಡ್ರಾಯಿಡ್ ಫೋನ್ ಅಭಿವೃದ್ಧಿ ಮಾಡಿದ್ದರು. 

ಅದು ಕೂಡಾ ಬ್ಲ್ಯಾಕ್ ಬೆರ್ರಿ ಫೋನ್ ತರಹ ಕೀಲಿಮಣೆ ಇದ್ದು ಚಿಕ್ಕ ತೆರೆ ಇರುವಂತಹ ಫೋನ್ ಆಗಿತ್ತು.

ಜನವರಿ ೯ ೨೦೦೭ರಂದು  ಎಪಲ್ ನ ಸ್ಟೀವ್ ಜಾಬ್ ನ ಕೀನೋಟ್ಸ್ ನಲ್ಲಿ ಐಫೋನ್ ಅನ್ನು ಜಗತ್ತಿಗೆ ಪರಿಚಯಿಸಿದಾಗ ಅದನ್ನು ನೋಡುತ್ತಿದ್ದ ಗೂಗಲ್ ಇಂಜಿನಿಯರ್ ಗಳು ಹೈರಾಣಾದರು. ಯಾಕೆಂದರೆ ಅವರು ನಿರ್ಮಿಸಿದ ಅಂಡ್ರಾಯಿಡ್ ಫೋನ್ ಐಫೋನ್ ಮುಂದೆ ಏನೂ ಆಗಿರಲಿಲ್ಲ. ಆ ಅಂಡ್ರಾಯಿಡ್ ಫೋನ್ ಬಿಡುಗಡೆ ಮಾಡಿದರೆ ನಮಗೆ ಉಳಿಗಾಲ ಇಲ್ಲ ಎನ್ನುವದು ಅಂಡ್ರಾಯಿಡ್ ಫೋನ್ ಟೀಂ ಗೆ ಮನವರಿಕೆ ಆಯಿತು. 

ತಕ್ಷಣ ಗೂಗಲ್ ಮತ್ತೆ ಹೊಸತಾಗಿ ಅಂಡ್ರಾಯಿಡ್ ಫೋನ್ ಡೆವೆಲಪ್ ಮೆಂಟ್ ಶುರು ಮಾಡುವ ನಿರ್ಧಾರ ಕೈಗೊಂಡಿತು. ೨೦೦೭ರಲ್ಲಿ ರಿಲೀಸ್ ಆಗಬೇಕಿದ್ದ ಅಂಡ್ರಾಯಿಡ್ ಫೋನ್ ಒಂದು ವರ್ಷ ತಡವಾಗಿ ೨೦೦೮ರಲ್ಲಿ ಬಿಡುಗಡೆ ಆಯಿತು. ಈ ಎಲ್ಲ ವಿಚಾರ ಗೊತ್ತಾಗಿದ್ದು ನಂತರ ೨೦೧೩ರಲ್ಲಿ ಫ್ರೆಡ್ ವೊಗೆಲ್ ಸ್ಟೀನ್ ಅವರ ಡಾಗ್ ಫೈಟ್ ಎಂಬ ಪುಸ್ತಿಕೆಯ ಮೂಲಕ್ಕ.

ಸ್ಟೀವ್ ಜಾಬ್ಸ್ ಗೆ ಗೂಗಲ್ ಅಂಡ್ರಾಯಿಡ್ ಮೇಲೆ ಅಸಮಾಧಾನ ಇತ್ತು. ಅದು ಕದ್ದ ಉತ್ಪನ್ನ ಆಗಿದ್ದರಿಂದ ಅದನ್ನು ನಾಶ ಮಾಡಬೇಕೆಂದು ಬಯಸಿದ್ದರು. ಅಷ್ಟೇ ಅಲ್ಲ ಎಪಲ್ ಸ್ಯಾಮಸಂಗ್ ಹಿಡಿದು ಅನೇಕ ಅಂಡ್ರಾಯಿಡ್ ಫೋನ್ ಕಂಪನಿಗಳಿಗೆ ಪೇಟೆಂಟ್ ಕದ್ದ ಆರೋಪದ ಮೇಲೆ ಕೇಸ್ ಹಾಕಿ ದಂಡ ವಿಧಿಸಿದೆ.

ಸ್ಟೀವ್ ಜಾಬ್ ನ ಪರ್ಫೆಕ್ಷನಿಸ್ಟ್ ಮೈಂಡ್ ಸೆಟ್


ಚಿತ್ರಕೃಪೆ: AB on Unsplash

ಸ್ಟೀವ್ ಜಾಬ್ಸ್ ಅತಿಯಾದ ಪರ್ಫೆಕ್ಷನಿಸ್ಟ್ ಆಗಿದ್ದರು.  ಈ ಪರ್ಫೆಕ್ಟ್ ಕಂಪ್ಯೂಟರ್, ಪರ್ಫೆಕ್ಟ್ ಆಡಿಯೋ ಪ್ಲೇಯರ್, ಪರ್ಫೆಕ್ಟ್ ಫೋನ್ ವಿನ್ಯಾಸದ ವಾಂಛೆಯಿಂದ ಸ್ಟೀವ್ ಜಾಬ್ಸ್ ಎಪಲ್ ಅನ್ನು ಜಗತ್ತಿನ ಅತಿ ದೊಡ್ಡ ಟೆಕ್ನಾಲಜಿ ಕಂಪನಿ ಮಾಡಿದರು. ಎಪಲ್ ನ ಪ್ರತಿ ಉತ್ಪನ್ನ ಸ್ಟೀವ್ ಜಾಬ್ಸ್ ಕಾಲದಲ್ಲಿ ಉತ್ಕೃಷ್ಟ ಮಟ್ಟ ತಲುಪಿತು ಎಂದರೆ ತಪ್ಪಾಗಲಾರದು.

ಐಫೋನ್ ಆ ಗುಣಮಟ್ಟ, ಕೀಲಿಮಣೆ / ಸ್ಟೈಲಸ್ ಪೆನ್ ಬದಲಾಗಿ ಟಚ್ ಸ್ಕ್ರೀನ್ ಬಳಸಲೂ ಕೂಡಾ ಸ್ಟೀವ್ ಜಾಬ್ ಅವರ ನಿರ್ಧಾರ ಕಾರಣ.

ಆರಂಭಿಕ ಪ್ರೋಟೋಟೈಪ್ ಅಲ್ಲಿ ಪ್ಲಾಸ್ಟಿಕ್ ಸ್ಕ್ರೀನ್ ಬಳಸಲಾಗಿತ್ತು. ಐಫೋನ್ ಪ್ರೋಟೋಟೈಪ್ ಸಿದ್ಧವಾದಾಗ ಸ್ಟೀವ್ ಜಾಬ್ಸ್ ಅದರಲ್ಲಿ ಒಂದನ್ನು ತಮ್ಮ ಜೇಬಲ್ಲಿ ಇಟ್ಟು ಕೊಂಡು ಹೋಗುತ್ತಿದ್ದರು. ಜೊತೆಗೆ ಕೀ ಗಳು ಸಹಾ ಇದ್ದು ತಿಕ್ಕಾಟದಿಂದ ಸ್ಕ್ರೀನ್ ಸ್ಕ್ರ್ಯಾಚ್ ಆಗಿತ್ತು.

ಇದರಿಂದ ಸ್ಟೀವ್ ಜಾಬ್ಸ್ ತುಂಬಾ ಅಸಮಾಧಾನ ಗೊಂಡಿದ್ದರು. ಆಮೇಲೆ ಪ್ಲಾಸ್ಟಿಕ್ ಪರದೆಯನ್ನು ಗ್ಲಾಸ್ ಪರದೆಗೆ ಬದಲಾಯಿಸಲಾಯ್ತು.

ಐಫೋನ್ ನ ಪ್ರತಿ ಐಕಾನ್ ಅದರ ಬಣ್ಣ ಇಂತಹ ಚಿಕ್ಕ ಚಿಕ್ಕ ವಿಷಯ ಎಲ್ಲದರ ಬಗ್ಗೆ ಸಿಇಓ ಆದ ಅವರು ಸಹ ಮುತುವರ್ಜಿ ವಹಿಸುತ್ತಿದ್ದರು. ಸಾಮಾನ್ಯವಾಗಿ ಕಂಪನಿ ಸಿಇಓ ಮಟ್ಟದಲ್ಲಿರುವವರು ಅಂತಹ ಸೂಕ್ಷ್ಮ ಅಂಶಗಳಿಗೆ ಗಮನ ಹರಿಸುವದಿಲ್ಲ.

ಇದೇ ಪರ್ಫೆಕ್ಷನಿಸ್ಟ್ ಮೈಂಡ್ ಸೆಟ್ ಅವರ ಜೀವನದ ಪ್ರತಿ ನಿರ್ಧಾರಕ್ಕೂ ಕೆಟ್ಟ ಪರಿಣಾಮ ಕೂಡಾ ಉಂಟಾಯ್ತು. ಅದರ ಬಗ್ಗೆ ತಿಳಿಯಲು ಆಸಕ್ತಿ ಇದ್ದರೆ ಕಮೆಂಟ್ ಮಾಡಿ. ಇನ್ನೊಂದು ಲೇಖನದಲ್ಲಿ ತಿಳಿಸುತ್ತೇನೆ.

ಐಫೋನ್ ೧ ರ ಸ್ಪೆಸಿಫಿಕೇಷನ್ (ವಿಶಿಷ್ಟತೆ) ಏನಿತ್ತು?

ಐಫೋನ್ ೧ರ ವಿಶಿಷ್ಟತೆ ಏನಿತ್ತು? ಬನ್ನಿ ನೋಡೋಣ. ಈಗಿನ ಕಾಲದಲ್ಲಿ ಇಷ್ಟೇನಾ ಅನ್ನಿಸಬಹುದು. ಆದರೆ ಆ ಕಾಲಕ್ಕೆ ಐಫೋನ್ ನೀಡಿದ ಯೂಸರ್ ಎಕ್ಸ್ಪಿರಿಯನ್ಸ್ (ಬಳಕೆದಾರರ ಅನುಭವ) ಗೆ ಸರಿ ಸಾಟಿ ಆದ ಬೇರೆ ಫೋನ್ ಇರಲಿಲ್ಲ.
 • 320 * 480 ಪಿಕ್ಸೆಲ್ ಗಳ 3.5 ಇಂಚಿನ ಟಚ್ ಪರದೆ
 • 2 ಮೆಗಾ ಪಿಕ್ಸೆಲ್ ಕ್ಯಾಮೆರಾ
 • ಹೋಮ್, ವಾಲ್ಯೂಮ್ +/- , ಪವರ್ ಬಟನ್
 • ಸ್ಯಾಮಸಂಗ್ 32 ಬಿಟ್ ಎ ಆರ್ ಎಂ (ARM) ಪ್ರಾಸೆಸರ್ 412 ಮೆಗಾ ಹರ್ಟ್ಜ್ ವೇಗ
 • ಪ್ರಾಕ್ಸಿಮಿಟಿ / ಎಕ್ಸೆಲೆರೋಮೀಟರ್ / ಸುತ್ತಮುತ್ತಲಿನ ಬೆಳಕು (ಎಂಬಿಯಂಟ್ ಲೈಟ್) ಸೆನ್ಸರ್ ಗಳು
 • 3.5 ಆಡಿಯೋ ಜ್ಯಾಕ್
 • 1400 ಎಂಎಎಚ್ ಲಿಥಿಯಂ ಅಯಾನ್ ಬ್ಯಾಟರಿ
 • ಆಪರೇಟಿಂಗ್ ಸಿಸ್ಟೆಮ್: ಐಫೋನ್ ಒಎಸ್ ೧
ಈಗ ೨೦೨೨ರಲ್ಲಿ ನಮ್ಮ ಅಂಡ್ರಾಯಿಡ್ ಫೋನ್ ಎದುರು ಕೂಡಾ ಇಷ್ಟೇನಾ ಅನ್ನಿಸಬಹುದು. ಆದರೆ ಆ ಕಾಲಕ್ಕೆ ಐಫೋನ್ ಹೊಸ ರೀತಿಯ ಬಳಕೆದಾರರ ಅನುಭವ ತಂದಿತು.

ಐಫೋನ್ ನಿಜಕ್ಕೂ ಅಷ್ಟು ಗ್ರೇಟಾ?


ಚಿತ್ರಕೃಪೆ: StorresJayrMx on Unsplash

ಇಂದು ವಿಶಿಷ್ಟತೆಯಲ್ಲಿ ಐಫೋನ್ ಮೀರಿಸುವ ನೂರಾರು ಅಂಡ್ರಾಯಿಡ್ ಫೋನ್ ಗಳಿವೆ. ಆದರೆ ಆ ರೀತಿಯ ಬಳಕೆದಾರರ ಅನುಭವ ನೀಡುವ ಫೋನ್ ತೀರಾ ಕಡಿಮೆ. 

ಲ್ಯಾಪ್ ಟಾಪ್, ಟ್ಯಾಬ್ಲೆಟ್, ಫೋನ್ ಹಾಗೂ ವಾಚ್ ಎಲ್ಲದರ ಜೊತೆ ಚೆನ್ನಾಗಿ ಇಂಟಿಗ್ರೇಟ್ ಆಗಿ ಯಾವುದೇ ಸಮಸ್ಯೆ ಇಲ್ಲದೇ ಹಲವು ಕಾಲದ ನಂತರವೂ ಅದೇ ವೇಗದಲ್ಲಿ ನಡೆಯುವ ಅಷ್ಟೇ ಉತ್ತಮ ಬಳಕೆದಾರರ ಅನುಭವ ಕೊಡುವ ಫೋನ್ ಐಫೋನ್ ಬಿಟ್ಟರೆ ಬೇರಿಲ್ಲ! 

ಐಫೋನ್ ಕ್ಯಾಮೆರಾ ಗುಣಮಟ್ಟ ಕೂಡಾ ಚೆನ್ನಾಗಿದೆ. ಅತಿ ಕಡಿಮೆ ಬೆಳಕಲ್ಲೂ ಚೆನ್ನಾಗಿ ಫೋಟೋ ತೆಗೆಯ ಬಲ್ಲುದು.

ಇಂದು ಅನೇಕ ಅಂಡ್ರಾಯಿಡ್ ಫೋನ್ ಗಳು ವೇಗ, ಕ್ಯಾಮರಾ ಗುಣಮಟ್ಟ ಇತ್ಯಾದಿಗಳಲ್ಲಿ ಪರವಾಗಿಲ್ಲ ಎನ್ನುವ ಹಾಗಿದೆ. ಅನೇಕ ಫ್ಲ್ಯಾಗ್ ಶಿಪ್ ಗಳು ಐಫೋನ್ ದಷ್ಟಲ್ಲದಿದ್ದರೂ ಉತ್ತಮ ಕ್ಯಾಮರಾ ಹೊಂದಿದೆ. ಗೂಗಲ್ ಪಿಕ್ಸೆಲ್ ಹಾಗೂ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ ೨೧ ಇತ್ಯಾದಿ.

ಆದರೂ ಎಲ್ಲ ಬಳಕೆದಾರರ ಅನುಭವ ಪರಿಗಣಿಸಿದಾಗ ಐಫೋನ್ ಐಫೋನೇ. ಅದು ಪ್ರಿಮಿಯಂ ಫೀಲಿಂಗ್ ನೀಡುತ್ತದೆ.

ಈಗ ಮಾರ್ಕೆಟ್ ಅಲ್ಲಿ ಯಾವ ಐಫೋನ್ ಮಾಡೆಲ್ ಇದೆ?


ಚಿತ್ರಕೃಪೆ: LUNEMax from Pixabay

ಈಗ ೨೦೨೨ರ ಜನವರಿಯಲ್ಲಿ ನಡೆಯುತ್ತಿರುವದು ಐಫೋನ್ 13. ಇದು ಎರಡು ವರ್ಶನ್ ಅಲ್ಲಿ ಬರುತ್ತೆ.
ಒಂದು ಐಫೋನ್ ೧೩ ಪ್ರೋ ಮತ್ತು ಇನ್ನೊಂದು ಐಫೋನ್ ೧೩ . ಇವೆರಡರ ಬೆಲೆ ಲಕ್ಷ ಮೀರುತ್ತದೆ. ಐಫೋನ್ ೧೩ ಮಿನಿ ಸಹ ಇದೆ. ಅದು ಕಡಿಮೆ ಬೆಲೆಗೆ ಸಿಗುತ್ತೆ.

ನಿಮಗೆ ಐಫೋನೇ ಬೇಕು ಆದರೆ ಅಷ್ಟು ಬಜೆಟ್ ಇಲ್ಲದಿದ್ದರೆ ಐಫೋನ್ ೧೨ ರ ಕಡೆ ಸಹ ನೋಡಿ.

ಇನ್ನು ಇದೇ ವರ್ಷ ಐಫೋನ್ ೧೪ ಬರಲಿದೆ. ಆಗ ಐಫೋನ್ ೧೩ / ಪ್ರೋ ಬೆಲೆ ಕಮ್ಮಿ ಆಗುತ್ತೆ. ಅಲ್ಲಿಯವರೆಗೆ ಕಾದರೆ ಸಹ ಆದೀತು.

ಐಫೋನ್ ಕಲಿಸುವ ಪಾಠ


ಚಿತ್ರಕೃಪೆ: John Appleseed on Unsplash

ಪ್ರತಿಯೊಂದು ವಿಚಾರದಿಂದ ನಾವು ಹಲವು ವಿಷಯ ಕಲಿಯಬಹುದು. ಸ್ಟೀವ್ ಜಾಬ್ಸ್ ಐಫೋನ್ ವಿನ್ಯಾಸಕ್ಕೆ ಬಳಸಿದ ಹೆಚ್ಚಿನ ಎಲ್ಲ ತಂತ್ರಜ್ಞಾನಗಳು ಯಾವುದೂ ಹೊಸದಿರಲಿಲ್ಲ. ಆಗ ಎಲ್ಲ ಕೀಲಿಮಣೆ ಫೋನ್ ಅಲ್ಲಿ ಇರಲೇ ಬೇಕು ಅನ್ನುವ ಕಾಲ. ಆದರೆ ಹಾರ್ಡವೇರ್ ಕೀಲಿಮಣೆ ತೆಗೆದು ಸ್ಟೈಲಸ್ ಇಲ್ಲದೇ ಫೋನ್ ಮಾಡಬೇಕೆಂಬ ನಿಲುವು ಐಫೋನ್ ನಿರ್ಮಾಣಕ್ಕೆ ಕಾರಣ. 

ಇದನ್ನೇ ಹೊಸ ಕಲ್ಪನೆ ಎನ್ನುವದು. ಏನಾದರೂ ಹೊಸತನ್ನು ಮಾಡಬೇಕೆಂಬ ಮೈಂಡ್ ಸೆಟ್ ನಮ್ಮನ್ನು ಯಾವ ಕ್ಷೇತ್ರದಲ್ಲಾದರೂ ಮುಂದೆ ತರಬಲ್ಲುದು ಎಂಬುದಕ್ಕೆ ಐಫೋನ್ ಒಂದು ಮಾದರಿ.

ಐಫೋನ್ ಗೆ ಆರಂಭದಲ್ಲಿ ಅದೇನೆ ಕಮೆಂಟ್ ಬಂದರು ಎಪಲ್ ಆಗಲೀ ಸ್ಟೀವ್ ಜಾಬ್ಸ್ ಆಗಲೀ ಎದೆಗುಂದಲಿಲ್ಲ. ಅದನ್ನು ಅವರು ಕಲ್ಪಿಸಿದ ರೂಪದಲ್ಲೇ ಎಣಿಸಿದ ಬೆಲೆಗೇ ಮಾರುಕಟ್ಟೆಗೆ ತಂದರು ಜಗತ್ತಿನ ಯಾವುದೇ ಕಂಪನಿ ನೋಡದ ಯಶಸ್ಸನ್ನು ಕಂಡರು.

ಕೊನೆಯ ಮಾತು

ನಮ್ಮಲ್ಲಿ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬ ಮಾತಿದೆ. ಇಂದು ಗೂಗಲ್ ನ ಅಂಡ್ರಾಯಿಡ್ ಫೋನ್ ಗಳು ಐಫೋನ್ ಗೆ ಹೋಲಿಕೆ ಮಾಡಬಲ್ಲಂತಹ ಫೋನ್ ಗಳು ಬಂದಿವೆ. ಅವು ಐಫೋನ್ ನ ಬೆಳವಣಿಗೆಯನ್ನು ಒಂದು ಮಟ್ಟಕ್ಕೆ ಕಟ್ಟಿ ಹಾಕಿವೆ. ಇದು ಎಪಲ್ ಗೆ ಸಮಸ್ಯೆ ಉಂಟು ಮಾಡುವ ಸಾಧ್ಯತೆ ಇದೆ. ಎಪಲ್ ತನ್ನ ಇನ್ನೋವೇಶನ್ ಅನ್ನು ಇನ್ನೊಂದು ಮಟ್ಟಕ್ಕೆ ಒಯ್ಯದಿದ್ದರೆ ಅದರ ಆ ಪ್ರಿಮಿಯಂ ಸ್ಥಾನವನ್ನು ಬೇರೆ ಫೋನ್ ಕಂಪನಿ ಆಕ್ರಮಿಸುವ ದಿನ ದೂರ ಇಲ್ಲ.

ಒಂದು ಕಡೆ ಅದರ ಎಪಲ್ ವಾಚ್ ಹಾಗೂ ಏರ್ ಪೋಡ್ ಕೂಡಾ ಸಕ್ಕತ್ ಹಿಟ್ ಆಗಿದೆ.

ಈ ೨೦೨೨ರ ಅಂತ್ಯಕ್ಕೆ ಎಪಲ್ ಹೊಸ ಐಫೋನ್ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಎಪಲ್ ನ ಕ್ಯಾಲಿಫೋರ್ನಿಯಾದ ಆಫೀಸಲ್ಲಿ ಏನು ಏನು ಹೊಸ ಪರಿಕಲ್ಪನೆ ಆಗುತ್ತಿದೆಯೋ? ಬಲ್ಲವರಾರು?

ಕಾದು ನೋಡೋಣ!

ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

ನೆನಪಿಡಿ: ಈ ಲೇಖನದಲ್ಲಿ ಅಮೇಜಾನ್ ಅಫಿಲಿಯೇಟ್ ಲಿಂಕ್ ಸಹ ಇದೆ. ಇದು ಗಣಕ ಪುರಿಗೆ ಆರ್ಥಿಕ ಬೆಂಬಲ ನೀಡುತ್ತದೆ. ನಿಮಗೆ ಯಾವುದೇ ರೀತಿಯ ಬೆಲೆಯ ವ್ಯತ್ಯಾಸ ಆಗದು. ಖರೀದಿ ಮಾಡುವದಿದ್ದರೆ ಈ ಲಿಂಕ್ ಬಳಸಿ ನಮ್ಮನ್ನು ಬೆಂಬಲಿಸಿ.

ಕಂಪ್ಯೂಟರ್ ಬಿಡಿ ಭಾಗಗಳು (ಪಾರ್ಟ್ಸ್) ಯಾವವು?

ಚಿತ್ರಕೃಪೆ: andreas160578 from Pixabay

ಕಂಪ್ಯೂಟರ್ ಯಂತ್ರದಲ್ಲಿ ಹಲವು ಬಿಡಿ ಭಾಗಗಳಿವೆ. ಅವು ಯಾವವು? ಅವುಗಳ ಕೆಲಸ ಏನು? ಅನ್ನುವದನ್ನು ಇಲ್ಲಿ ತಿಳಿಯೋಣ.

{tocify} $title={ವಿಷಯ ಸೂಚಿ}

ಕಂಪ್ಯೂಟರ್ ನ ಬಿಡಿ ಭಾಗಗಳು

ಕಂಪ್ಯೂಟರ್ ನ ಬಿಡಿಭಾಗಗಳನ್ನು ಈ ರೀತಿ ವಿಂಗಡಿಸಬಹುದು.

 • ಇನ್ ಪುಟ್ ಸಾಧನ
 • ಔಟ್ ಪುಟ್ ಸಾಧನ
 • ಸಿಪಿಯು ಯುನಿಟ್

ಈ ಎಲ್ಲ ಬಿಡಿ ಭಾಗಗಳು ಎಲ್ಲ ರೀತಿಯ ಕಂಪ್ಯೂಟರ್ ಅಲ್ಲಿ ಇದ್ದೇ ಇರುತ್ತೆ. ಅದು ಡೆಸ್ಕ್ ಟಾಪ್, ಲ್ಯಾಪ್ ಟಾಪ್ ಅಥವಾ ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್ ಆಗಿರಬಹುದು. ಅಷ್ಟೇ ಅಲ್ಲ ಸ್ಮಾರ್ಟ್ ಟಿವಿ, ಫ್ರಿಡ್ಜ್, ಕಾರು ಅವುಗಳಲ್ಲಿರುವ ಕಂಪ್ಯೂಟರ್ ಗಳಲ್ಲೂ ಈ ಎಲ್ಲ ಬಿಡಿ ಭಾಗ ಇದ್ದೇ ಇರುತ್ತೆ. 

ಆದರೆ ಇನ್ಪುಟ್, ಔಟ್ ಪುಟ್ ಸಾಧನ ಬೇರೆ ಇರುತ್ತೆ. ಉದಾಹರಣೆಗೆ ಸ್ಮಾರ್ಟ್ ಟಿವಿಯಲ್ಲಿ ಮೈಕ್ರೋ ಫೋನ್ ಹಾಗೂ ರಿಮೋಟ್ ಕಂಟ್ರೋಲ್ ಇನ್ಪುಟ್ ಸಾಧನ, ಕಾರಲ್ಲಿ, ಫ್ರಿಡ್ಜ್ ಅಲ್ಲಿ ಹಲವು ಸೆನ್ಸರ್ ಗಳು ಇನ್ ಪುಟ್ ತರಹ ಕೆಲಸ ಮಾಡುತ್ತವೆ.

ಬನ್ನಿ ಕಂಪ್ಯೂಟರ್ ಬಿಡಿ ಭಾಗಗಳ (ಪಾರ್ಟ್ಸ್) ಬಗ್ಗೆ ತಿಳಿಯೋಣ.

ಇನ್ ಪುಟ್ ಸಾಧನ


ಕಂಪ್ಯೂಟರ್ ಗೆ ಆಜ್ಞೆಗಳನ್ನು ನಾವು ಕೊಡಬೇಕು. ಅದು ತನ್ನ ಸುತ್ತಲಿನ ಮಾಹಿತಿ ತಿಳಿಯಬೇಕು. ಅಷ್ಟೇ ಅಲ್ಲ ಟೆಕ್ಸ್ಟ್ (ಅಕ್ಷರ), ವಿಡಿಯೋ, ಆಡಿಯೋ ಇತ್ಯಾದಿಗಳು ಅದಕ್ಕೆ ಕೊಡಬೇಕು. ಅದು ಹೇಗೆ ಸಾಧ್ಯ? ಅದು ಈ ಇನ್ಪುಟ್ ಡಿವೈಸ್ (ಸಾಧನ) ಗಳಿಂದ ಸಾಧ್ಯ. 

ಇನ್ಪುಟ್ ಸಾಧನಗಳು ಕೊಟ್ಟ ಮಾಹಿತಿ ಯನ್ನು ಗ್ರಹಿಸಿ ಡಿಜಿಟಲ್ ರೂಪದಲ್ಲೋ ಅಥವಾ ಅನಾಲಾಗ್ ರೂಪದಲ್ಲಿ ಬದಲಾಯಿಸಿ ಕಂಪ್ಯೂಟರ್ ಗೆ ನೀಡುತ್ತದೆ. 

ಇವಕ್ಕೆ ಅಂತರ್ ಅಥವಾ ಒಳಮುಖ ಸಾಧನ ಕೂಡಾ ಎನ್ನಬಹುದು.

ಇನ್ಪುಟ್ ಸಾಧನಗಳಿಗೆ ಉದಾಹರಣೆಗಳು

 • ಕೀಲಿಮಣೆ (ಕೀಬೋರ್ಡ್)
 • ಮೂಷಕ (ಮೌಸ್)
 • ಡಿಜಿಟಲ್ ಟ್ಯಾಬ್ಲೆಟ್
 • ಟಚ್ ಸ್ಕ್ರೀನ್
 • ಮೈಕ್ರೋ ಫೋನ್
 • ವೆಬ್ ಕ್ಯಾಮೆರಾ
 • ಫಿಂಗರ್ ಪ್ರಿಂಟ್ ರೀಡರ್ (ಬೆರಳಚ್ಚು ಗ್ರಾಹಕ)
 • ಟಚ್ ಪ್ಯಾಡ್
 • ಬಾರ್ ಕೋಡ್ ರೀಡರ್

ಔಟ್ ಪುಟ್ ಸಾಧನ

ಕಂಪ್ಯೂಟರ್ ಬಳಸುವಾಗ ಅದು ಏನನ್ನು ಸಂಸ್ಕರಿಸ್ತಾ ಇದೆ? ನಾವು ಕೊಟ್ಟ ಇನ್ ಪುಟ್ ಮಾಹಿತಿ ಏನು? ಇದೆಲ್ಲಾ ತಿಳಿಯುವದು ಹೇಗೆ? ಅದಕ್ಕೆ ಔಟ್ ಪುಟ್ ಸಾಧನ ಬೇಕು. ಅಲ್ವಾ?

ಔಟ್ ಪುಟ್ ಸಾಧನ ಕಂಪ್ಯೂಟರ್ ಪ್ರಾಸೆಸ್ ಮಾಡಿದ ಅಕ್ಷರ, ಚಿತ್ರ, ವಿಡಿಯೋ, ಆಡಿಯೋ ಮೊದಲಾದ ಕಂಟೆಂಟ್ ಅನ್ನು ನಾವು ನೋಡಲು/ಕೇಳಲು ಅನುಕೂಲ ಮಾಡಿ ಕೊಡುತ್ತದೆ.

ಇವಕ್ಕೆ ಬಹಿರ್ ಅಥವಾ ಹೊರಮುಖ ಸಾಧನ ಕೂಡಾ ಹೇಳಬಹುದು.

ಔಟ್ ಪುಟ್ ಸಾಧನಗಳಿಗೆ ಉದಾಹರಣೆಗಳು:
 • ಮಾನಿಟರ್ / ಪರದೆ / ಡಿಸ್ಪ್ಲೇ
 • ಸ್ಪೀಕರ್ (ಧ್ವನಿ ವರ್ಧಕ)
 • ಪ್ರಿಂಟರ್

ಸಿಪಿಯು ಯುನಿಟ್

ಸಿಪಿಯು ಯುನಿಟ್ ಕಂಪ್ಯೂಟರ್ ನ ಹೃದಯ / ಮೆದುಳು ಎಲ್ಲ. ಇದು ಇಡೀ ಕಂಪ್ಯೂಟರ್ ಬಿಡಿ ಭಾಗ ಗಳಿಗೆ ಬೇಕಾದ ಪವರ್ ನೀಡುತ್ತದೆ.

ಅಷ್ಟೇ ಅಲ್ಲ ಮಾಹಿತಿಯನ್ನು ಇನ್ಪುಟ್ ಸಾಧನಗಳಿಂದ ಪಡೆದು ಸಾಫ್ಟವೇರ್ ಆದೇಶದಂತೆ ಸಂಸ್ಕರಿಸಿ (ಪ್ರಾಸೆಸ್ ಮಾಡಿ)  ರಕ್ಷಿಸುತ್ತದೆ ಹಾಗೂ ಔಟ್ ಪುಟ್ ಸಾಧನಗಳಲ್ಲಿ ಪ್ರದರ್ಶಿಸುತ್ತದೆ.

ಸಿಪಿಯು ಮುಖ್ಯ ಕೆಲಸ

ಸಿಪಿಯು ಯುನಿಟ್ ನ ಮುಖ್ಯ ಕೆಲಸಗಳು ಹೀಗಿವೆ.

 • ಮಾಹಿತಿ ಸಂಸ್ಕರಿಸಿ ಲೆಕ್ಕಾಚಾರ ಹಾಗೂ ಲಾಜಿಕ್ (ತರ್ಕ) ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುವದು.
 • ಇನ್ ಪುಟ್ ಹಾಗೂ ಔಟ್ ಪುಟ್ ಸಾಧನಗಳನ್ನು ನಿಯಂತ್ರಿಸುವದು ಹಾಗೂ ವಿದ್ಯುತ್ ನೀಡುವದು.
 • ಮಾಹಿತಿಯನ್ನು ರಕ್ಷಿಸುವದು
 • ಮಾಹಿತಿಯನ್ನು ಅಂತರ್ಜಾಲಕ್ಕೆ ಕಳುಹಿಸುವದು ಮತ್ತು ಪಡೆಯುವದು.

ಸಿಪಿಯು ಉಪ ಭಾಗಗಳು

ಸಿಪಿಯು ಎಂದರೆ ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್ / ಕೇಂದ್ರೀಯ ಸಂಸ್ಕರಣಾ ವಿಭಾಗ. 

ಸಿಪಿಯು ಯುನಿಟ್ ಅಲ್ಲಿ ಮುಖ್ಯವಾಗಿ ಈ ಉಪ ಭಾಗಗಳಿವೆ.

 • ಮದರ ಬೋರ್ಡ್
 • ಸಿಪಿಯು (ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್ / ಕೇಂದ್ರೀಯ ಸಂಸ್ಕರಣಾ ವಿಭಾಗ)
 • ಜಿಪಿಯು (ಗ್ರಾಫಿಕ್ಸ್ ಪ್ರಾಸೆಸಿಂಗ್ ಯುನಿಟ್ / ದೃಶ್ಯ ಸಂಸ್ಕರಣಾ ವಿಭಾಗ)
 • ರಾಮ್ ಮೆಮರಿ
 • ರೊಮ್ ಮೆಮರಿ
 • ಪವರ್ ಸಪ್ಲೈ / ಬ್ಯಾಟರಿ
 • ಸ್ಟೋರೇಜ್ ಸಾಧನ - ಎಸ್ ಎಸ್ ಡಿ ಹಾಗೂ ಹಾರ್ಡ್ ಡಿಸ್ಕ್
 • ಕೂಲಿಂಗ್ ಸಾಧನ - ಫ್ಯಾನ್ ಅಥವಾ ಬೇರೆ ವಿಧಾನ

ಬಿಡಿ ಭಾಗಗಳ ಕೆಲಸಗಳು

ಬನ್ನಿ ಈ ಬಿಡಿ ಭಾಗಗಳು ಏನು ಕೆಲಸಕ್ಕೆ ಉಪಯುಕ್ತ ಅನ್ನುವದನ್ನು ನೋಡೋಣ.

ಬಿಡಿ ಭಾಗ ವಿಧ ಬಿಡಿ ಭಾಗ ಹೆಸರು ಕೆಲಸ
ಇನ್ ಪುಟ್ ಕೀಲಿಮಣೆ ಅಕ್ಷರ ಹಾಗೂ ಕಮಾಂಡ್ ನೀಡುವದು. ಪವರ್ ಬಟನ್ ಸಹಾ ಇರುತ್ತೆ. ಕೆಲವು ಕೀಲಿಮಣೆಗಳಲ್ಲಿ ಫಿಂಗ ಪ್ರಿಂಟ್ ರೀಡರ್ ಕೂಡಾ ಇರುತ್ತೆ.
ಇನ್ ಪುಟ್ ಮೌಸ್ ಪರದೆಯ ಯಾವುದೇ ಭಾಗದಲ್ಲಿ ಪಾಯಿಂಟ್ ಮಾಡಿ ಅಲ್ಲಿ ಕ್ಲಿಕ್, ಡ್ರ್ಯಾಗ್ ಮತ್ತು ಡ್ರಾಪ್, ಸ್ಕ್ರಾಲ್ ಇತ್ಯಾದಿ ಕೆಲಸ ಮಾಡಬಹುದು.
ಇನ್ ಪುಟ್ ಮೈಕ್ರೋ ಫೋನ್ ಮಾತಿನಿಂದ ಆಜ್ಞೆ ನೀಡಬಹುದು, ಆಡಿಯೋ ರೆಕಾರ್ಡಿಂಗ್, ವಿಡಿಯೋ ಅಥವಾ ಆಡಿಯೋ ಕಾಲ್ ಮಾಡಬಹುದು.
ಇನ್ ಪುಟ್ ಕ್ಯಾಮರಾ ವಿಡಿಯೋ ಕಾಲ್ ಮಾಡಬಹುದು.
ಇನ್ ಪುಟ್ ಡಿಜಿಟಲ್ ಟ್ಯಾಬ್ಲೆಟ್ ಚಿತ್ರ ಬಿಡಿಸಲು ಇದನ್ನು ಬಳಸುತ್ತಾರೆ
ಇನ್ ಪುಟ್ ಟಚ್ ಪ್ಯಾಡ್ ಪ್ರಮುಖವಾಗಿ ಲ್ಯಾಪ್ ಟಾಪ್ ಅಲ್ಲಿ ಇದನ್ನು ಬಳಸುತ್ತಾರೆ. ಇದು ಮೌಸ್ ಹಾಗೆ ಕ್ಲಿಕ್, ಡಬಲ್ ಕ್ಲಿಕ್, ಕರ್ಸರ್ ಮೂವ್ ಮಾಡಲು, ಡ್ರ್ಯಾಗ್ ಮತ್ತು ಡ್ರಾಪ್ ಎಲ್ಲ ಕೆಲಸಗಳಿಗೆ ಬಳಸಬಹುದು.
ಇನ್ ಪುಟ್ ಟಚ್ ಸ್ಕ್ರೀನ್ ಸ್ಮಾರ್ಟ್ ಫೋನಲ್ಲಿ ಇದು ಪ್ರಮುಖ ಇನ್ ಪುಟ್ ಆಗಿದೆ. ಹಲವು ಲ್ಯಾಪ್ ಟಾಪ್ ಗಳು ಕೂಡಾ ಟಚ್ ಸ್ಕ್ರೀನ್ ಜೊತೆಗೆ ಬರುತ್ತದೆ.
ಔಟ್ ಪುಟ್ ಮಾನಿಟರ್ ದೃಶ್ಯ ನೋಡಲು, ಅಕ್ಷರ ಓದಲು
ಔಟ್ ಪುಟ್ ಸ್ಪೀಕರ್ ಧ್ವನಿ ಕೇಳಲು, ವಿಡಿಯೋ / ಆಡಿಯೋ ಕಾಲ್ ಮಾಡಲು
ಔಟ್ ಪುಟ್ ಪ್ರಿಂಟರ್ ಮುದ್ರಣ / ಪ್ರಿಂಟ್ ಮಾಡಲು
ಸಿಪಿಯು ಯುನಿಟ್ ಮದರ್ ಬೋರ್ಡ್ ಇದು ಮುಖ್ಯ ಪ್ರಿಂಟಡ್ ಸರ್ಕ್ಯೂಟ್ ಬೋರ್ಡ್ ಆಗಿದ್ದು ಇದರಲ್ಲಿ ಸಿಪಿಯು, ಜಿಪಿಯು, ರಾಮ್ ಮೆಮರಿ, ರೊಮ್ ಮೆಮರಿ ಹಾಕುವದಕ್ಕೆ ಜಾಗ ಇರುತ್ತದೆ. ಅಷ್ಟೇ ಅಲ್ಲ ವಿವಿಧ ಪೋರ್ಟ್ ಗಳಿಗೆ, ವೈ ಫೈ, ಬ್ಲ್ಯೂಟೂತ್ ಗೆ ಬೇಕಾದ ಚಿಪ್ ಗಳು ಸಹ ಇಲ್ಲಿರುತ್ತದೆ. ಇತ್ತೀಚೆಗೆ ಸಿಸ್ಟೆಮ್ ಆನ್ ಚಿಪ್  ಅಂದರೆ ಒಂದೇ ಚಿಪ್ ಅಲ್ಲಿ ಎಲ್ಲವೂ ಇರುವ ವ್ಯವಸ್ಥೆ ಬಂದಿದ್ದು ಸ್ಮಾರ್ಟ್ ಫೋನ್ ಹಾಗೂ ಲ್ಯಾಪ್ ಟಾಪ್ ಅಲ್ಲಿ ಇದನ್ನು ಬಳಸಲಾಗುತ್ತಿದೆ. ಆದ್ದರಿಂದ ಮದರ ಬೋರ್ಡ್ ಗಾತ್ರ  ಚಿಕ್ಕದಾಗುತ್ತಿದೆ.
ಸಿಪಿಯು ಯುನಿಟ್ ಸಿಪಿಯು ಇದು ಕಂಪ್ಯೂಟರ್ ನ ಮೆದುಳು ಎಂದರೆ ತಪ್ಪಲ್ಲ. ಎಲ್ಲ ಮಾಹಿತಿ ಸಂಸ್ಕರಿಸುವದು, ಪ್ರೋಗ್ರಾಮ್ ಗಳಲ್ಲಿರುವ ಆಜ್ಞೆಗಳನ್ನು ಚಾಚೂ ತಪ್ಪದೆ ನಿರ್ವಹಿಸುವದು ಇದರ ಮುಖ್ಯ ಕೆಲಸ.
ಸಿಪಿಯು ಯುನಿಟ್ ಜಿಪಿಯು ಇದು ದೃಶ್ಯ ಗಳಾದ ವಿಡಿಯೋ ಹಾಗೂ ಫೋಟೋ ಪ್ರಾಸೆಸಿಂಗ್ ಗೆ, ೩ಡಿ ರೆಂಡರಿಂಗ್, ವಿಡಿಯೋ ಗೇಮ್ ಗಳಂತಹ ಕೆಲಸಗಳಲ್ಲಿ ಜಿಪಿಯು ಬಳಕೆ ಆಗುತ್ತದೆ. ಹೆಚ್ಚಿನ ಆಧುನಿಕ ಸಿಪಿಯು ಒಳಗೇ ಇಂಟರ್ನಲ್ ಜಿಪಿಯು ಇರುತ್ತದೆ. ಆದರೆ ಶಕ್ತಿಶಾಲಿ ಜಿಪಿಯುಗಳು ಪ್ರತ್ಯೇಕವಾಗಿರುತ್ತದೆ.
ಸಿಪಿಯು ಯುನಿಟ್ ರಾಮ್ ಮೆಮರಿ ಇದು ಆಪರೇಟಿಂಗ್ ಸಿಸ್ಟೆಮ್ ಹಾಗೂ ಬಳಸುತ್ತಿರುವ ಅಪ್ಲಿಕೇಶನ್ ಗಳ ಪ್ರೋಗ್ರಾಮ್ ಹಾಗೂ ಡಾಟಾ ಅನ್ನು ಹಿಡಿದಿಡುತ್ತದೆ. ಇದರಿಂದ ಕಂಪ್ಯೂಟರ್ ವೇಗ ಹೆಚ್ಚುತ್ತದೆ.
ಸಿಪಿಯು ಯುನಿಟ್ ರೊಮ್ ಮೆಮರಿ ಇದು ಬಯೋಸ್(BIOS) ಗೆ ಸಂಬಂಧಿಸಿದ ಆಜ್ಞೆ ಹಾಗೂ ಡಾಟಾ ಅನ್ನು ಇಟ್ಟು ಕೊಂಡಿರುತ್ತೆ. ಯಾವುದೇ ಕಂಪ್ಯೂಟರ್ ಆನ್ ಮಾಡಿದಾಗ ಈ ಸಾಫ್ಟವೇರ್ ಮೊದಲು ಲೋಡ್ ಆಗಿ ಎಲ್ಲ ಇನ್ ಪುಟ್, ಔಟ್ ಪುಟ್ ಸರಿಯಿದೆಯೇ ಪರೀಕ್ಷಿಸಿ ಆಮೇಲೆ ಆಪರೇಟಿಂಗ್ ಸಿಸ್ಟೆಮ್ ಲೋಡ್ ಆಗುವದು.
ಸಿಪಿಯು ಯುನಿಟ್ ಪವರ್ ಸಪ್ಲೈ / ಬ್ಯಾಟರಿ ಇದು ಕಂಪ್ಯೂಟರ್ ನ ಎಲ್ಲ ಬಿಡಿ ಭಾಗಗಳಿಗೆ ಬೇಕಾದ ವಿದ್ಯುತ್ ನೀಡುತ್ತೆ. ಸ್ಮಾರ್ಟ್ ಫೋನ್ ಹಾಗೂ ಲ್ಯಾಪ್ ಟಾಪ್ ಅಲ್ಲಿ ಬ್ಯಾಟರಿ ಇದ್ದು ಅಡಾಪ್ಟರ್ ಮೂಲಕ ಚಾರ್ಜ್ ಆಗುತ್ತೆ.
ಸಿಪಿಯು ಯುನಿಟ್ ಸ್ಟೋರೇಜ್ ಸಾಧನ ಹಾರ್ಡ್ ಡಿಸ್ಕ್ ಹಾಗೂ ಎಸ್ ಎಸ್ ಡಿ ಗಳು ಮುಖ್ಯವಾದ ಸ್ಟೋರೇಜ್ ಸಾಧನಗಳು. ಹಳೆಯ ಕಾಲದಲ್ಲಿ ಪಂಚ್ಡ್ ಕಾರ್ಡ್, ಟೇಪ್, ಸಿಡಿ ಡ್ರೈವ್ ಮೊದಲಾದ ಸಾಧನ ಬಳಸುತ್ತಿರು. ಈಗಲು ದೊಡ್ಡ ದೊಡ್ಡ ಡಾಟಾ ಸೆಂಟರ್ ಗಳು ಟೇಪ್ ಮಾಧ್ಯಮವನ್ನು ಬಳಸುತ್ತಿವೆ.

ಇವೆಲ್ಲ ಸಾಧನ / ಬಿಡಿ ಭಾಗಗಳ ಬಗ್ಗೆ ದೊಡ್ಡ ಕಥೆನೇ ಇದೆ. ಪ್ರತ್ಯೇಕ ಲೇಖನಗಳಲ್ಲಿ ವಿವರವಾಗಿ ಹೇಳ್ತಿನಿ. ಆಯ್ತಾ?

ಕಂಪ್ಯೂಟರ್ ನ ಅನುಕೂಲ ಹಾಗೂ ಕೊರತೆಗಳ ಬಗ್ಗೆ ಮುಂದಿನ ಲೇಖನದಲ್ಲಿ ತಿಳಿಯೋಣ.

ಚಿತ್ರಕೃಪೆ: Martin Garrido on Unsplash

ಚಿತ್ರಕೃಪೆ: Oscar Ivan Esquivel Arteaga on Unsplash

ಚಿತ್ರಕೃಪೆ: Jon Tyson on Unsplash

ಚಿತ್ರಕೃಪೆ: Dose Media on Unsplash

ಚಿತ್ರಕೃಪೆ: Galymzhan Abdugalimov on Unsplash

ಚಿತ್ರಕೃಪೆ: Kitai Jogia on Unsplash

ಚಿತ್ರಕೃಪೆ: Paul Esch-Laurent on Unsplash

ಚಿತ್ರಕೃಪೆ: Mahrous Houses on Unsplash

ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.


© ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ, ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ವಿಸ್ಮಯನಗರಿ.ಕಾಂ