ಇಂದು ಸಾವಿರಾರು ಸ್ಮಾರ್ಟ್ ಫೋನ್ ಮೊಡೆಲ್ ಗಳಿವೆ. ಲೆಕ್ಕವಿಲ್ಲದಷ್ಟು ಬ್ರ್ಯಾಂಡ್ ಗಳಿವೆ. ಆದರೆ ಐಫೋನ್ ಒಂದೇ ಸಾಕು ಅವೆಲ್ಲವನ್ನು ಸೋಲಿಸಲು. ಐ ಫೋನ್ ಗೆ ಅದೊಂದೇ ಸಾಟಿ. ನಿಜ ಅದು ದುಬಾರಿ ಪ್ರಿಮಿಯಂ ಫೋನ್.
ಹಣಕ್ಕೆ ತಕ್ಕ ಮೌಲ್ಯ ಕೊಡುವ ಫೋನ್ ಐಫೋನ್ ಅಲ್ಲ. ಆ ವಿಚಾರದಲ್ಲಿ ಎಂಡ್ರಾಯಿಡ್ಡೇ ವಾಸಿ!!
ಇರಲಿ ಬನ್ನಿ ಐಫೋನ್ ನ ಇತಿಹಾಸಕ್ಕೆ ಸಂಬಂಧಿಸಿದ ಹಲವು ಕೌತುಕದ ವಿಷಯಗಳನ್ನು ಈ ಲೇಖನದಲ್ಲಿ ತಿಳಿಯೋಣ. ಅದಕ್ಕೇನು ಹಣ ಕೊಡಬೇಕಿಲ್ಲ ಅಲ್ಲವೇ?
ನಿಮ್ಮ ಬಳಿ ಐಫೋನ್ ಇದೆಯಾ? ಹೇಗನ್ನಿಸುತ್ತೆ?
ಮುಖಪುಟ ಚಿತ್ರಕೃಪೆ: Jeremy Bezanger on Unsplash
{tocify} $title={ವಿಷಯ ಸೂಚಿ}
ಈ ಮೊದಲು ಯಾರೂ ಐಫೋನ್ ಈ ಮಟ್ಟದ ಯಶಸ್ಸು ಸಾಧಿಸುತ್ತೆ ಅಂದು ಕೊಂಡೇ ಇರಲಿಲ್ಲ. ಇದು ಬಿಡುಗಡೆ ಆದಾಗ ಆಗಲೇ ಜನಪ್ರಿಯ ಸ್ಮಾರ್ಟ್ ಫೋನ್ ಕಂಪನಿಗಳು, ಮೈಕ್ರೋಸಾಫ್ಟ್ ಕೂಡಾ ಇದನ್ನು ಹಗುರವಾಗಿ ತಗೊಂಡಿದ್ದರು. ಮೊದಲಿನಿಂದ ಸಿರಿಯಸ್ ಆಗಿ ತಗೊಂಡಿದ್ದು ಗೂಗಲ್ ಮಾತ್ರ. ಆಮೇಲೆ ಈ ಗಾಢ ನಿದ್ದೆಯಿಂದ ಉಳಿದವರು ಎದ್ದರೂ ಅದು ತುಂಬಾ ತಡ ಆಗಿತ್ತು.
ಇಂದು ಎಪಲ್ ೩ ಟ್ರಿಲಿಯನ್ ಡಾಲರ್ (ಸುಮಾರು ೨೨೨ ಲಕ್ಷ ಕೋಟಿ ರೂ, ಹೆಚ್ಚು ಕಡಿಮೆ ಇಡೀ ಭಾರತದ ಈಗಿನ ಜಿಡಿಪಿ) ಕಂಪನಿ ಆಗಿದ್ದರೆ ಅದಕ್ಕೆ ಅವರ ಐಫೋನ್ ಉತ್ಪನ್ನ ಮುಖ್ಯ ಕಾರಣ.
ಐಫೋನ್ ಗಿಂತ ಮುಂಚೆ ಎಪಲ್ ಸ್ಥಿತಿ
ನೀವು ಒಂದು ಪ್ರಿಮಿಯಂ ಲ್ಯಾಪ್ ಟಾಪ್ ಹುಡುಕುತ್ತಿದ್ದರೆ ಎಪಲ್ ಮ್ಯಾಕ್ ಬುಕ್ ಒಂದು ಉತ್ತಮ ಆಯ್ಕೆ. ಆದರೆ ಹಾಗೆಯೇ ನಿಮ್ಮ ಜೇಬು ಖಾಲಿ ಆಗುತ್ತೆ!
ಆಪಲ್ ಹೊರತಂದ ಐಪಾಡ್ ಕೂಡಾ ಕ್ರಾಂತಿಕಾರಿಯೇ. ಐಪೊಡ್ ಶಫಲ್, ಐಪೊಡ್ ನ್ಯಾನೋ, ಐಪೊಡ್ ಟಚ್ ಒಂದಕ್ಕಿಂತ ಇನ್ನೊಂದು.
ಐಫೋನ್ ರಿಲೀಸ್ ಮಾಡುವಾಗ ಆಪಲ್ ನ ಐಪೊಡ್ ಉತ್ಪನ್ನ ಪ್ರಪಂಚಾದ್ಯಂದ ಅತಿ ಜನಪ್ರಿಯ ಆಗಿತ್ತು.
ಚಿತ್ರಕೃಪೆ: Glen Carrie on Unsplash
ಇಂದೂ ಕೂಡಾ ಆ ಒಂದೂವರೆ ಇಂಚು ಉದ್ದಗಲ ಹಾಗೂ ಕಾಲಿಂಚು ಅದಕ್ಕಿಂತ ಕಡಿಮೆ ದಪ್ಪದ ಚಿಕ್ಕ ಐಪಾಡ್ ಶಫಲ್ (Ipod Shuffle) ಹೇಗೆ ಸಾವಿರಾರು ಹಾಡು ಉಳಿಸಿಕೊಂಡು ದಿನವಿಡೀ ಹಾಡನ್ನು ಪ್ಲೇ ಮಾಡುತ್ತಿತ್ತು ಎಂಬುದನ್ನು ನೋಡಿದರೆ ನೀವು ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುತ್ತೀರಿ.
ಆಪಲ್ ನ ಸಿ ಇ ಓ ಸ್ಟೀವ್ ಜಾಬ್ಸ್ ಒಬ್ಬ ಪರ್ಫೆಕ್ಷನಿಸ್ಟ್ ಆಗಿದ್ದು ಹೊಸ ಉತ್ಪನ್ನ ಏನನ್ನು ತಯಾರಿಸಲಿ ಎಂದು ವಿಚಾರ ಮಾಡುತ್ತಲೇ ಇದ್ದ. ಅವರ ಆ ಗುಣವೇ ಉತ್ತಮ ಡೆಸ್ಕ್ ಟಾಪ್, ಲ್ಯಾಪ್ ಟಾಪ್, ಐಪೊಡ್, ಐಫೋನ್ ಹೀಗೆ ಮಾಡಲು ಎಪಲ್ ಗೆ ಅನುಕೂಲ ಆಯ್ತು ಎಂದರೆ ತಪ್ಪಿಲ್ಲ.
ಸ್ಟೈಲಸ್ ಪೆನ್ ಬಳಸಿ ಆಪರೇಟ್ ಮಾಡುವ ಕಂಪ್ಯೂಟರ್ ಗಳು ೨೦೦೦ ಇಸವಿ ಸುಮಾರಿಗೆ ಸಾಮಾನ್ಯವಾಗಿ ಲಭ್ಯ ಇದ್ದವು. ಆಗ ಎಪಲ್ ನ ಸ್ಟೀವ್ ಜಾಬ್ಸ್ ಅವರಿಗೆ ಸ್ಟೈಲಸ್ ಪೆನ್ ಬದಲಾಗಿ ಕೈ ಬೆರಳುಗಳ ಬಳಸಿ ಬಳಸುವ ಕಂಪ್ಯೂಟರ್ ತಯಾರಿಸುವ ಯೋಚನೆ ಬಂತು.
ಆಪಲ್ ನಿಂದ ಐಫೋನ್ ನ ರಹಸ್ಯವಾಗಿ ತಯಾರಿಕೆ
ಯಾಕೆಂದರೆ ಆ ಸಮಯದಲ್ಲಿ ಬಂದ ಸ್ಮಾರ್ಟ್ ಫೋನ್ ಗಳು ಎಂಪಿ೩ ಹಾಡನ್ನು ಪ್ಲೇ ಮಾಡುವ ಸಾಮರ್ಥ್ಯ ಹೊಂದಿದ್ದವು. ಅವು ಐಪೊಡ್ ಮಾರುಕಟ್ಟೆ ಎಳೆದು ಕೊಳ್ಳುವ ಸಾಧ್ಯತೆ ಇತ್ತು.
ಮೊಟೊರೊಲಾ ಜೊತೆ ಎಪಲ್ ಐಟ್ಯೂನ್ಸ್ ಸಾಫ್ಟವೇರ್ ಅನ್ನು ಮೊಟೊರೊಲಾ ರೋಕ್ರ್ (ROKR) ಜೊತೆ ಬಳಸುವ ಒಪ್ಪಂದ ಮಾಡಿಕೊಂಡರು. ಆದರೆ ಅದು ಯಶಸ್ವಿ ಆಗಲಿಲ್ಲ. ಹೀಗೆ ಬೇರೆ ಫೋನ್ ಕಂಪನಿ ಜೊತೆ ಐಟ್ಯೂನ್ ಮಾರಿ ಐಪೊಡ್ ಉಳಿಸಲಾಗದು ಎಂದು ಎಪಲ್ ತಾನೇ ಐಪೊಡ್ ಸೌಲಭ್ಯ ಇರುವ ಫೋನ್ ಮಾಡುವ ನಿರ್ಧಾರ ಕೈಗೊಂಡಿತು.
ಆಮೇಲೆ ೨೦೦೫ರ ಸುಮಾರಿಗೆ ರಹಸ್ಯವಾಗಿ ಪ್ರಾಜೆಕ್ಟ್ ಪರ್ಪಲ್ ೨ ಹೆಸರಲ್ಲಿ ಟಚ್ ಸ್ಕ್ರೀನ್ ಹೊಂದಿರುವ ಮೊಬೈಲ್ ಫೋನ್, ಐಪೊಡ್ ಹಾಗೂ ಅಂತರ್ಜಾಲ ಬ್ರೌಸಿಂಗ್ ಈ ಎಲ್ಲ ಸೌಲಭ್ಯ ಇರುವ ಉತ್ಪನ್ನದ ವಿನ್ಯಾಸ ಆರಂಭಿಸಲಾಯ್ತು.
ಅದಕ್ಕಾಗಿ ಪ್ರೋಟೋಟೈಪ್ ನಿರ್ಮಿಸಲಾಯ್ತು. ಇದರ ಮುಖ್ಯ ಉದ್ದೇಶ ಐಪೊಡ್ ಹಾಗೂ ಐಟ್ಯೂನ್ ಜೊತೆ ಫೋನ್ ಸೌಲಭ್ಯ ನೀಡುವದಾಗಿತ್ತು.
ಐಫೋನ್ ನ ವಿನ್ಯಾಸ ಹಾಗೂ ನಿರ್ಮಾಣ ಎಷ್ಟು ರಹಸ್ಯವಾಗಿತ್ತೆಂದರೆ ಯೂಟ್ಯೂಬ್ / ಗೂಗಲ್ ಮ್ಯಾಪ್ ಎರಡು ಎಪ್ ಐಫೋನ್ ೧ ರಲ್ಲಿ ಇದ್ದರೂ ಗೂಗಲ್ ಗೆ ಸಹ ಫೋನಿನ ಬಗ್ಗೆ ಪೂರ್ಣ ವಿವರ ತಿಳಿದಿರಲಿಲ್ಲ!
ಐಫೋನಲ್ಲಿ ಬಳಸಲಾದ ತಂತ್ರಜ್ಞಾನ ಯಾವುದೂ ಹೊಸತಲ್ಲ. ಆದರೆ ಅದೆಲ್ಲವನ್ನು ಬಳಸಿ ಬೆರಳಿಂದ ಆಪರೇಟ್ ಮಾಡುವ ಕೀಲಿಮಣೆ ಇಲ್ಲದಿರುವ ಫೋನ್ ಹೊಸ ಕಲ್ಪನೆ.
ಐಫೋನ್ ಗೂ ಮೊದಲು ಕೀಲಿಮಣೆ ಹಾಗೂ ಸ್ಟೈಲಸ್ ಪೆನ್ ಸ್ಮಾರ್ಟ್ ಫೋನ್ ಅವಿಭಾಜ್ಯ ಅಂಗ ಆಗಿತ್ತು.ಈ ಸಂಪ್ರದಾಯ ಮೊದಲು ಮುರಿದಿದ್ದು ಐಫೋನ್.
ಸುಮಾರು ಎರಡುವರೆ ವರ್ಷ ತೆಗೆದುಕೊಂಡ ಈ ಫೋನ್ ವಿನ್ಯಾಸ ಹಾಗೂ ಸಾಫ್ಟವೇರ್ ಅಲ್ಲಲ್ಲಿ ಗಾಳಿ ಮಾತಿದ್ದರೂ ವಿವರಗಳ ರಹಸ್ಯವನ್ನು ಕೊನೆಯವರೆಗೆ ಎಪಲ್ ಕಾಪಿಟ್ಟಿತ್ತು.
ಐಫೋನ್ ಬಿಡುಗಡೆ
ಹದಿನೈದು ವರ್ಷಗಳ ಹಿಂದಿನ ಮಾತಿದು.
ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿರುವ ಮೊಸ್ಕೋನ್ ಸೆಂಟರ್ ನಲ್ಲಿ ಜನವರಿ ೯ ೨೦೦೭ರ ಬೆಳಿಗ್ಗೆ ೯ ಗಂಟೆಗೆ ಮ್ಯಾಕ್ ವರ್ಲ್ಡ್ ಕಾರ್ಯಕ್ರಮದಲ್ಲಿ ಕಪ್ಪು ಫುಲ್ ಕೈ ಶರ್ಟ್ ಮತ್ತು ನೀಲಿ ಜೀನ್ಸ್ ಹಾಕಿದ್ದ ಆಪಲ್ ನ ಸಿಇಓ ಆದ ಸ್ಟೀವ್ ಜಾಬ್ಸ್ ಕೀನೋಟ್ಸ್ ಆರಂಭಿಸಿದರು.
ಅಂದು ಅವರು ಐಫೋನ್ ಅನ್ನು ಕ್ರಾಂತಿಕಾರಿ ಉತ್ಪನ್ನ ಎಂದಾಗ ಅದನ್ನು ಆಗ ತಳ್ಳಿ ಹಾಕಿದವರೇ ಜಾಸ್ತಿ.
ಫೋನ್, ಐಪೋಡ್ ಹಾಗೂ ಇಂಟರ್ನೆಟ್ ಈ ಮೂರೂ ಸೌಲಭ್ಯ ಇರುವ ಐಫೋನ್ ಹೇಗೆ ಕ್ರಾಂತಿ ಮಾಡಬಲ್ಲುದು ಎಂದು ಸ್ಟೀವ್ ಜಾಬ್ ಸ್ಟೇಜ್ ಮೇಲೆ ಹೇಳುತ್ತಿದ್ದರೆ ಅಲ್ಲಲ್ಲೇ ಒಳ ಒಳಗೆ ನಗುತ್ತಾ ಸಾಕು ಮಾಡಯ್ಯ ಈ ಕೀಲಿ ಮಣೆ ಇಲ್ಲದ ಲ್ಯಾಪ್ ಟಾಪ್ ತರಹ ಬೂಟ್ ಆಗೋ ಫೋನ್ ಯಾರಾದ್ರೂ ಬಳಸ್ತಾರಾ ಕೆಲವರು ಅಂದು ಕೊಂಡವರೇ!
ಇದಕ್ಕೆ ಟೆಕ್ ಕ್ರಂಚ್, ಎಂಗ್ಯಾಜೆಟ್ ನಂತಹ ಟೆಕ್ ವಿಮರ್ಶೆಗಳೇ ಸಾಕ್ಷಿ!
ಐಫೋನ್ ಅಲ್ಲಿ ಆರಂಭದಲ್ಲಿ ಈಗಿರುವ ಹೆಚ್ಚಿನ ಫೀಚರ್ ಇರಲಿಲ್ಲ!
ಆಗ ನೋಕಿಯಾ, ಬ್ಲ್ಯಾಕ್ ಬೆರಿ ಎಲ್ಲ ೩ಜಿ ಫೋನ್ ಮಾರುಕಟ್ಟೆಯಲ್ಲಿತ್ತು. ಮೊದಲ ಐಫೋನ್ ಬರಿ 2ಜಿ ಆಗಿತ್ತು! ಜೊತೆಗೆ ೨.೪ಗಿಗಾ ಹರ್ಟ್ಜ್ ವೈ ಫೈ ಸೌಲಭ್ಯ ಸಹ ಇತ್ತು. ಬರಿ ಫೋಟೋ ತೆಗೆಯುವ ಕ್ಯಾಮೆರಾ ಇದ್ದ ಐಫೋನ್ ಅಲ್ಲಿ ಸೆಲ್ಫಿ ಕ್ಯಾಮೆರಾ ಹಾಗೂ ವಿಡಿಯೋ ರೆಕಾರ್ಡಿಂಗ್ ಸಹ ಇರಲಿಲ್ಲ!
ಎಪ್ ಸ್ಟೋರ್, ಎಸ್ ಡಿ ಕಾರ್ಡ್ ಸ್ಲಾಟ್ ಸಹ ಇರಲಿಲ್ಲ. ಆದರೂ ಅದರ ಯೂಸರ್ ಎಕ್ಸ್ಪಿರಿಯನ್ಸ್ ಬೇರೆಲ್ಲ ಫೋನ್ ಗಿಂತ ಬೇರೆಯಾಗಿದ್ದು ಅಮೋಘವಾಗಿತ್ತು ಅನ್ನುವದು ಉತ್ಪ್ರೇಕ್ಷೆ ಅಲ್ಲ.
ಐಫೋನ್ ಎಪ್ ಸ್ಟೋರ್ ಸುಮಾರು ಒಂದು ವರ್ಷದ ನಂತರ ಬಂತು.
ಒಂದು ಐಫೋನ್ ಬೆಲೆ ಒಂದು ಲ್ಯಾಪ್ ಟಾಪ್ ನಷ್ಟಿತ್ತು!
ಮೊದಲ ಐಫೋನ್ ಬೆಲೆ 499 ಡಾಲರ್ ( ಅಂದ್ರೆ 19 ಸಾವಿರ ರೂ. ೨೦೦೭ ರಲ್ಲಿ ೧ ಡಾಲರ್ = ೩೯.೪೨ ರೂ) ಆಗಿತ್ತು. ಈಗಲೂ ಏನು ಕಡಿಮೆ ಏನಿಲ್ಲ! ಅದು ಇನ್ನೂ ಜಾಸ್ತಿ ಆಗಿದೆ. ಇಂದು ಐಫೋನ್ ೧೩ ಮಾಡೆಲ್ ಗಳು 1000 ಡಾಲರ್ ಗೂ ಜಾಸ್ತಿ ಬೆಲೆಗೆ ಮಾರಾಟ ಆಗುತ್ತದೆ.
ಹೆಚ್ಚು ಕಡಿಮೆ ಒಂದು ಮಿಡ್ ರೇಂಜ್ ನ ಲ್ಯಾಪ್ ಟಾಪ್ ಬೆಲೆ ಈ ಐ ಫೋನ್ ಗೆ ಇದೆ. ಆದರೂ ಪ್ರತಿ ಬಾರಿ ಬಿಡುಗಡೆ ಆದಾಗ ಜನ ಬರಗೆಟ್ಟವರಂತೆ ಅಂಗಡಿಗಳ ಮುಂದೆ ಇಡೀ ರಾತ್ರಿ ಕ್ಯೂ ನಿಂತು ಖರೀದಿಸುತ್ತಾರೆ!
ಇತ್ತೀಚೆಗೆ ಅಂಡ್ರಾಯಿಡ್ ಅಲ್ಲೂ ಉತ್ತಮ ಕ್ಯಾಮೆರಾ ಫೋನ್ ಬಂದಿವೆ ಆದರೂ ಪ್ರಿಮಿಯಂ ಫೋನ್ ಮಾರ್ಕೆಟ್ ಅಲ್ಲಿ ಇದಕ್ಕೆ ಮೊದಲ ಆದ್ಯತೆ.
ಇದು ಫೇಲ್ ಆಗುತ್ತೆ ಅಂದು ಕೊಂಡವರೇ ಜಾಸ್ತಿ
ಸ್ಟೀವ್ ಬಾಲ್ಮರ್ ೫೦೦ ಡಾಲರಿನ ಐಫೋನ್ ಯಾವುದೇ ದೊಡ್ಡ ಮಾರ್ಕೆಟ್ ಶೇರ್ ಪಡೆಯುವ ಸಾಧ್ಯತೆ ಇಲ್ಲ ಎಂದು ಹೇಳಿದ್ದರು. ಆಮೇಲೆ ಅವರು ಮಾತನ್ನು ಐಫೋನ್ ಸುಳ್ಳು ಮಾಡಿತು.
ಇಂದು ಹೈಎಂಡ್ ಐಫೋನ್ ಬೆಲೆ ೧೫೦೦ ಡಾಲರ್ ದಾಟುತ್ತದೆ. (ಭಾರತದಲ್ಲಿ ಐಫೋನ್ ೧೩ ಪ್ರೋ ಮ್ಯಾಕ್ಸ್ ಬೆಲೆ ಹೆಚ್ಚು ಕಡಿಮೆ ೧.೪ ಲಕ್ಷ ರೂ ಇದೆ!) ಆದರೂ ಜನ ಮುಗಿ ಬಿದ್ದು ಅದರ ಹಳೆ ವರ್ಶನ್ ಆದ್ರೂ ಸರಿ ತಗೋತಾರೆ. ಒಟ್ಟಿನಲ್ಲಿ ಐಫೋನ್ ಆಗಬೇಕು ಅಷ್ಟೇ!
ಬ್ಲ್ಯಾಕ್ ಬೆರ್ರಿ ಯ ಸಿ ಇ ಓ ಕೂಡಾ ಐಫೋನ್ ನಿಂದ ಬ್ಲ್ಯಾಕ್ ಬೆರಿ ಗೆ ತೊಂದರೆ ಇಲ್ಲವೆಂದೇ ನಂಬಿದ್ದರು. ನೋಕಿಯಾ ಕಂಪನಿ ಕೂಡಾ ಐಫೋನ್ ನಿಂದ ತನ್ನ ವ್ಯಾಪಾರಕ್ಕೆ ಅಡ್ಡಿ ಆಗುತ್ತೆ ಮೊದ ಮೊದಲು ಭಾವಿಸಲಿರಲಿಲ್ಲ.
ಗೂಗಲ್ ಕಂಪನಿಗೆ ಮಾತ್ರ ಇದರಲ್ಲಿ ವಿಶ್ವಾಸ ಇತ್ತು. ಅದಕ್ಕೆ ಗೂಗಲ್ ಎಪಲ್ ನ ಕೀನೋಟ್ ನೋಡಿದ ತಕ್ಷಣ ಅಂಡ್ರಾಯ್ಡ್ ಪ್ರಾಜೆಕ್ಟ್ ಅನ್ನು ಬದಲಾಯಿಸಿ ಪುನರಾರಂಭಿಸಿತು.
ಐಫೋನ್ ಯಾಕೆ ಜನಪ್ರಿಯ ಆಯ್ತು?
ಒಂದು ಐಫೋನ್ ಗೆ ಸರಿಯಾದ ಸ್ಪರ್ಧಿ ಅನೇಕ ಕಾಲದ ವರೆಗೆ ಬರಲಿಲ್ಲ. ಎಪಲ್ ಮೊದಲಿನಿಂದಲೂ ಕಂಪ್ಯೂಟರ್ ಹಾರ್ಡವೇರ್ ವಿನ್ಯಾಸ ಹಾಗೂ ಸಾಫ್ಟವೇರ್ ನಿರ್ಮಾಣ ಎರಡರಲ್ಲೂ ನಿಸ್ಸೀಮ ಆಗಿತ್ತು. ಅದೇ ಹಾರ್ಡವೇರ್ ವಿನ್ಯಾಸ ಗೊಳಿಸಿ ಸಾಫ್ಟವೇರ್ ನಿರ್ಮಿಸಿದುದರಿಂದ ಅದು ಉತ್ತಮ ವೇಗ, ಬ್ಯಾಟರಿ ಸಮಯ ಎಲ್ಲವನ್ನೂ ಹೊಂದಿತ್ತು.
ನೋಕಿಯಾ, ಪಾಲ್ಮ್, ಬ್ಲ್ಯಾಕ್ ಬೆರಿ ಆರಂಭದಲ್ಲಿ ಈ ಸ್ಪರ್ಧೆಯನ್ನು ಕಡೆಗಣಿಸಿ ದ್ದವು. ಗೂಗಲ್ ಅಂಡ್ರಾಯಿಡ್ ಸ್ವಲ್ಪ ಮುನ್ನಡೆ ಹೊಂದಿದ್ದರು ಹಲವು ಹಾರ್ಡವೇರ್ ರೀತಿ ಸಪೋರ್ಟ್, ಚೀಪ್ ಹಾರ್ಡವೇರ್ ಗಳು, ಹೀಟಿಂಗ್ ಸಮಸ್ಯೆ, ಎಪ್ ಸ್ಟೋರ್ ನಲ್ಲಿನ ಎಪ್ ಗುಣಮಟ್ಟ ಹೀಗೆ ಹಲವು ಸಮಸ್ಯೆಗಳಿದ್ದವು.
ಎಪಲ್ ತನ್ನ ಅತ್ಯುತ್ತಮ ಗುಣಮಟ್ಟದ ಬಳಕೆದಾರರ ಅನುಭವಕ್ಕೆ ಮುಖ್ಯ ಆದ್ಯತೆ ನೀಡಿತು ಅಷ್ಟೇ ಅಲ್ಲ ತನ್ನ ಡೆಸ್ಕ್ ಟಾಪ್, ಲ್ಯಾಪ್ ಟಾಪ್, ವಾಚ್ ಎಲ್ಲದರ ಇಂಟಿಗ್ರೇಶನ್ ಕೂಡಾ ಅಡೆ ತಡೆ ಇಲ್ಲದೇ ನಿರ್ವಹಿಸಿ ಜನರಿಗೆ ಸುಲಭ ಆಗುವಂತೆ ಮಾಡಿತ್ತು.
ಇಂದು ಅನೇಕ ಫೋನ್ ಗಳು ಐಫೋನ್ ಮಟ್ಟ ಅಲ್ಲದಿದ್ದರೂ ಅದಕ್ಕೆ ಪರ್ಯಾಯ ಅನ್ನಿಸುವ ಗುಣಮಟ್ಟದ ಅನುಭವ ಕಡಿಮೆ ಬೆಲೆಗೆ ನೀಡುತ್ತಿದ್ದಾರೆ. ಆದರೆ ಎಪಲ್ ಐಫೋನ್ ತನ್ನ ದೊಡ್ಡ ಅಭಿಮಾನಿಗಳ ಬಳಗ ನಿರ್ಮಿಸಿಕೊಂಡು ತನ್ನ ಸೇವೆಯನ್ನು ಬಳಸುವಂತೆ ಮಾಡಿಕೊಂಡಿದೆ.
ಎಪಲ್ ತನ್ನ ಎಪ್ ಸ್ಟೋರ್ ನಲ್ಲಿ ಗುಣಮಟ್ಟದ ಬೇಡಿಕೆಯ ಮಟ್ಟ ಜಾಸ್ತಿ ಇಟ್ಟಿದೆ. ಅಷ್ಟೇ ಅಲ್ಲ ಎಪ್ ಸ್ಟೋರ್ ಸುರಕ್ಷತೆಯಲ್ಲೂ ಮುಂದು.
ಐಫೋನ್ ಕಾರಣದಿಂದ ಮುಚ್ಚಿದ ಕಂಪನಿಗಳು
ಇಂದು ಆ ಕಂಪನಿಗಳು ಚಿಕ್ಕ ಕಂಪನಿಗಳಾಗಿವೆ. ಇಲ್ಲ ಮುಚ್ಚಿ ಹೋಗಿವೆ.
ಅಂಡ್ರಾಯಿಡ್ ಅಥವಾ ವಿಂಡೋಸ್ ಫೋನ್ ಸಾಫ್ಟವೇರ್ ಆಯ್ಕೆ ಮಾಡ ಬೇಕಿದ್ದ ನೋಕಿಯಾ ಕೂಡಾ ಎಡವಿ ವಿಂಡೋಸ್ ಫೋನ್ ಆರಿಸಿತು. ಮೈಕ್ರೊಸಾಫ್ಟ್ ಜೊತೆ ಮಾಡಿ ಕೊಂಡ ಒಡಂಬಡಿಕೆ ನೋಕಿಯಾಗೆ ಭಾರಿ ಹೊಡೆತ ಕೊಟ್ಟಿದ್ದು ಸುಳ್ಳಲ್ಲ. ಯಾಕೋ ನೋಕಿಯಾ ಆಗಲೇ ಅಂಡ್ರಾಯಿಡ್ ಆರಿಸಿಕೊಂಡಿದ್ದರೆ ಅದರ ಕಥೆ ಬೇರೆ ಆಗುತ್ತಿತ್ತೇನೋ! ಈಗ ಅಂಡ್ರಾಯಿಡ್ ಪಾಳೆಯಕ್ಕೆ ಅದು ಬಂದಿದೆ. ಆದರೆ ಬೇರೆ ಕಂಪನಿಗಳ ಕಾಂಪಿಟೇಶನ್ ಜೋರಾಗಿದೆ.
ಸ್ಯಾಮ್ಸಂಗ್ ಗೂಗಲ್ ನ ಅಂಡ್ರಾಯಿಡ್ ಬಳಸಿ ಹಾಗೂ ತನ್ನದೇ ಟೈಜನ್ ಆಪರೇಟಿಂಗ್ ಸಿಸ್ಟೆಮ್ ತಯಾರಿಸಿ ಗೂಗಲ್ ನ ಅಂಡ್ರಾಯಿಡ್ ಪಾಳೆಯದಲ್ಲಿದ್ದು ಎಪಲ್ ಗೆ ಪ್ರಬಲ ಸ್ಪರ್ಧೆ ನೀಡಿದ್ದು ಸುಳ್ಳಲ್ಲ. ಸ್ಯಾಮ್ಸಂಗ್ ಹಲವು ಬೆಲೆ ಮಟ್ಟಕ್ಕೆ ಎಪಲ್ ಐಫೋನ್ ಗೆ ಸಡ್ಡು ಹೊಡೆಯುವ ಪ್ರಿಮಿಯಂ ಫೋನ್ ಸಹ ನಿರ್ಮಿಸುತ್ತಿದೆ. ಅದಕ್ಕೆ ಎಪಲ್ ಹಲವು ಪೇಟೆಂಟ್ ಲಾ ಸೂಟ್ ಅನ್ನು ಸ್ಯಾಮ್ಸಂಗ್ ಮೇಲೆ ಹಾಕಿ ಗೆದ್ದಿದೆ ಕೂಡಾ.
ಆಮೇಲೆ ಗೂಗಲ್, ಶಿಯೋಮಿ, ಒನ್ ಪ್ಲಸ್, ವಿವೋ, ಒಪ್ಪೋ ಹೀಗೆ ಹಲವು ಕಂಪನಿಗಳು ಅಂಡ್ರಾಯಿಡ್ ಫೋನ್ ಗಳನ್ನು ಹಲವು ಬೆಲೆಯ ಮಟ್ಟಕ್ಕೆ ಬಿಟ್ಟು ಬಜೆಟ್ ಖರೀದಿದಾರರನ್ನು ಎಳೆದದ್ದು ಸುಳ್ಳಲ್ಲ.
ಮೊದಲ ಐಫೋನ್ ರಿಲೀಸ್ ಕಾರ್ಯಕ್ರಮ ನೋಡಿ ಹೈರಾಣಾದ ಗೂಗಲ್ ಇಂಜಿನಿಯರ್ ಗಳು
ಚಿತ್ರಕೃಪೆ: Denny Müller on Unsplash
ಗೂಗಲ್ ಕೂಡಾ ೨೦೦೭ರಲ್ಲಿ ಸ್ಮಾರ್ಟ್ ಫೋನ್ ರಿಲೀಸ್ ಮಾಡಬೇಕು ಎಂದು ಬಯಸಿತ್ತು ಅಂಡ್ರಾಯಿಡ್ ಕಂಪನಿಯನ್ನು ೨೦೦೫ರಲ್ಲೇ ಖರೀದಿ ಮಾಡಿತ್ತು. ಗೂಗಲ್ ಇಂಜಿನಿಯರ್ ಗಳು ಎರಡು ವರ್ಷ ಹಗಲು ರಾತ್ರಿ ಪರಿಶ್ರಮ ಪಟ್ಟು ಅಂಡ್ರಾಯಿಡ್ ಫೋನ್ ಅಭಿವೃದ್ಧಿ ಮಾಡಿದ್ದರು.
ಅದು ಕೂಡಾ ಬ್ಲ್ಯಾಕ್ ಬೆರ್ರಿ ಫೋನ್ ತರಹ ಕೀಲಿಮಣೆ ಇದ್ದು ಚಿಕ್ಕ ತೆರೆ ಇರುವಂತಹ ಫೋನ್ ಆಗಿತ್ತು.
ಜನವರಿ ೯ ೨೦೦೭ರಂದು ಎಪಲ್ ನ ಸ್ಟೀವ್ ಜಾಬ್ ನ ಕೀನೋಟ್ಸ್ ನಲ್ಲಿ ಐಫೋನ್ ಅನ್ನು ಜಗತ್ತಿಗೆ ಪರಿಚಯಿಸಿದಾಗ ಅದನ್ನು ನೋಡುತ್ತಿದ್ದ ಗೂಗಲ್ ಇಂಜಿನಿಯರ್ ಗಳು ಹೈರಾಣಾದರು. ಯಾಕೆಂದರೆ ಅವರು ನಿರ್ಮಿಸಿದ ಅಂಡ್ರಾಯಿಡ್ ಫೋನ್ ಐಫೋನ್ ಮುಂದೆ ಏನೂ ಆಗಿರಲಿಲ್ಲ. ಆ ಅಂಡ್ರಾಯಿಡ್ ಫೋನ್ ಬಿಡುಗಡೆ ಮಾಡಿದರೆ ನಮಗೆ ಉಳಿಗಾಲ ಇಲ್ಲ ಎನ್ನುವದು ಅಂಡ್ರಾಯಿಡ್ ಫೋನ್ ಟೀಂ ಗೆ ಮನವರಿಕೆ ಆಯಿತು.
ತಕ್ಷಣ ಗೂಗಲ್ ಮತ್ತೆ ಹೊಸತಾಗಿ ಅಂಡ್ರಾಯಿಡ್ ಫೋನ್ ಡೆವೆಲಪ್ ಮೆಂಟ್ ಶುರು ಮಾಡುವ ನಿರ್ಧಾರ ಕೈಗೊಂಡಿತು. ೨೦೦೭ರಲ್ಲಿ ರಿಲೀಸ್ ಆಗಬೇಕಿದ್ದ ಅಂಡ್ರಾಯಿಡ್ ಫೋನ್ ಒಂದು ವರ್ಷ ತಡವಾಗಿ ೨೦೦೮ರಲ್ಲಿ ಬಿಡುಗಡೆ ಆಯಿತು. ಈ ಎಲ್ಲ ವಿಚಾರ ಗೊತ್ತಾಗಿದ್ದು ನಂತರ ೨೦೧೩ರಲ್ಲಿ ಫ್ರೆಡ್ ವೊಗೆಲ್ ಸ್ಟೀನ್ ಅವರ ಡಾಗ್ ಫೈಟ್ ಎಂಬ ಪುಸ್ತಿಕೆಯ ಮೂಲಕ್ಕ.
ಸ್ಟೀವ್ ಜಾಬ್ಸ್ ಗೆ ಗೂಗಲ್ ಅಂಡ್ರಾಯಿಡ್ ಮೇಲೆ ಅಸಮಾಧಾನ ಇತ್ತು. ಅದು ಕದ್ದ ಉತ್ಪನ್ನ ಆಗಿದ್ದರಿಂದ ಅದನ್ನು ನಾಶ ಮಾಡಬೇಕೆಂದು ಬಯಸಿದ್ದರು. ಅಷ್ಟೇ ಅಲ್ಲ ಎಪಲ್ ಸ್ಯಾಮಸಂಗ್ ಹಿಡಿದು ಅನೇಕ ಅಂಡ್ರಾಯಿಡ್ ಫೋನ್ ಕಂಪನಿಗಳಿಗೆ ಪೇಟೆಂಟ್ ಕದ್ದ ಆರೋಪದ ಮೇಲೆ ಕೇಸ್ ಹಾಕಿ ದಂಡ ವಿಧಿಸಿದೆ.
ಸ್ಟೀವ್ ಜಾಬ್ ನ ಪರ್ಫೆಕ್ಷನಿಸ್ಟ್ ಮೈಂಡ್ ಸೆಟ್
ಸ್ಟೀವ್ ಜಾಬ್ಸ್ ಅತಿಯಾದ ಪರ್ಫೆಕ್ಷನಿಸ್ಟ್ ಆಗಿದ್ದರು. ಈ ಪರ್ಫೆಕ್ಟ್ ಕಂಪ್ಯೂಟರ್, ಪರ್ಫೆಕ್ಟ್ ಆಡಿಯೋ ಪ್ಲೇಯರ್, ಪರ್ಫೆಕ್ಟ್ ಫೋನ್ ವಿನ್ಯಾಸದ ವಾಂಛೆಯಿಂದ ಸ್ಟೀವ್ ಜಾಬ್ಸ್ ಎಪಲ್ ಅನ್ನು ಜಗತ್ತಿನ ಅತಿ ದೊಡ್ಡ ಟೆಕ್ನಾಲಜಿ ಕಂಪನಿ ಮಾಡಿದರು. ಎಪಲ್ ನ ಪ್ರತಿ ಉತ್ಪನ್ನ ಸ್ಟೀವ್ ಜಾಬ್ಸ್ ಕಾಲದಲ್ಲಿ ಉತ್ಕೃಷ್ಟ ಮಟ್ಟ ತಲುಪಿತು ಎಂದರೆ ತಪ್ಪಾಗಲಾರದು.
ಐಫೋನ್ ಆ ಗುಣಮಟ್ಟ, ಕೀಲಿಮಣೆ / ಸ್ಟೈಲಸ್ ಪೆನ್ ಬದಲಾಗಿ ಟಚ್ ಸ್ಕ್ರೀನ್ ಬಳಸಲೂ ಕೂಡಾ ಸ್ಟೀವ್ ಜಾಬ್ ಅವರ ನಿರ್ಧಾರ ಕಾರಣ.
ಆರಂಭಿಕ ಪ್ರೋಟೋಟೈಪ್ ಅಲ್ಲಿ ಪ್ಲಾಸ್ಟಿಕ್ ಸ್ಕ್ರೀನ್ ಬಳಸಲಾಗಿತ್ತು. ಐಫೋನ್ ಪ್ರೋಟೋಟೈಪ್ ಸಿದ್ಧವಾದಾಗ ಸ್ಟೀವ್ ಜಾಬ್ಸ್ ಅದರಲ್ಲಿ ಒಂದನ್ನು ತಮ್ಮ ಜೇಬಲ್ಲಿ ಇಟ್ಟು ಕೊಂಡು ಹೋಗುತ್ತಿದ್ದರು. ಜೊತೆಗೆ ಕೀ ಗಳು ಸಹಾ ಇದ್ದು ತಿಕ್ಕಾಟದಿಂದ ಸ್ಕ್ರೀನ್ ಸ್ಕ್ರ್ಯಾಚ್ ಆಗಿತ್ತು.
ಇದರಿಂದ ಸ್ಟೀವ್ ಜಾಬ್ಸ್ ತುಂಬಾ ಅಸಮಾಧಾನ ಗೊಂಡಿದ್ದರು. ಆಮೇಲೆ ಪ್ಲಾಸ್ಟಿಕ್ ಪರದೆಯನ್ನು ಗ್ಲಾಸ್ ಪರದೆಗೆ ಬದಲಾಯಿಸಲಾಯ್ತು.
ಐಫೋನ್ ನ ಪ್ರತಿ ಐಕಾನ್ ಅದರ ಬಣ್ಣ ಇಂತಹ ಚಿಕ್ಕ ಚಿಕ್ಕ ವಿಷಯ ಎಲ್ಲದರ ಬಗ್ಗೆ ಸಿಇಓ ಆದ ಅವರು ಸಹ ಮುತುವರ್ಜಿ ವಹಿಸುತ್ತಿದ್ದರು. ಸಾಮಾನ್ಯವಾಗಿ ಕಂಪನಿ ಸಿಇಓ ಮಟ್ಟದಲ್ಲಿರುವವರು ಅಂತಹ ಸೂಕ್ಷ್ಮ ಅಂಶಗಳಿಗೆ ಗಮನ ಹರಿಸುವದಿಲ್ಲ.
ಇದೇ ಪರ್ಫೆಕ್ಷನಿಸ್ಟ್ ಮೈಂಡ್ ಸೆಟ್ ಅವರ ಜೀವನದ ಪ್ರತಿ ನಿರ್ಧಾರಕ್ಕೂ ಕೆಟ್ಟ ಪರಿಣಾಮ ಕೂಡಾ ಉಂಟಾಯ್ತು. ಅದರ ಬಗ್ಗೆ ತಿಳಿಯಲು ಆಸಕ್ತಿ ಇದ್ದರೆ ಕಮೆಂಟ್ ಮಾಡಿ. ಇನ್ನೊಂದು ಲೇಖನದಲ್ಲಿ ತಿಳಿಸುತ್ತೇನೆ.
ಐಫೋನ್ ೧ ರ ಸ್ಪೆಸಿಫಿಕೇಷನ್ (ವಿಶಿಷ್ಟತೆ) ಏನಿತ್ತು?
- 320 * 480 ಪಿಕ್ಸೆಲ್ ಗಳ 3.5 ಇಂಚಿನ ಟಚ್ ಪರದೆ
- 2 ಮೆಗಾ ಪಿಕ್ಸೆಲ್ ಕ್ಯಾಮೆರಾ
- ಹೋಮ್, ವಾಲ್ಯೂಮ್ +/- , ಪವರ್ ಬಟನ್
- ಸ್ಯಾಮಸಂಗ್ 32 ಬಿಟ್ ಎ ಆರ್ ಎಂ (ARM) ಪ್ರಾಸೆಸರ್ 412 ಮೆಗಾ ಹರ್ಟ್ಜ್ ವೇಗ
- ಪ್ರಾಕ್ಸಿಮಿಟಿ / ಎಕ್ಸೆಲೆರೋಮೀಟರ್ / ಸುತ್ತಮುತ್ತಲಿನ ಬೆಳಕು (ಎಂಬಿಯಂಟ್ ಲೈಟ್) ಸೆನ್ಸರ್ ಗಳು
- 3.5 ಆಡಿಯೋ ಜ್ಯಾಕ್
- 1400 ಎಂಎಎಚ್ ಲಿಥಿಯಂ ಅಯಾನ್ ಬ್ಯಾಟರಿ
- ಆಪರೇಟಿಂಗ್ ಸಿಸ್ಟೆಮ್: ಐಫೋನ್ ಒಎಸ್ ೧
ಐಫೋನ್ ನಿಜಕ್ಕೂ ಅಷ್ಟು ಗ್ರೇಟಾ?
ಇಂದು ವಿಶಿಷ್ಟತೆಯಲ್ಲಿ ಐಫೋನ್ ಮೀರಿಸುವ ನೂರಾರು ಅಂಡ್ರಾಯಿಡ್ ಫೋನ್ ಗಳಿವೆ. ಆದರೆ ಆ ರೀತಿಯ ಬಳಕೆದಾರರ ಅನುಭವ ನೀಡುವ ಫೋನ್ ತೀರಾ ಕಡಿಮೆ.
ಲ್ಯಾಪ್ ಟಾಪ್, ಟ್ಯಾಬ್ಲೆಟ್, ಫೋನ್ ಹಾಗೂ ವಾಚ್ ಎಲ್ಲದರ ಜೊತೆ ಚೆನ್ನಾಗಿ ಇಂಟಿಗ್ರೇಟ್ ಆಗಿ ಯಾವುದೇ ಸಮಸ್ಯೆ ಇಲ್ಲದೇ ಹಲವು ಕಾಲದ ನಂತರವೂ ಅದೇ ವೇಗದಲ್ಲಿ ನಡೆಯುವ ಅಷ್ಟೇ ಉತ್ತಮ ಬಳಕೆದಾರರ ಅನುಭವ ಕೊಡುವ ಫೋನ್ ಐಫೋನ್ ಬಿಟ್ಟರೆ ಬೇರಿಲ್ಲ!
ಐಫೋನ್ ಕ್ಯಾಮೆರಾ ಗುಣಮಟ್ಟ ಕೂಡಾ ಚೆನ್ನಾಗಿದೆ. ಅತಿ ಕಡಿಮೆ ಬೆಳಕಲ್ಲೂ ಚೆನ್ನಾಗಿ ಫೋಟೋ ತೆಗೆಯ ಬಲ್ಲುದು.
ಇಂದು ಅನೇಕ ಅಂಡ್ರಾಯಿಡ್ ಫೋನ್ ಗಳು ವೇಗ, ಕ್ಯಾಮರಾ ಗುಣಮಟ್ಟ ಇತ್ಯಾದಿಗಳಲ್ಲಿ ಪರವಾಗಿಲ್ಲ ಎನ್ನುವ ಹಾಗಿದೆ. ಅನೇಕ ಫ್ಲ್ಯಾಗ್ ಶಿಪ್ ಗಳು ಐಫೋನ್ ದಷ್ಟಲ್ಲದಿದ್ದರೂ ಉತ್ತಮ ಕ್ಯಾಮರಾ ಹೊಂದಿದೆ. ಗೂಗಲ್ ಪಿಕ್ಸೆಲ್ ಹಾಗೂ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ ೨೧ ಇತ್ಯಾದಿ.
ಆದರೂ ಎಲ್ಲ ಬಳಕೆದಾರರ ಅನುಭವ ಪರಿಗಣಿಸಿದಾಗ ಐಫೋನ್ ಐಫೋನೇ. ಅದು ಪ್ರಿಮಿಯಂ ಫೀಲಿಂಗ್ ನೀಡುತ್ತದೆ.
ಈಗ ಮಾರ್ಕೆಟ್ ಅಲ್ಲಿ ಯಾವ ಐಫೋನ್ ಮಾಡೆಲ್ ಇದೆ?
ಚಿತ್ರಕೃಪೆ: LUNEMax from Pixabay
ಈಗ ೨೦೨೨ರ ಜನವರಿಯಲ್ಲಿ ನಡೆಯುತ್ತಿರುವದು ಐಫೋನ್ 13. ಇದು ಎರಡು ವರ್ಶನ್ ಅಲ್ಲಿ ಬರುತ್ತೆ.
ಒಂದು ಐಫೋನ್ ೧೩ ಪ್ರೋ ಮತ್ತು ಇನ್ನೊಂದು ಐಫೋನ್ ೧೩ . ಇವೆರಡರ ಬೆಲೆ ಲಕ್ಷ ಮೀರುತ್ತದೆ. ಐಫೋನ್ ೧೩ ಮಿನಿ ಸಹ ಇದೆ. ಅದು ಕಡಿಮೆ ಬೆಲೆಗೆ ಸಿಗುತ್ತೆ.
ನಿಮಗೆ ಐಫೋನೇ ಬೇಕು ಆದರೆ ಅಷ್ಟು ಬಜೆಟ್ ಇಲ್ಲದಿದ್ದರೆ ಐಫೋನ್ ೧೨ ರ ಕಡೆ ಸಹ ನೋಡಿ.
ಇನ್ನು ಇದೇ ವರ್ಷ ಐಫೋನ್ ೧೪ ಬರಲಿದೆ. ಆಗ ಐಫೋನ್ ೧೩ / ಪ್ರೋ ಬೆಲೆ ಕಮ್ಮಿ ಆಗುತ್ತೆ. ಅಲ್ಲಿಯವರೆಗೆ ಕಾದರೆ ಸಹ ಆದೀತು.
ಐಫೋನ್ ಕಲಿಸುವ ಪಾಠ
ಪ್ರತಿಯೊಂದು ವಿಚಾರದಿಂದ ನಾವು ಹಲವು ವಿಷಯ ಕಲಿಯಬಹುದು. ಸ್ಟೀವ್ ಜಾಬ್ಸ್ ಐಫೋನ್ ವಿನ್ಯಾಸಕ್ಕೆ ಬಳಸಿದ ಹೆಚ್ಚಿನ ಎಲ್ಲ ತಂತ್ರಜ್ಞಾನಗಳು ಯಾವುದೂ ಹೊಸದಿರಲಿಲ್ಲ. ಆಗ ಎಲ್ಲ ಕೀಲಿಮಣೆ ಫೋನ್ ಅಲ್ಲಿ ಇರಲೇ ಬೇಕು ಅನ್ನುವ ಕಾಲ. ಆದರೆ ಹಾರ್ಡವೇರ್ ಕೀಲಿಮಣೆ ತೆಗೆದು ಸ್ಟೈಲಸ್ ಇಲ್ಲದೇ ಫೋನ್ ಮಾಡಬೇಕೆಂಬ ನಿಲುವು ಐಫೋನ್ ನಿರ್ಮಾಣಕ್ಕೆ ಕಾರಣ.
ಇದನ್ನೇ ಹೊಸ ಕಲ್ಪನೆ ಎನ್ನುವದು. ಏನಾದರೂ ಹೊಸತನ್ನು ಮಾಡಬೇಕೆಂಬ ಮೈಂಡ್ ಸೆಟ್ ನಮ್ಮನ್ನು ಯಾವ ಕ್ಷೇತ್ರದಲ್ಲಾದರೂ ಮುಂದೆ ತರಬಲ್ಲುದು ಎಂಬುದಕ್ಕೆ ಐಫೋನ್ ಒಂದು ಮಾದರಿ.
ಐಫೋನ್ ಗೆ ಆರಂಭದಲ್ಲಿ ಅದೇನೆ ಕಮೆಂಟ್ ಬಂದರು ಎಪಲ್ ಆಗಲೀ ಸ್ಟೀವ್ ಜಾಬ್ಸ್ ಆಗಲೀ ಎದೆಗುಂದಲಿಲ್ಲ. ಅದನ್ನು ಅವರು ಕಲ್ಪಿಸಿದ ರೂಪದಲ್ಲೇ ಎಣಿಸಿದ ಬೆಲೆಗೇ ಮಾರುಕಟ್ಟೆಗೆ ತಂದರು ಜಗತ್ತಿನ ಯಾವುದೇ ಕಂಪನಿ ನೋಡದ ಯಶಸ್ಸನ್ನು ಕಂಡರು.
ಕೊನೆಯ ಮಾತು
ನಮ್ಮಲ್ಲಿ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬ ಮಾತಿದೆ. ಇಂದು ಗೂಗಲ್ ನ ಅಂಡ್ರಾಯಿಡ್ ಫೋನ್ ಗಳು ಐಫೋನ್ ಗೆ ಹೋಲಿಕೆ ಮಾಡಬಲ್ಲಂತಹ ಫೋನ್ ಗಳು ಬಂದಿವೆ. ಅವು ಐಫೋನ್ ನ ಬೆಳವಣಿಗೆಯನ್ನು ಒಂದು ಮಟ್ಟಕ್ಕೆ ಕಟ್ಟಿ ಹಾಕಿವೆ. ಇದು ಎಪಲ್ ಗೆ ಸಮಸ್ಯೆ ಉಂಟು ಮಾಡುವ ಸಾಧ್ಯತೆ ಇದೆ. ಎಪಲ್ ತನ್ನ ಇನ್ನೋವೇಶನ್ ಅನ್ನು ಇನ್ನೊಂದು ಮಟ್ಟಕ್ಕೆ ಒಯ್ಯದಿದ್ದರೆ ಅದರ ಆ ಪ್ರಿಮಿಯಂ ಸ್ಥಾನವನ್ನು ಬೇರೆ ಫೋನ್ ಕಂಪನಿ ಆಕ್ರಮಿಸುವ ದಿನ ದೂರ ಇಲ್ಲ.
ಒಂದು ಕಡೆ ಅದರ ಎಪಲ್ ವಾಚ್ ಹಾಗೂ ಏರ್ ಪೋಡ್ ಕೂಡಾ ಸಕ್ಕತ್ ಹಿಟ್ ಆಗಿದೆ.
ಕಾದು ನೋಡೋಣ!
ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.
ನೆನಪಿಡಿ: ಈ ಲೇಖನದಲ್ಲಿ ಅಮೇಜಾನ್ ಅಫಿಲಿಯೇಟ್ ಲಿಂಕ್ ಸಹ ಇದೆ. ಇದು ಗಣಕ ಪುರಿಗೆ ಆರ್ಥಿಕ ಬೆಂಬಲ ನೀಡುತ್ತದೆ. ನಿಮಗೆ ಯಾವುದೇ ರೀತಿಯ ಬೆಲೆಯ ವ್ಯತ್ಯಾಸ ಆಗದು. ಖರೀದಿ ಮಾಡುವದಿದ್ದರೆ ಈ ಲಿಂಕ್ ಬಳಸಿ ನಮ್ಮನ್ನು ಬೆಂಬಲಿಸಿ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅನಿಸಿಕೆ ಏನು? ತಿಳಿಸಿ.