Slider

ಕ್ಲೌಡ್ ಕಂಪ್ಯೂಟಿಂಗ್ ಏನಿದರ ಒಳಗುಟ್ಟು?

ಹೀಗೊಮ್ಮೆ ಕಲ್ಪನೆ ಮಾಡಿ. ನೀವು 2 ಟೆರ್ರಾ ಬೈಟ್ ಎಕ್ಸ್ಟರ್ನಲ್ ಹಾರ್ಡಡಿಸ್ಕ್ ಖರೀದಿ ಮಾಡುವ ಬದಲಾಗಿ ಅಂತರ್ಜಾಲದ ಮೂಲಕ 2 ಟೆರ್ರಾ ಬೈಟ್ ಸ್ಟೋರೇಜ್ ಖರೀದಿ ಮಾಡಿ ಅಲ್ಲಿ ನಿಮ್ಮ ಫೋಟೋ ವಿಡಿಯೋ ಎಲ್ಲ ಉಳಿಸುವಂತಾದರೆ? 

ಹಾರ್ಡ್ ಡಿಸ್ಕ್ ನಿಮ್ಮ ಕಂಪ್ಯೂಟರ್ ಗೆ ಪ್ಲಗ್ಗಿನ್ ಮಾಡುವ ಚಿಂತೆ ಇಲ್ಲ. ಎಲ್ಲಿ ಬ್ಯಾಡ್ ಕ್ಲಸ್ಟರ್ ಅಥವಾ ಒಳಗಿನ ಸರ್ಕ್ಯೂಟ್ ಸುಟ್ಟು ಹಾಳಾಗುವ ಹೆದರಿಕೆ ಇಲ್ಲ. ಕಾಲ ಕಾಲಕ್ಕೆ ಹೊಸ ಹಾರ್ಡ್ ಡಿಸ್ಕ್ ಖರೀದಿಸಿ ಅದಕ್ಕೆ ಕಾಪಿ ಮಾಡುತ್ತಾ ಕೂರ ಬೇಕಿಲ್ಲ. 

ಪ್ರತಿ ವರ್ಷ ಬಾಡಿಗೆ ಕಟ್ಟುತ್ತಿದ್ದರಾಯ್ತು. ಯಾವಾಗ ಬೇಕಾದರೂ ಇನ್ನೂ ಬರಿ 2 ಅಲ್ಲ 200 ಟೆರ್ರಾ ಬೈಟ್ ಸ್ಟೋರೇಜ್ ಬೇಕಿದ್ದರೂ ಖರೀದಿ ಮಾಡಿ ಬಳಸಬಹುದು. ಅಷ್ಟು ಜಾಸ್ತಿ ಮೆಮರಿಗಾಗಿ ದೊಡ್ಡ ಸ್ಟೋರೇಜ್ ಖರೀದಿಸಿ ಅದಕ್ಕೆ ತಡೆರಹಿತ ವಿದ್ಯುತ್ ಕೊಟ್ಟು ಮೆಂಟೆನನ್ಸ್ ಮಾಡಬೇಕಿಲ್ಲ. ಅಥವಾ 4-5 ಹಾರ್ಡ್ ಡಿಸ್ಕ್ ಖರೀದಿ ಮಾಡಿ ಅವುಗಳ ನಡುವೆ ಬದಲಾವಣೆ ಮಾಡುತ್ತಾ ಕೂರ ಬೇಕಿಲ್ಲ.

ಒಳ್ಳೆ ಚಿಂತನೆ ಅಲ್ವಾ? ನೀವು ಗೂಗಲ್ ಡ್ರೈವ್ ಬಳಸಿದ್ದೀರಾ? ಒನ್ ಡ್ರೈವ್? ಡ್ರಾಪ್ ಬಾಕ್ಸ್? ಐ ಕ್ಲೌಡ್?

ಬಹುಶಃ ನಿಮ್ಮ ಸ್ಮಾರ್ಟ್ ಫೋನ್ ಅಲ್ಲಿ ಫೋಟೋ, ವಿಡಿಯೋ ಬ್ಯಾಕ್ ಅಪ್ ಉಳಿಸಲು ಇದರ ಉಚಿತ ವರ್ಶನ್ ಬಳಸಿರುವ ಸಾಧ್ಯತೆ ಇದೆ. ನಿಮ್ಮ ಫೋನ್ ಕಳುವಾದರೂ ಅಥವಾ ಬಿದ್ದು ಹಾಳಾದರೂ ನಿಮ್ಮ ಮಾಹಿತಿ ಅಲ್ಲಿ ಸುರಕ್ಷಿತ ಆಗಿರುತ್ತದೆ. ಅಲ್ವಾ?

ಇವೆಲ್ಲ ಕ್ಲೌಡ್ ಸ್ಟೋರೇಜ್ ಸೇವೆಗಳು! ಅಂತರ್ಜಾಲದ ಮೂಲಕ ಸ್ಟೋರೇಜ್ ಸೇವೆ ನೀಡುತ್ತವೆ. 

ಇದೇ ಮಾದರಿಯಲ್ಲಿ ಸರ್ವರ್ ಗಳು, ವರ್ಚುವಲ್ ಮಶೀನುಗಳು, ಡಾಟಾ ಬೇಸ್, ಸಾಫ್ಟವೇರ್ ಗಳು ಸಹ ಲಭ್ಯ ಇದೆ. ಹೀಗೆ ಕಂಪ್ಯೂಟರ್ ಹಾರ್ಡವೇರ್ ಅಥವಾ ಸಾಫ್ಟವೇರ್ ಸೇವೆ ಬಾಡಿಗೆಗೆ ತೆಗೆದುಕೊಂಡು ಇಂಟರ್ನೆಟ್ ಮೂಲಕ ಬಳಸುವದಕ್ಕೆ ಕ್ಲೌಡ್ ಕಂಪ್ಯೂಟಿಂಗ್ ಎನ್ನಬಹುದು.

ಉದಾಹರಣೆಗೆ ಅಡೋಬೆ ಕ್ರಿಯೇಟಿವ್ ಕ್ಲೌಡ್ ಮೂಲಕ ಫೋಟೋ ಶಾಪ್, ಪ್ರಿಮಿಯರ್ ಹೀಗೆ ಹಲವು ಎಪ್ ಪಡೆಯಬಹುದು. ಅದೂ ಕೂಡಾ ಕ್ಲೌಡ್ ಕಂಪ್ಯೂಟಿಂಗ್!

ಕ್ಲೌಡ್ ಕಂಪ್ಯೂಟಿಂಗ್ ಎಂದರೆ ಬೇಡಿಕೆಗೆ ಅನುಗುಣವಾಗಿ ಕಂಪ್ಯೂಟರ್ ನ ವಿವಿಧ ಸೇವೆಯನ್ನು ಅಂತರ್ಜಾಲದ(ಇಂಟರ್ನೆಟ್ ನ) ಮೂಲಕ ಪಡೆದು ಬಳಸುವದು. ಆ ಸೇವೆ ಸರ್ವರ್, ಡಾಟಾಬೇಸ್, ಸ್ಟೋರೇಜ್, ಸಾಫ್ಟವೇರ್, ಮಾಹಿತಿ ಪ್ರಾಸೆಸಿಂಗ್, ಕೃತಕ ಬುದ್ಧಿಮತ್ತೆ(ಆರ್ಟಿಫಿಶಿಯಲ್ ಇಂಟೆಲಿಜೆನ್ಸ್),  ಮಾಹಿತಿ ವಿಶ್ಲೇಷಣೆ ಹೀಗೆ ಯಾವುದೇ ಕಂಪ್ಯೂಟರ್ ಸೇವೆ ಇರಬಹುದು. ಇವೆಲ್ಲವನ್ನು ಕ್ಲೌಡ್ ಕಂಪ್ಯೂಟಿಂಗ್ ಮೂಲಕ ಪಡೆಯಬಹುದು. 

ಇಲ್ಲಿ ಹಾರ್ಡವೇರ್ ಖರೀದಿ ಮಾಡಿ ಸಾಫ್ಟವೇರ್ ಇನ್ಸ್ಟಾಲ್ ಮಾಡಿ ಮೆಂಟೆನನ್ಸ್ ಮಾಡುವ ತಲೆ ಬಿಸಿ ಎಲ್ಲ ಕ್ಲೌಡ್ ಪ್ರೊವೈಡರ್ ದು. ನಿಮಗೆ ಬೇಕಾದಾಗ ಬಳಸಿ ಬಳಸಿದಷ್ಟಕ್ಕೆ ಬಾಡಿಗೆ ಹಣ ಕೊಟ್ಟರೆ ಆಯ್ತು. ನಿಮಗೆ ಸೇವೆ ಜಾಸ್ತಿ ಬೇಕಾದಾಗ ಜಾಸ್ತಿ ಬಳಸಿ. ಕಡಿಮೆ ಬೇಕಾದಾಗ ಕಡಿಮೆ ಬಳಸಿ. ಅಷ್ಟೇ. 

ಚಿತ್ರಕೃಪೆ: Mudassar Iqbal from Pixabay

{tocify} $title={ವಿಷಯ ಸೂಚಿ}

ಕ್ಲೌಡ್ ಕಂಪ್ಯೂಟಿಂಗ್ ನ ಮುಖ್ಯ ಲಾಭ ಎಂದರೆ 

  • ಖರ್ಚು ಕಡಿಮೆ
  • ನಿಮಗೆ ಎಷ್ಟು ಬೇಕೋ ಅಷ್ಟೇ ಬಳಸಿ ಅಷ್ಟಕ್ಕೆ ಹಣ ಕೊಟ್ಟರೆ ಸಾಕು.
  • ನೀವು ಯಾವುದೇ ಸರ್ವರ್, ಇಂಟರ್ನೆಟ್ ಬ್ಯಾಂಡ್ ವಿಡ್ತ್, ಪವರ್ ಬ್ಯಾಕಪ್, ಕೂಲಿಂಗ್ ಎಸಿ ಇತ್ಯಾದಿ ಖರೀದಿಸಿ ಮೆಂಟೇನ್ (ನಿರ್ವಹಣೆ) ಮಾಡಬೇಕಿಲ್ಲ. ಎಲ್ಲ ಕ್ಲೌಡ್ ಪ್ರೊವೈಡರ್ ನೋಡಿಕೊಳ್ಳುತ್ತಾನೆ.
  • ಅತಿ ಕಡಿಮೆ ಸಮಯದಲ್ಲಿ ಸ್ಕೇಲ್ ಅಪ್ ಹಾಗೂ ಡೌನ್ ಮಾಡಬಹುದು. 

ಜನಪ್ರಿಯ ಪಬ್ಲಿಕ್ ಕ್ಲೌಡ್ ಇನ್ಸ್ಪ್ರಾಸ್ಟ್ರಕ್ಚರ್ ಸೇವೆಗಳು

  • ಅಮೆಜಾನ್ ವೆಬ್ ಸರ್ವೀಸ್ (ಎ ಡಬ್ಲ್ಯೂ ಎಸ್ /  AWS)
  • ಮೈಕ್ರೊಸಾಫ್ಟ್ ಅಝ್ಯುರ್ (Azure)
  • ಗೂಗಲ್ ಕ್ಲೌಡ್ ಪ್ಲಾಟ್ ಪಾರ್ಮ್ (ಜಿಸಿಪಿ / GCP)
  • ರೆಡ್ ಹ್ಯಾಟ್ ಒಪನ್ ಶಿಫ್ಟ್
  • ಸೇಲ್ಸ್ ಫೋರ್ಸ್
  • ಅಲಿಬಾಬಾ ಕ್ಲೌಡ್

ಕ್ಲೌಡ್ ಕಂಪ್ಯೂಟಿಂಗ್ ಗೆ ಕ್ಲೌಡ್ ಅಂತಾ ಯಾಕೆ ಕರೀತಾರೆ?


ಚಿತ್ರಕೃಪೆ: Wynn Pointaux ಇಂದ Pixabay

ಕ್ಲೌಡ್ ಎಂದರೆ ಇಂಗ್ಲಿಷ್ ಅಲ್ಲಿ ಮೋಡ. ಅಲ್ಲ ಈ ಮೋಡಕ್ಕೂ ಈ ಇಂಟರ್ನೆಟ್ ಸೇವೆಗಳಿಗೆ ಏನು ಸಂಬಂಧ? ಯಾಕೆ ಹಾಗೆ ಕರೀತಾರೆ?

ಮೊದ ಮೊದಲು ಇಂಟರ್ನೆಟ್ ಆರಂಭ ಆದಾಗ ಟೆಕ್ನಿಕಲ್ ಡೈಗ್ರಾಮ್ ಗಳಲ್ಲಿ ಇಂಟರ್ನೆಟ್ ಸರ್ವರ್ ಹಾಗೂ ನೆಟವರ್ಕ್ ಮೂಲ ಸೌಕರ್ಯಗಳನ್ನು ಮೋಡದ ಚಿತ್ರ ಅಂದ್ರೆ ಕ್ಲೌಡ್ ಚಿತ್ರದ ಮೂಲಕ ಸೂಚಿಸಲಾಗುತ್ತಿತ್ತು. ಹೆಚ್ಚು ಹೆಚ್ಚು ಕಂಪ್ಯೂಟಿಂಗ್ ಇಂಟರ್ನೆಟ್ ಗೆ ಸ್ಥಾನ ಪಲ್ಲಟ ಆದ ಹಾಗೆ ಸ್ವಾಭಾವಿಕವಾಗಿ ತಂತ್ರಜ್ಞಾನ ಚರ್ಚೆ ಗಳಲ್ಲಿ ಕ್ಲೌಡ್ ಗೆ ಮೂವ್ ಮಾಡ್ತಿವಿ ಅಂತಾ ಸಂಕ್ಷಿಪ್ತವಾಗಿ ಹೇಳೋದು ರೂಢಿ ಆಯ್ತು.

ಇದು ಕೇವಲ ಆ ಡೈಗ್ರಾಮ್ ಅಲ್ಲಿ ಇಂಟರ್ನೆಟ್ ಗೆ ಸಾಂಕೇತಿಕವಾಗಿ ಬಳಸಿದ ಮೋಡದ ಚಿತ್ರಕ್ಕೆ ಹೋಲಿಕೆ ಮಾಡಿ ಬಂದ ಹೆಸರೇ ಹೊರತು ಮೋಡಕ್ಕೂ ಅರ್ಥಾತ್ ಕ್ಲೌಡ್ ಗೂ ಕ್ಲೌಡ್ ಕಂಪ್ಯೂಟಿಂಗ್ ಗೂ ಇನ್ನಾವ ಸಂಬಂಧ ಇಲ್ಲ!

ಕ್ರಮೇಣ ಈ ಅಂತರ್ಜಾಲದಲ್ಲಿ ಲಭ್ಯವಾದ ಎಲ್ಲ ಕಂಪ್ಯೂಟಿಂಗ್ ಸೇವೆಗೆ ಕ್ಲೌಡ್ ಅಂತಾನೇ ಕರೆಯಲ್ಪಟ್ಟಿತು. 

ಕ್ಲೌಡ್ ಕಂಪ್ಯೂಟಿಂಗ್ ವಿಧಗಳು


1. ಪಬ್ಲಿಕ್ ಕ್ಲೌಡ್

ಪಬ್ಲಿಕ್ ಕ್ಲೌಡ್ ಅಂದರೆ ಸಾರ್ವಜನಿಕ ಕ್ಲೌಡ್ ಸೇವೆಯನ್ನು ಅನೇಕ ಕಂಪನಿಗಳು ಒದಗಿಸುತ್ತವೆ. ಎಲ್ಲವನ್ನೂ ಆ ಕಂಪನಿಗಳೇ ನೋಡಿಕೊಳ್ಳುತ್ತವೆ. ಬಳಸುವವರು ಕ್ರೋಮ್, ಎಡ್ಜ್, ಸಫಾರಿಯಂತಹ ವೆಬ್ ಬ್ರೌಸರ್ ಬಳಸಿ ಈ ಸೇವೆಯನ್ನು ಪಡೆದು ಅವುಗಳನ್ನು ಮ್ಯಾನೇಜ್ ಕೂಡಾ ಮಾಡಬಹುದು. 

ಇಲ್ಲಿ ಡಾಟಾ ಸೆಂಟರ್ ಗಳು ಸಾರ್ವಜನಿಕ ಬಳಕೆದಾರರ ನಡುವೆ ಶೇರ್ ಮಾಡಲ್ಪಡುತ್ತದೆ.

ಉದಾ: ಎ ಡಬ್ಲ್ಯೂ ಎಸ್, ಅಝ್ಯೂರ್, ಜಿಸಿಪಿ. ಸೇಲ್ಸ್ ಫೋರ್ಸ್

2. ಪ್ರೈವೇಟ್ ಕ್ಲೌಡ್

ಸಾಮಾನ್ಯವಾಗಿ ಪ್ರೈವೇಟ್ ಕ್ಲೌಡ್ ಒಂದು ಕಂಪನಿಗೆ ಸೀಮಿತವಾಗಿದ್ದು ಅವರದ್ದೇ ಆದ ಡಾಟಾಸೆಂಟರ್ ಅಲ್ಲಿ ಹೋಸ್ಟ್ ಮಾಡಲಾಗಿರುತ್ತದೆ. ಕೆಲವೊಮ್ಮೆ ನಿಮ್ಮ ಕಂಪನಿಯು ಬೇರೆ ಕಂಪನಿಗೆ ಅವರ ಡಾಟಾ ಸೆಂಟರ್ ಅಲ್ಲಿ ಪ್ರೈವೇಟ್ ಕ್ಲೌಡ್ ಹೋಸ್ಟ್ ಮಾಡಲು ಹಣ ನೀಡಿರಲೂ ಬಹುದು. 

ಆದರೆ ಅದು ಕೇವಲ ನಿಮ್ಮ ಕಂಪನಿಯ ಪ್ರೈವೇಟ್ ನೆಟ್ ವರ್ಕ್ ಅಲ್ಲಿ ಮಾತ್ರ ಲಭ್ಯ ಇರುತ್ತದೆ. ಹಾಗೂ ಆ ಡಾಟಾ ಸೆಂಟರ್ ನಿಮ್ಮ ಕಂಪನಿ ಮಾತ್ರ ಬಳಸುತ್ತದೆ. ಬೇರೆಯವರು ಬಳಸುವಂತಿಲ್ಲ.

3. ಹೈಬ್ರಿಡ್ ಕ್ಲೌಡ್

ಪಬ್ಲಿಕ್ ಕ್ಲೌಡ್ ಹಾಗೂ ಪ್ರೈವೇಟ್ ಕ್ಲೌಡ್ ಎರಡರ ನಡುವೆ ಮಾಹಿತಿ ಹಾಗೂ ಅಪ್ಲಿಕೇಷನ್ ಹಂಚಲು ಅವಕಾಶ ಮಾಡಿ ಕೊಡುವ ತಂತ್ರಜ್ಞಾನಕ್ಕೆ ಹೈಬ್ರಿಡ್ ಕ್ಲೌಡ್ ಎನ್ನುತ್ತಾರೆ. 

ಇಲ್ಲಿ ಎರಡೂ ರೀತಿಯ ಕ್ಲೌಡ್ ಬಳಕೆ ಮಾಡಿ ಹೆಚ್ಚಿನ ಸುರಕ್ಷತೆ ಹಾಗೂ ಈಗಾಗಲೇ ನಿಮ್ಮ ಕಂಪನಿ ಬಳಿ ಇರುವ ಹಾರ್ಡವೇರ್ ಬಳಕೆ ಕೂಡಾ ಸಾಧ್ಯವಾಗುತ್ತದೆ.

ಕ್ಲೌಡ್ ಕಂಪ್ಯೂಟಿಂಗ್ ನ ಅನುಕೂಲತೆಗಳೇನು? 

ಅನುಕೂಲ ೧: ಮೊದಲು ಬೇಕಾಗುವ ಬಂಡವಾಳ ಕಡಿಮೆ

ನೀವು ಹಾರ್ಡವೇರ್ ಆದ ಸರ್ವರ್ ಗಳನ್ನು ಅಥವಾ ಸಾಫ್ಟವೇರ್ ಗಳನ್ನು ಖರೀದಿ ಮಾಡಬೇಕಿಲ್ಲ. ನಿಮ್ಮ ಜಾಗದಲ್ಲಿ ಡಾಟಾ ಸೆಂಟರ್ ಗಳನ್ನು ಸಜ್ಜು ಗೊಳಿಸಿ ಅವನ್ನು ನಡೆಸಬೇಕಿಲ್ಲ. 

ಒಂದು ಡಾಟಾ ಸೆಂಟರ್ ಅಂದ್ರೆ ಸರ್ವರ್ ಗಳು, ಅವುಗಳಿಗೆ ತಡೆರಹಿತವಾದ ವಿದ್ಯುತ್ ನೀಡಲು ಯುಪಿಎಸ್ ಸೌಲಭ್ಯ, ಹೈ ಸ್ಪೀಡ್ ಇಂಟರ್ ನೆಟ್ ಸೌಲಭ್ಯ, ಬಿಸಿ ಆಗುವ ಸರ್ವರ್ ಗಳನ್ನು ತಣ್ಣಗೆ ಮಾಡಲು ಎಸಿ ಹಾಗೂ ಕೂಲಿಂಗ್ ಸೌಲಭ್ಯ ಎಲ್ಲ ಬೇಕು. ಅಷ್ಟೇ ಅಲ್ಲ ಅದನ್ನು ನೋಡಿಕೊಂಡು ಹೋಗಲು ಇಂಜಿನಿಯರ್ ಗಳ ದೊಡ್ಡ ಟೀಂ ಬೇಕು. ಇಡಲು ಸುಸಜ್ಜಿತ ಹಾಗೂ ಸುರಕ್ಷಿತ ಬಿಲ್ಡಿಂಗ್ ಬೇಕು. ಎಲ್ಲಕ್ಕೂ ಹಲವು ಕೋಟ್ಯಂತರ ಆರಂಭಿಕ ಬಂಡವಾಳ ಹಾಗೂ ಅಷ್ಟೇ ಅಲ್ಲ ಪ್ರತಿ ವರ್ಷ ಹಲವು ಕೋಟಿ ಮೆಂಟೆನನ್ಸ್ ಗೆ ಬೇಕು. 

ಇವೆಲ್ಲ ಇಲ್ಲದೇ ಕ್ಲೌಡ್ ಕಂಪ್ಯೂಟಿಂಗ್ ಬಳಸಿ ಅದೇ ಸಾಮರ್ಥ್ಯದ ಅಪ್ಲಿಕೇಶನ್ ನಡೆಸಲು ಸಾಧ್ಯ. ಕೇವಲ ಬಳಸಿದ ಸೌಲಭ್ಯಕ್ಕೆ ಹಣ ಸಂದಾಯ ಮಾಡುತ್ತಿದ್ದರೆ ಆಯ್ತು.

ಅನುಕೂಲ ೨: ಖರ್ಚು ಕಡಿಮೆ

ಕ್ಲೌಡ್ ಕಂಪ್ಯೂಟಿಂಗ್ ಸೇವೆ ನೀಡುವ ಕಂಪನಿಗಳು ತಮ್ಮ ಸಾಮರ್ಥ್ಯವನ್ನು ತುಂಬಾ ದೊಡ್ಡ ಮಟ್ಟದಲ್ಲಿ ಸಜ್ಜು ಗೊಳಿಸುವದರಿಂದ ಅವು ಕಡಿಮೆ ಬೆಲೆಗೆ ನೀಡಲು ಸಾಧ್ಯ ಆಗುತ್ತೆ. ಇದರಿಂದ ಬಳಕೆ ಮಾಡುವವರಿಗೆ ಖರ್ಚು ಕಡಿಮೆ.

ಅನುಕೂಲ ೩:  ಬೇಡಿಕೆಗೆ ಅನುಗುಣವಾಗಿ ಬಳಕೆ

ಆಯಾ ಕಾಲಕ್ಕೆ ಎಷ್ಟು ರಾಮ್ ಮೆಮರಿ ಬೇಕು ಅಷ್ಟೇ ಬಳಸಿ. ಸ್ಟೋರೆಜ್, ಸರ್ವರ್ ಎಲ್ಲ ಬೇಕಾದಷ್ಟೇ ಬಳಸಿ ಅಷ್ಟಕ್ಕೆ ಹಣ ಕೊಟ್ಟರೆ ಆಯ್ತು. ವಾರದ ದಿನಗಳಲ್ಲಿ ಜಾಸ್ತಿ ಸರ್ವರ್, ವಾರಾಂತ್ಯದಲ್ಲಿ ಯಾವ ಸರ್ವರ್ ಬಳಸಲ್ವಾ. ಅದೂ ಓಕೆ. ಇದನ್ನು ನಿಮ್ಮ ಡಾಟಾ ಸೆಂಟರ್ ಅಲ್ಲಿ ಮಾಡಲಾಗದು. ಬಳಸಲಿ ಬಿಡಲಿ ಇಡೀ ಡಾಟಾ ಸೆಂಟರ್ ನಡೆಯುತ್ತಲೇ ಇರಬೇಕು. 

ಅನುಕೂಲ ೪: ಸಮಯ ಉಳಿತಾಯ

ನಿಮ್ಮ ಕಂಪನಿಗೆ ಕ್ಲೌಡ್ ಸೇವೆ ಬಳಸಲು ಆರಂಭಿಸಲು ತುಂಬಾ ಸಮಯ ಬೇಡ. ಒಂದು ಬ್ರೌಸರ್ ಬಳಸಿ ಕ್ಲೌಡ್ ಸೇವೆ ಬಳಸಲು ರಿಜಿಸ್ಟರ್ ಮಾಡಿ ಬೇಕಿರುವ ರಿಸೋರ್ಸ್ ವಿವರ ನೀಡಿದರೆ ಸಾಕು ಅರ್ಧ ಗಂಟೆಯಲ್ಲಿ ಬಳಸಲು ಆರಂಭಿಸಬಹುದು. ಅದೇ ಸ್ವಂತ ಡಾಟಾಸೆಂಟರ್ ನಿರ್ಮಾಣಕ್ಕೆ ಹಲವು ತಿಂಗಳ ಪರಿಶ್ರಮ ಬೇಕು.
ಅಷ್ಟೇ ಅಲ್ಲ ಹಾರ್ಡವೇರ್ ಅಪ್ ಗ್ರೇಡ್, ಸಾಫ್ಟವೇರ್ ಅಪ್ ಗ್ರೇಡ್. ಪ್ಯಾಚ್ಸ್ ಅಪ್ಲೈ ಮಾಡೋದಕ್ಕೆ ಸಮಯ ವ್ಯರ್ಥ ಮಾಡಬೇಕಿಲ್ಲ. ಎಲ್ಲ ಕ್ಲೌಡ್ ಕಂಪನಿಗಳೇ ಮಾಡಿ ಬಿಡುತ್ತವೆ. ಈ ಎಲ್ಲ ಸಮಯ ಉಳಿತಾಯ ಆಗುತ್ತೆ.

ಅನುಕೂಲ ೫: ಜಾಸ್ತಿ ವೇಗ

ಕ್ಲೌಡ್ ಕಂಪನಿಗಳು ಕಾಲ ಕಾಲಕ್ಕೆ ಲೇಟೆಸ್ಟ್ ಹಾರ್ಡವೇರ್ ಅಪ್ ಡೇಟ್ ಮಾಡಿ ಅಥವಾ ಹೊಸ ಹೊಸ ಡಾಟಾ ಸೆಂಟರ್ ನಿರ್ಮಿಸಿ ನೀಡುತ್ತಾ ಇರುವದರಿಂದ ವೇಗವಾಗಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ ನೀವು ಎಷ್ಟು ಬೇಕೋ ಅಷ್ಟು ಅಪ್ ಸ್ಕೇಲಿಂಗ್ ಅನ್ನು ಜಾಸ್ತಿ ಸರ್ವರ್, ಡಾಟಾ ಬೇಸ್ ಇತ್ಯಾದಿ ಸೇರಿಸುವದರ ಮೂಲಕ ಮಾಡಬಹುದು.

ಅನುಕೂಲ ೬: ನಂಬಿಕೆಗೆ ಅರ್ಹವಾದುದು

ಕ್ಲೌಡ್ ಸೇವೆ ಕಡಿಮೆ ಬೆಲೆಯದ್ದು ಆದುದರಿಂದ ಕ್ಲೌಡ್ ಅಲ್ಲಿ ಡಾಟಾ (ಮಾಹಿತಿ) ವನ್ನು ಹಲವು ತಾಣಗಳಲ್ಲಿ ಮಿರರ್ ಕಾಪಿ ಮಾಡಿಡಬಹುದು. ಆದ್ದರಿಂದ ಹೆಚ್ಚು ನಂಬಿಕೆಗೆ ಅರ್ಹ. ನಮ್ಮ ಮಾಹಿತಿ ಕಳೆದು ಹೋಗುವ ಅಥವಾ ಕರಪ್ಟ್ ಆಗಿ ಹಾಳಾಗುವ ಭಯ ಇಲ್ಲ.

ಅನುಕೂಲ ೭: ಸುರಕ್ಷತೆ ಸೌಲಭ್ಯಗಳು

ಎಲ್ಲ ಕ್ಲೌಡ್ ಸೌಲಭ್ಯಗಳು ಹಲವು ಸುರಕ್ಷತೆಯ ಫೀಚರ್ ನೀಡುತ್ತವೆ. ಅವನ್ನು ಬಳಸಿ ನಿಮ್ಮ ಮಾಹಿತಿ, ಅಪ್ಲಿಕೇಶನ್ ಎಲ್ಲ ಸುರಕ್ಷತವಾಗಿದ್ದು ದುಷ್ಟರ ಕೈಗೆ ಸಿಗದಂತೆ ರಕ್ಷಿಸಬಹುದು. ಇವೆಲ್ಲವನ್ನು ಕಂಪನಿಗಳು ತಾವೇ ಮಾಡಬೇಕೆಂದರೆ ಜಾಸ್ತಿ ಬಂಡವಾಳ ಬೇಕು.

ಕ್ಲೌಡ್ ಕಂಪ್ಯೂಟಿಂಗ್ ನ ಎಲ್ಲೆಲ್ಲಿ ಬಳಸುತ್ತಾರೆ?

ಬಳಕೆ ೧: ಕ್ಲೌಡ್ ನೇಟಿವ್ ಅಪ್ಲಿಕೇಶನ್ ಗಳು

ನಿಮಗೆ ವೆಬ್ ಅಪ್ಲಿಕೇಶನ್ ಹೋಸ್ಟ್ ಮಾಡಬೇಕೆ? ಅಥವಾ ಮೊಬೈಲ್ ಅಪ್ಲಿಕೇಶನ್ ಗೆ ಅಗತ್ಯ ವಿರುವ ಸರ್ವೀಸ್ ಗಳನ್ನು ನಡೆಸಬೇಕೆ? ಇಲ್ಲಾಂದ್ರೆ ರೆಸ್ಟ್ ಏಪಿಐ (API) ಅನ್ನು ಹೋಸ್ಟ್ ಮಾಡಿ ನಡೆಸ ಬೇಕೆ? ಇವೆಲ್ಲವನ್ನು ಕ್ಲೌಡ್ ನೇಟಿವ್ ಅಪ್ಲಿಕೇಶನ್ ತಂತ್ರಜ್ಞಾನ ಬಳಸಿ ಬಿಲ್ಡ್ (build) ಮಾಡಿ ಡಿಪ್ಲೊಯ್(deploy) ಮಾಡಬಹುದು.

ಬಳಕೆ ೨: ಮಾಹಿತಿ ಉಳಿಸುವಿಕೆ

ನಿಮ್ಮ ಅಮೂಲ್ಯ ಮಾಹಿತಿ ಅದು ಅಕ್ಷರ, ಫೋಟೋ, ವಿಡಿಯೋ, ಆಡಿಯೋ ಯಾವುದೇ ರೂಪದಲ್ಲಿರಲಿ ಅಥವಾ ಟಿವಿ ಸಿರಿಯಲ್ / ಡಾಕ್ಯುಮೆಂಟರಿ / ಸಿನಿಮಾ ಡಿಜಿಟಲ್ ಮಾಸ್ಟರ್ ಕಾಪಿ ಹೀಗೆ ಎಲ್ಲದರ ಬ್ಯಾಕ ಅಪ್ ಸಹ ಕ್ಲೌಡ್ ಅಲ್ಲಿ ಸುರಕ್ಷಿತವಾಗಿಡಬಹುದು.

ಬಳಕೆ ೩: ಮಾಹಿತಿ ವಿಶ್ಲೇಷಣೆ ಸಲುವಾಗಿ

ಕ್ಲೌಡ್ ಅಲ್ಲಿ ಅಪಾರ ಪ್ರಮಾಣದ ಮಾಹಿತಿ ಉಳಿಸಿ ಕ್ರೋಢಿಕರಿಸಿ ಅದರ ವಿಶ್ಲೇಷಣೆ ಮಾಡಿ ಉಪಯುಕ್ತ ರೀತಿಯಲ್ಲಿ ಬಳಕೆದಾರರಿಗೆ ತೋರಿಸಬಹುದು.

ಬಳಕೆ ೪: ವಿಡಿಯೋ ಹಾಗೂ ಆಡಿಯೋ ಸ್ಟ್ರೀಮೀಂಗ್ ಸಲುವಾಗಿ

ಇಂದು ಹೆಚ್ಚಿನ ಆನ್ ಡಿಮಾಂಡ್ ವಿಡಿಯೋ/ ಆಡಿಯೋ ಸ್ಟ್ರೀಮಿಂಗ್ ಬಳಸುವದು ಕ್ಲೌಡ್ ಅನ್ನು. ನೆಟ್ ಫ್ಲಿಕ್ಸ್, ಅಮೇಜಾನ್ ಪ್ರೈಮ್ ಇದಕ್ಕೆ ಉದಾಹರಣೆಗಳು. ಅಂತಹ ವಿಡಿಯೋ ಸ್ಟ್ರೀಮಿಂಗ್ ಸೇವೆ ನೀಡಲು ಕ್ಲೌಡ್ ಸೇವೆ ಬಳಸಬಹುದು.

ಬಳಕೆ ೫: ಆನ್ ಡಿಮಾಂಡ್ ಸಾಫ್ಟವೇರ್ ಸೇವೆ ಒದಗಿಸಲು

ಕ್ಲೌಡ್ ಕಂಪ್ಯೂಟಿಂಗ್ ಬಳಸಿ ಆನ್ ಡಿಮಾಂಡ್ ಸಾಫ್ಟವೇರ್ ಸೇವೆ ಒದಗಿಸಬಹುದು. ಉದಾ: ಅಡೋಬೆ ಕ್ರಿಯೆಟಿವ್ ಕ್ಲೌಡ್, ಆಫೀಸ್ ೩೬೫

ಬಳಕೆ ೬: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸೇವೆಗಾಗಿ

ಕ್ಲೌಡ್ ಕಂಪ್ಯೂಟಿಂಗ್ ಕೃತಕ ಬುದ್ದಿಮತ್ತೆಗೆ ಅಗತ್ಯವಾದ ಮೊಡೆಲಿಂಗ್ ಹಾಗೂ ಅಪಾರ ಮಾಹಿತಿ ವಿಶ್ಲೇಷಣೆ ಸಾಮರ್ಥ್ಯವನ್ನು ನೀಡಬಲ್ಲುದು. ಇದು ಹಲವು ಕೆಲಸಗಳಿಗೆ ಉಪಯುಕ್ತ.

ಕ್ಲೌಡ್ ಕಂಪ್ಯೂಟಿಂಗ್ ನ ಸೇವೆಗಳು

ಇನ್ಫ್ರಾಸ್ಟ್ರಕ್ಚರ್ ಎಸ್ ಎ ಸರ್ವೀಸ್ (ಐಯಾಸ್ / IaaS)

ಇದು ತುಂಬಾ ಮೂಲಭೂತ (ಬೇಸಿಕ್) ಬಗೆಯ ಕ್ಲೌಡ್ ಸೇವೆ ಆಗಿದೆ. ಇಲ್ಲಿ ನೀವು ವರ್ಚುವಲ್ ಸರ್ವರ್, ಡಾಟಾ ಬೇಸ್, ನೆಟ್ ವರ್ಕ್ ಸಂಪರ್ಕಗಳು ಇವೆಲ್ಲವನ್ನು ಕ್ಲೌಡ್ ಸೇವೆ ನೀಡುವ ಕಂಪನಿಯಿಂದ ಪಡೆಯಬಹುದು.

ಇನ್ಫ್ರಾಸ್ಟ್ರಕ್ಚರ್ ಎಂದರೆ ಮೂಲ ಸೌಕರ್ಯಗಳು. ಇಲ್ಲಿ ನಿಮಗೆ ಸರ್ವರ್ ಗಳು, ಡಾಟಾಬೇಸ್ ಗಳು ಸಿಗುತ್ತವೆ. ಇವುಗಳ ಅಡ್ಮಿನಿಸ್ಟ್ರೇಶನ್ (ಮೇಲ್ವಿಚಾರಣೆ) ಎಲ್ಲ ನಿಮ್ಮ ಕೆಲಸ.

ಈ ಸೌಲಭ್ಯ ನೀಡುವ ಮುಖ್ಯ ಕಂಪನಿಗಳು

ಪ್ಲಾಟ್ ಪಾರ್ಮ್ ಎಸ್ ಎ ಸರ್ವೀಸ್ (ಪಾಸ್ / PaaS)

ಪ್ಲಾಟ್ ಪಾರ್ಮ್ ಎಸ್ ಸರ್ವೀಸ್ ಅಲ್ಲಿ ಡಾಟಾಬೇಸ್ ಮ್ಯಾನೆಜ್ ಮೆಂಟ್, ಡೆವೆಲಪ್ ಮೆಂಟ್ ಸಲಕರಣೆಗಳು, ಕ್ಯುಬರ್ನೇಟ್ಸ್ ಅಂತಹ ಒರ್ಕಿಸ್ಟ್ರೇಶನ್ ಸೇವೆಗಳು ಸಹ ಇರುತ್ತದೆ. ಅಷ್ಟೇ ಅಲ್ಲ ಐಯಾಸ್ (IAAS) ನಂತೆ ವರ್ಚುಅಲ್ ಮಶೀನ್ ಗಳು, ಸ್ಟೋರೇಜ್ ಸಹ ಲಭ್ಯ ಇರುತ್ತದೆ.

ಸಾಫ್ಟವೇರ್ ಎಸ್ ಎ ಸರ್ವೀಸ್ (ಸಾಸ್ / SaaS)

ಸಾಫ್ಟವೇರ್ ಎಸ್ ಸರ್ವೀಸ್ ಅಲ್ಲಿ ನೀವು ನೇರವಾಗಿ ವೆಬ್ ಅಪ್ಲಿಕೇಶನ್ ಅಥವಾ ಮೊಬೈಲ್ ಎಪ್ ಬಳಸಿ ಸರ್ವೀಸ್ ಅನ್ನು ಬಳಸುತ್ತೀರಿ. 

ಉದಾಹರಣೆಗೆ ಆಫೀಸ್ ೩೬೫ ಮೂಲಕ ವರ್ಡ್, ಎಕ್ಸೆಲ್, ಪವರ್ ಪಾಯಿಂಟ್, ಔಟ್ ಲುಕ್ ಮೊದಲಾದ ಅಪ್ಲಿಕೇಶನ್  ಬಳಸಬಹುದು. ಗೂಗಲ್ ವರ್ಕ್ ಸ್ಪೇಸ್ ಕೂಡಾ ಅದೇ ರೀತಿ ಹಲವು ಅಪ್ಲಿಕೇಶನ್ ನೀಡುತ್ತದೆ. ವೆಬ್ ಎಕ್ಸ್ ಹಾಗೂ ಗೋ ಟೂ ಮೀಟಿಂಗ್ ಬಳಸಿ ವಿಡಿಯೋ ಕಾಲ್ ಹಾಗೂ ಮೆಸೆಜಿಂಗ್ ಮಾಡಬಹುದು.

ಇಲ್ಲಿ ಅಪ್ಲಿಕೇಶನ್ ನಿರ್ಮಾಣ, ಮೆಂಟೆನನ್ಸ್, ಅಪಡೇಟ್ ಎಲ್ಲಾ ಕ್ಲೌಡ್ ಪ್ರೊವೈಡರ್ ನೋಡಿಕೊಳ್ಳುತ್ತಾರೆ. ಬಳಕೆದಾರ ಬಳಸಿದರೆ ಆಯ್ತು.

ಈ ಸಾಸ್ ಕ್ಲೌಡ್ ಸೇವೆ ನೀಡುವ  ಕೆಲವು ಉದಾಹರಣೆಗಳು

ಸರ್ವರ್ ಲೆಸ್ ಕಂಪ್ಯೂಟಿಂಗ್

ಸರ್ವರ್ ಲೆಸ್ ಕಂಪ್ಯೂಟಿಂಗ್ ಅಂದರೆ ಕ್ಲೌಡ್ ಕಂಪ್ಯೂಟಿಂಗ್ ಪ್ರೊವೈಡರ್ ಸರ್ವರ್ ನ ಮ್ಯಾನೆಜ್ ಮಾಡುವದು ಎಲ್ಲ ಮಾಡುತ್ತದೆ. ಕೇವಲ ಬ್ಯಾಕೆಂಡ್ ಎಪಿಐ ಬಳಕೆ ಆಧಾರದ ಮೇಲೆ ಚಾರ್ಜ್ ಮಾಡಲಾಗುತ್ತದೆ. ಇಲ್ಲಿ ಡೆವೆಲಪರ್ ವರ್ಚುವಲ್ ಮಶೀನ್, ಡಾಟಾಬೇಸ್ ಹೀಗೆ ತಲೆ ಕೆಡಿಸಿ ಕೊಳ್ಳ ಬೇಕಿಲ್ಲ.

ಡೆಸ್ಕ್ ಟಾಪ್ ಎಸ್ ಎ ಸರ್ವೀಸ್ (DaaS)

ಡೆಸ್ಕ್ ಟಾಪ್ ಎಸ್ ಎ ಸರ್ವೀಸ್ ಇಲ್ಲಿ ಕ್ಲೌಡ್ ಪ್ರೊವೈಡರ್ ವರ್ಚುವಲ್ ಡೆಸ್ಕ್ ಟಾಪ್ ಅನ್ನು ಬಳಕೆದಾರರಿಗೆ ಬಳಸಲು ನೀಡುತ್ತಾರೆ. ಕ್ಲೌಡ್ ಪ್ರೊವೈಡರ್ ಆಪರೇಟಿಂಗ್ ಸಿಸ್ಟೆಮ್, ಸೆಕ್ಯುರಿಟಿ ಅಪಡೇಟ್, ಡಾಟಾ ಬ್ಯಾಕ್ ಅಪ್ ಹೀಗೆ ಎಲ್ಲವನ್ನು ನೋಡಿಕೊಂಡರೆ ಬಳಕೆದಾರ ಅಪ್ಲಿಕೇಶನ್ ಸ್ಥಾಪನೆ ಹಾಗೂ ಬಳಕೆ ಮಾಡುತ್ತಾನೆ. ಈ ಡೆಸ್ಕ್ ಟಾಪ್ ಅನ್ನು ವಿಡಿ ಐ (VDI) ಅನ್ನುತ್ತಾರೆ.

ಯಾವ ಕ್ಲೌಡ್ ಸೇವೆ ಎಷ್ಟು ಜನಪ್ರಿಯ?


ಕ್ಲೌಡ್ ಮೂಲ ಸೌಕರ್ಯ ನೀಡುವದರಲ್ಲಿ ಅಮೇಜಾನ್ ವೆಬ್ ಸರ್ವೀಸ್ ದು ಸಿಂಹ ಪಾಲು. ಅದು 32% ಮಾರ್ಕೆಟ್ ಶೇರ್ ಎ ಡಬ್ಲ್ಯೂ ಎಸ್ (AWS) ಹೊಂದಿದೆ. ಅದರ ನಂತರದ ಸ್ಥಾನ ಮೈಕ್ರೊಸಾಫ್ಟ್ ಅಝ್ಯೂರ್ ಹೊಂದಿದ್ದು 21%, ಆಮೇಲೆ ಗೂಗಲ್ ಕ್ಲೌಡ್ 8% ಮಾರುಕಟ್ಟೆ ಪಾಲು ಹೊಂದಿದೆ. ಆಮೇಲೆ ಉಳಿದ ಎಲ್ಲ ಕ್ಲೌಡ್ ಸೇವೆಗಳು ಸೇರಿ 39% ಇನ್ಪ್ರಾಸ್ಟ್ರಕ್ಚರ್ ಕ್ಲೌಡ್ ಮಾರುಕಟ್ಟೆ ಪಾಲು ಹೊಂದಿದೆ.
ಮಾಹಿತಿ ಕೃಪೆ: ಸ್ಟೆಟಿಸ್ಟಾ.ಕಾಂ

ಯಾವ ಕ್ಲೌಡ್ ಸೇವೆ ನೀವು ಕಲಿಯುವದು ಒಳ್ಳೆಯದು?

ಕ್ಲೌಡ್ ಕೆಲಸಕ್ಕೆ ೨೦೨೨ರಲ್ಲಿ ತುಂಬಾ ಡಿಮ್ಯಾಂಡ್ ಇದೆ. ನೀವು ಡೆವೆಲಪರ್ ಅಥವಾ ಟೆಸ್ಟರ್ ಆಗಿದ್ದರೆ ಕ್ಲೌಡ್ ಕಂಪ್ಯೂಟಿಂಗ್ ಕಲಿಕೆ ನಿಮ್ಮ ಮುಖ್ಯ ಗುರಿ ಆಗಿರಲಿ. 

ನೀವು ಯಾವುದಾದರೂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಆ ಕಂಪನಿಯ ರೋಡ್ ಮ್ಯಾಪ್ ಅಲ್ಲಿ ಯಾವ ಕ್ಲೌಡ್ ಸೇವೆ ಬಳಸಲು ಪ್ಲ್ಯಾನ್ ಮಾಡಿದ್ದಾರೋ ಅಥವಾ ಈಗಾಗಲೇ ಬಳಸುತ್ತಿದ್ದಾರೋ ಅದನ್ನೇ ಕಲಿಯಿರಿ.

ಕಂಪ್ಯೂಟರ್ ಇಂಜಿನಿಯರಿಂಗ್ ಅಥವಾ ಇನ್ಯಾವುದೇ ವಿದ್ಯಾರ್ಥಿ ಆಗಿದ್ದರೆ ಅಮೇಜಾನ್ ವೆಬ್ ಸರ್ವೀಸ್ ಅಥವಾ ಅಝ್ಯೂರ್ ಅಥವಾ ಗೂಗಲ್ ಕ್ಲೌಡ್ ಇವುಗಳಲ್ಲಿ ಯಾವುದಾದರೊಂದು ಒಳ್ಳೆಯದು.

ಯಾವುದೇ ಕ್ಲೌಡ್ ಸೇವೆ ಬಗ್ಗೂ ವಿವರವಾಗಿ ಕಲಿಯಿರಿ ಪರವಾಗಿಲ್ಲ. ಆದರೆ ಪರಿಕಲ್ಪನೆ ಅರ್ಥ ಮಾಡಿ ಕೊಂಡು ಬಳಸಿ. ಯಾಕೆಂದರೆ ಈ ಕನ್ಸೆಪ್ಟ್ ಗಳು ಎಲ್ಲ ಕ್ಲೌಡ್ ಸೇವೆ ಗಳಿಗೂ ಅನ್ವಯ ಆಗುತ್ತೆ. ನಾಳೆ ಬೇರೆ ಕ್ಲೌಡ್ ಸೇವೆ ಬಳಸುವ ಅಗತ್ಯ ಬಂದರೆ ಅದನ್ನು ಬೇಗ ಕಲಿಯಬಹುದು.

ಎಲ್ಲ ಕ್ಲೌಡ್ ಸೇವೆ ಅರ್ಧ ಮರ್ಧ ಕಲಿಯುವದರ ಬದಲು ಯಾವುದಾದರೊಂದನ್ನು ಮೊದಲಿನಿಂದ ಕೊನೆಯವರೆಗೆ ಪರಿಪೂರ್ಣವಾಗಿ ಕಲಿಯಿರಿ. ಸಾಧ್ಯವಾದರೆ ಆ ಕ್ಲೌಡ್ ಸರ್ಟಿಫಿಕೇಶನ್ ಸಹಾ ಮಾಡಿ.

ಕೊನೆಯ ಮಾತು

ಆರಂಭಿಕ ದಿನಗಳಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಅನ್ನು ಬಳಸಲು ಅನೇಕ ಎಂಟರ್ ಪ್ರೈಸ್ ಗಳು ಸುರಕ್ಷತೆಯ ಕಾರಣಕ್ಕೆ ಹಿಂದೇಟು ಹಾಕಿದ್ದರೂ ಕಾಲಕ್ರಮೇಣ ಬಳಕೆಗೆ ಮನಸ್ಸು ಮಾಡಿದೆ. 

ಇದಕ್ಕೆ ಮುಖ್ಯ ಕಾರಣ ಕ್ಲೌಡ್ ಸೇವೆಗಳು ಸುರಕ್ಷತಾ ಸೌಲಭ್ಯಗಳನ್ನು ಉತ್ತಮ ಗೊಳಿಸಿರುವದು ಮತ್ತು ಮೂಲ ಸೌಕರ್ಯ (ಇನ್ಫ್ರಾಸ್ಟ್ರಕ್ಚರ್) ದ ಖರ್ಚಲ್ಲಿ ಉಳಿತಾಯ. ಅಷ್ಟೇ ಅಲ್ಲ ಕ್ಲೌಡ್ ಡೆವೆಲಪ್ ಮೆಂಟ್ ನಿಂದ ಹಿಡಿದು ಬ್ಯಾಕ್ ಅಪ್ ವರೆಗೆ ಎಲ್ಲ ಕೆಲಸವನ್ನು ಸರಳ ಗೊಳಿಸುತ್ತದೆ.

ಈಗಾಗಲೇ ಡಾಟಾಸೆಂಟರ್ ಹೊಂದಿರುವ ಕಂಪನಿಗಳು ಹೈಬ್ರಿಡ್ ಕ್ಲೌಡ್ ಮಾಡೆಲ್ ಆಯ್ದು ಇರುವ ಹಾರ್ಡವೇರ್ ಸದುಪಯೋಗ ಮಾಡುವ ಸಾಧ್ಯತೆ ಜಾಸ್ತಿ.

ಇನ್ನೂ ಅನೇಕ ಕಂಪನಿಗಳು ಕ್ಲೌಡ್ ಗೆ ಸಾಗುವ ಹಂತದಲ್ಲಿದೆ. ಅಂದರೆ ಕ್ಲೌಡ್ ಗೆ ಉತ್ತಮ ಭವಿಷ್ಯವಿದೆ. ನೀವು ಕಂಪ್ಯೂಟರ್ ಇಂಜಿನಿಯರ್ ಆಗಿದ್ದರೆ ತಪ್ಪದೇ ಕ್ಲೌಡ್ ಬಗ್ಗೆ ತಿಳಿದು ಕೊಳ್ಳಿರಿ.

ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ ಏನು? ತಿಳಿಸಿ.

Advertisement

blogger
© ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ, ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ವಿಸ್ಮಯನಗರಿ.ಕಾಂ