Slider

ಚ್ಯಾಟ್ ಜಿಪಿಟಿ ಎಂದರೇನು?

 ಏನಿದು ಚ್ಯಾಟ್ ಜಿಪಿಟಿ? ಅದನ್ನು ನಿರ್ಮಿಸಿದ್ದು ಯಾರು? ಅದನ್ನು ಬಳಸುವದು ಹೇಗೆ? ಬನ್ನಿ ತಿಳಿಯೋಣ.

ಚ್ಯಾಟ್ ಜಿಪಿಟಿ ಏನಿದು?


ಓಪನ್ ಏಐ ಎಂಬ ಕಂಪನಿ ನಿರ್ಮಿಸಿದ ಚ್ಯಾಟ್ ಜಿಪಿಟಿ ಕೃತಕ ಬುದ್ಧಿ ಶಕ್ತಿ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಮಾದರಿ ಆಗಿದ್ದು ಮನುಷ್ಯರಂತೇ ವಿಚಾರ ಮಾಡಿ ಸಂಭಾಷಣೆ ನಡೆಸುವ ಸಾಮರ್ಥ್ಯ ಹೊಂದಿದೆ.

ಇದು ದೊಡ್ಡ ಭಾಷೆಯ ಮಾದರಿ (ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್) ಆಗಿದ್ದು ಇಂಟರ್ನೆಟ್ ನಲ್ಲಿ ಲಭ್ಯ ಇರುವ ಮಾಹಿತಿಯನ್ನು ಬಳಸಿ ಇದನ್ನು ಟ್ರೇನ್ ಮಾಡಲಾಗಿದೆ. ಇದಕ್ಕೆ ಚ್ಯಾಟ್ ವಿಂಡೋ ಮೂಲಕ ಪ್ರಶ್ನೆ ಕೇಳಿದರೆ ಮನುಷ್ಯರ ಹಾಗೆ ಉತ್ತರ ನೀಡುತ್ತದೆ. ಕಥೆ, ಲೇಖನ, ಕವನ ಕೂಡಾ ಬರೆಯಬಲ್ಲುದು!

ಉದಾಹರಣೆಗೆ ಮೇಲಿನ ಚಿತ್ರ ಒಮ್ಮೆ ಗಮನಿಸಿ ನಾನು ಶೆರ್ಲಾಕ್ ಹೋಮ್ಸ್ ನ ಚಿಕ್ಕ ಪತ್ತೆದಾರಿ ಕಥೆ ಅದರ ಮೂಲ ಲೇಖಕರ ಶೈಲಿಯಲ್ಲೇ ಬರೆಯಲು ಚ್ಯಾಟ್ ಜಿಪಿಟಿ ಗೆ ಕೇಳಿದೆ. ೨೦ ಸೆಕಂಡಲ್ಲಿ ಕಥೆ ಬರೆದು ನನ್ನ ಮುಂದಿಟ್ಟಿತು! 

ಇನ್ನು ಹೋಂ ವರ್ಕ್ ಮಾಡಲು ಮಕ್ಕಳಿಗೆ ಚಿಂತಿಲ್ಲ ಚ್ಯಾಟ್ ಜಿಪಿಟಿ ಇದೆಯಲ್ಲ!

ಚ್ಯಾಟ್ ಜಿಪಿಟಿ ಎಂಬ ಹೆಸರು ಹೇಗೆ ಬಂತು?

ಜನರೇಟಿವ್ ಪ್ರಿಟ್ರೇನ್ ಡ್ ಟ್ರಾನ್ಸ್ ಫಾರ್ಮರ್ ಆರ್ಕಿಟೆಕ್ಚರ್ ಆಧಾರಿತ ಚ್ಯಾಟ್ ಬೊಟ್ ಆಗಿರುವದರಿಂದ ಇದಕ್ಕೆ ಚ್ಯಾಟ್ ಜಿಪಿಟಿ (Generative Pre-trained Transformer) ಎಂಬ ಹೆಸರು ಬಂತು.

ಚ್ಯಾಟ್ ವಿಂಡೋ ನಲ್ಲಿ ನೀವು ಪ್ರಶ್ನೆ ಕೇಳಿದರೆ ಈಗಾಗಲೇ ಟ್ರೇನ್ ಆದ ಮಾಹಿತಿ ಆಧಾರದ ಮೇಲೆ ಉತ್ತರಿಸಬಲ್ಲುದು. ಕವಿತೆ ಬರೆಯಬಲ್ಲುದು. ಕಥೆ, ಬ್ಲಾಗ್ ಲೇಖನ ಕೂಡಾ ಬರೆಯಬಲ್ಲುದು.

ಮಾಹಿತಿಯ ಮೂಲ ಯಾವುದು?

ಚ್ಯಾಟ್ ಜಿಪಿಟಿಗೆ ಅಂತರ್ಜಾಲದಲ್ಲಿ ಲಭ್ಯ ಇರುವ ಆಯ್ದ ವೆಬ್ ಸೈಟ್ ಗಳು, ಪುಸ್ತಕಗಳು, ಲೇಖನಗಳು ಮೊದಲಾದವುಗಳನ್ನು ಬಳಸಿ ಟ್ರೇನ್ ಮಾಡಲಾಗಿದೆ.

ಓಪನ್ ಏಐ ಕಂಪನಿಯು ಮಾಹಿತಿಯನ್ನು ಬೇರೆ ಬೇರೆ ವಿಷಯಗಳ ಬಗ್ಗೆ ಹಾಗೂ ಬರಹ ಶೈಲಿಯದ್ದನ್ನು ಆಯ್ಕೆ ಮಾಡಿದೆ. ಇದರಿಂದ ಈ ಚ್ಯಾಟ್ ಜಿಪಿಟಿ ಹಲವು ವಿಷಯಗಳ ಬಗ್ಗೆ ಉತ್ತರ ನೀಡಲು ಅಥವಾ ಕಂಟೆಂಟ್ ಕ್ರಿಯೇಟ್ ಮಾಡಬಲ್ಲುದು.

೪೦ಜಿಬಿ ಗೂ ಹೆಚ್ಚು ಬರಹವನ್ನು ಈ ಮಾಡೆಲ್ ಗೆ ತರಬೇತಿ ನೀಡಲಾಗಿದೆ. ಅದರಿಂದ ಚ್ಯಾಟ್ ಜಿಪಿಟಿ ಭಾಷೆಯ ಸೂಕ್ಷ್ಮ ಅರ್ಥ ವ್ಯತ್ಯಾಸ ತಿಳಿಯುತ್ತದೆ. ಅಷ್ಟೇ ಅಲ್ಲ ಸನ್ನಿವೇಶಗಳನ್ನೂ ಕೂಡಾ ಅರ್ಥ ಮಾಡಿಕೊಳ್ಳಬಲ್ಲುದು.

ಹೇಗೆ ಕೆಲಸ ಮಾಡುತ್ತದೆ?

ಚ್ಯಾಟ್ ಜಿಪಿಟಿ ಟ್ರಾನ್ಸಫಾರ್ಮರ್ ಆರ್ಕಿಟೆಕ್ಚರ್ ಆಧಾರಿಸಿ ಕೆಲಸ ಮಾಡುತ್ತದೆ. ಟ್ರಾನ್ಸ್ ಪಾರ್ಮರ್ ಇದು ಆಳವಾಗಿ ಕಲಿಯುವ ಮಾದರಿ (ಡೀಪ್ ಲರ್ನಿಂಗ್ ಮಾಡೆಲ್) ಆಗಿದೆ.

ಇದನ್ನು ಸಂಭಾಷಣೆಗೆ ಸೂಕ್ತವಾಗಿರುವಂತೆ ವಿನ್ಯಾಸ ಮಾಡಲಾಗಿದೆ. ಮನುಷ್ಯರನ್ನು ಅನುಕರಿಸಿ ನಮ್ಮಂತೆಯೇ ಪ್ರತಿಕ್ರಿಯೆ ನೀಡುತ್ತದೆ. ಚ್ಯಾಟ್ ಜಿಪಿಟಿ ಕೇವಲ ಬರಹ ರೂಪದಲ್ಲಿ ಮಾತ್ರ ಸಂಭಾಷಣೆ ನಡೆಸಬಲ್ಲುದು.

ಚ್ಯಾಟ್ ಜಿಪಿಟಿಯಂತಹ ಸಾಫ್ಟವೇರ್ ಗೆ ಸೂಪರ್ ಕಂಪ್ಯೂಟರ್ ಅಥವಾ ಅಪರಿಮಿತ ಕಂಪ್ಯೂಟಿಂಗ್ ಶಕ್ತಿ ಬೇಕು. ಇದಕ್ಕೆ ಕ್ಲೌಡ್ ಕಂಪ್ಯೂಟಿಂಗ್ ಬಳಕೆ ಮಾಡಲಾಗುತ್ತಿದೆ.

ಎಲ್ಲಿ ಬಳಕೆ ಆಗುತ್ತದೆ?

ಗ್ರಾಹಕರ ಸೇವೆ, ಚ್ಯಾಟ್ ಬಾಟ್ ಗಳು ಮೊದಲಾದ ಕಡೆ ಇದನ್ನು ಬಳಸಬಹುದು. ಅಷ್ಟೇ ಅಲ್ಲ ತಾಣಗಳಿಗೆ, ಬ್ಲಾಗ್ ಗಳಿಗೆ ಲೇಖನ, ಕವನ ಬರೆಯಲೂ ಸಹ ಇದನ್ನು ಬಳಸಬಹುದು.

ಮೈಕ್ರೋ ಸಾಫ್ಟ್ ಬಿಂಗ್ ಹುಡುಕು ತಾಣ, ಎಡ್ಜ್ ಬ್ರೌಸರ್, ಆಫೀಸ್ ೩೬೫ ಎಲ್ಲ ಕಡೆ ಇದನ್ನು ಬಳಕೆ ಮಾಡಲು ಪ್ಲ್ಯಾನ್ ಮಾಡಿದ್ದು ಈಗಾಗಲೆ ಬಿಂಗ್ ಸರ್ಚ್ ಅಲ್ಲಿ ಈ ಸೌಲಭ್ಯ ಕೆಲವು ಜನರಿಗೆ ಪ್ರಾಯೋಗಿಕವಾಗಿ ಲಭ್ಯವಿದೆ.

ಚ್ಯಾಟ್ ಜಿಪಿಟಿ ಬಿಡುಗಡೆ ಆದ ಎರಡೇ ತಿಂಗಳಲ್ಲಿ ದಾಖಲೆ ಮಟ್ಟದ ಜನಪ್ರಿಯತೆ ಗಳಿಸಿದೆ. ಇದರ ನಿಖರವಾದ ಉತ್ತರ ಜನರಿಗೆ ಅಚ್ಚರಿ ಮೂಡಿಸಿದೆ.

ಚ್ಯಾಟ್ ಜಿಪಿಟಿ ಬಳಸುವದು ಹೇಗೆ?

ಚ್ಯಾಟ್ ಜಿಪಿಟಿ ಬಳಸಲು ಈ ಲಿಂಕ್ ಕ್ಲಿಕ್ ಮಾಡಿ. ಅಲ್ಲಿ ಗೂಗಲ್ ಅಥವಾ ಮೈಕ್ರೋಸಾಫ್ಟ್ ಅಕೌಂಟ್ ಬಳಸಿ ಲಾಗಿನ್ ಮಾಡಿ.

ಸದ್ಯಕ್ಕೆ ಇದು ಉಚಿತ ಇದೆ ಕ್ರಮೇಣ ಈ ತಾಣ ದಲ್ಲಿ ಹಣ ವಿಧಿಸುವ ಸಾಧ್ಯತೆ ಇದೆ. ಆದರೂ ಬಿಂಗ್ ಹಾಗೂ ಎಡ್ಜ್ ಬ್ರೌಸರ್ನಲ್ಲಿ ಉಚಿತ ಸಿಗಬಹುದು.

ಈಗ ನಿಮ್ಮ ಬರಹದ ಅಗತ್ಯ ಇಂಗ್ಲಿಷ್ ಅಲ್ಲಿ ವಿವರವಾಗಿ ಬರೆಯಿರಿ. ಕವನ, ಬ್ಲಾಗ್, ಕಥೆ, ನಿಮ್ಮ ಧಾರಾವಾಹಿ ಗೆ ಸ್ಕ್ರಿಪ್ಟ್, ಸಿನಿಮಾ ಕಥೆ, ಪ್ರಬಂಧ, ನಿಬಂಧ, ಲೇಖನ, ಪುಸ್ತಕ ದ ಚಾಪ್ಟರ್, ಕೋಡಿಂಗ್ ಸಮಸ್ಯೆ ಏನು ಬೇಕಾದರೂ ಕೇಳಿ. ಇದು ಡ್ರಾಫ್ಟ್ ವರ್ಶನ್ ಮಾಡಿ ನೀಡುತ್ತೆ. ಆಮೇಲೆ ಎಡಿಟ್ ಮಾಡಬಹುದು.

ಉದಾಹರಣೆಗೆ ಇಬ್ಬರು ಗೆಳೆಯರು ಕಾಡಲ್ಲಿ ಶಾಲಾ ಟೂರ್ ಗೆ ಹೋದಾಗ ಕಳೆದು ಹೋದ ಹಾಗೂ ಹುಲಿ, ಕರಡಿ, ಹೆಬ್ಬಾವುಗಳಿಂದ ತಪ್ಪಿಸಿಕೊಂಡು ಬಂದ ಕಥೆ ಬರೆಯಲು ಹೇಳಿದೆ. ಚ್ಯಾಟ್ ಜಿಪಿಟಿ ಒಂದು ಉತ್ತಮ ಮಕ್ಕಳ ಕಥೆ ಬರೆದು ನೀಡಿತು.


ನಾನು ಕನ್ನಡದಲ್ಲಿ ಕೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ. ಆದರೆ ಕೆಲವೊಮ್ಮೆ ಇಂಗ್ಲೀಷ್ ಅಲ್ಲಿ ಉತ್ತರ ನೀಡುತ್ತಿತ್ತು. ಬಹುಶಃ ಹೆಚ್ಚು ಕನ್ನಡ ಲೇಖನ, ಪುಸ್ತಕ ಓದಿಸಿದರೆ ಕನ್ನಡ ಕಲಿಯುತ್ತೇನೋ!


ನೀವು ಕೋಡಿಂಗ್ ಬಗ್ಗೆ ಅದರ ಸಮಸ್ಯೆ ಬಗ್ಗೆ ಕೂಡಾ ಪ್ರಶ್ನೆ ಕೇಳಬಹುದು. ಆದರೆ ಯಾವುದೇ ಕಾರಣಕ್ಕೂ ಕಂಪನಿಗಳ ಕೋಡ್ ಅನ್ನು ನೇರವಾಗಿ ಕಾಪಿ ಮಾಡದೇ ಸಮಸ್ಯೆ ಬಗ್ಗೆ ಪ್ರಶ್ನೆ ಹಾಕಬಹುದು.


ಚ್ಯಾಟ್ ಜಿಪಿಟಿ ಮನುಷ್ಯರ ಕೆಲಸ ಕಿತ್ತು ಕೊಳ್ಳುವದೇ?

ಈ ಪ್ರಶ್ನೆಗೆ ಉತ್ತರ ಹೌದು ಹಾಗೂ ಇಲ್ಲ ಎರಡೂ ಹೇಳಬಹುದು.

ಉದಾಹರಣೆಗೆ ಚಾರ್ಟ್ ಜಿಪಿಟಿ ಸಾಮಾನ್ಯ ಪ್ರಬಂಧ, ಬ್ಲಾಗ್ ಲೇಖನ, ಕವಿತೆ, ಮಕ್ಕಳ ಕಥೆ ಹೀಗೆ ಹಲವು ವಿಷಯದ ಬಗ್ಗೆ ಬರೆಯ ಬಲ್ಲುದು. ಕೋಡಿಂಗ್ ಸಮಸ್ಯೆಗೆ ಪರಿಹಾರ ಕೂಡಾ ನೀಡಬಲ್ಲುದು.

ಬಹುಶಃ ಮುಂದೆ ಕಾಲ ಕಳೆದಂತೆ ಇದು ಇನ್ನೂ ಚೆನ್ನಾಗಿ ಕಲಿತು ಉತ್ತಮ ವಾಗಿ ಬರೆದರೂ ಆಶ್ಚರ್ಯ ಇಲ್ಲ. ಇಂತಹ ಟೂಲ್ ಬಳಸಿ ಆರಂಭಿಕ ಕಂಟೆಂಟ್ ಕ್ರಿಯೇಟ್ ಮಾಡಿ ಅದನ್ನು ಇನ್ನೂ ಉತ್ತಮ ಗೊಳಿಸುವವರಿಗೆ ಡಿಮ್ಯಾಂಡ್ ಜಾಸ್ತಿ ಆಗುವ ಸಾಧ್ಯತೆ ಇದೆ. ಕಾಲಕ್ಕೆ ತಕ್ಕಂತೆ ಹೊಸ ಹೊಸ ಟೂಲ್ ಕಲಿತು ಅದನ್ನು ಬಳಸುವದರಲ್ಲಿದೆ ಜಾಣತನ.

ಇಂತಹ ಟೂಲ್ ಬಳಕೆಯಿಂದ ಬೇಗ ಬೇಗ ಕೆಲಸ ಮುಗಿಸಬಹುದು. ಅಂತವರಿಗೆ ಯಾವುದೇ ಟೂಲ್ ಬಳಸದವರಿಗಿಂತ ಬೇಡಿಕೆ ಜಾಸ್ತಿ ಇರುತ್ತದೆ.

ಕಾಲಕ್ಕೆ ತಕ್ಕಂತೆ ನಾವು ಬದಲಾಗದಿದ್ದರೆ ಕಷ್ಟ. ಅಲ್ವಾ?

ಓಪನ್ ಎಐ ಕಂಪನಿ ಯಾರದ್ದು?

ಚ್ಯಾಟ್ ಜಿಪಿಟಿ ನಿರ್ಮಿಸಿದ ಕಂಪನಿ ಹೆಸರು ಓಪನ್ ಎಐ. ಇದು ಈಗ ಮೈಕ್ರೋಸಾಫ್ಟ್ ಹೆಚ್ಚಿನ ಬಂಡವಾಳ ಹೂಡಿದ ಕಂಪೆನಿ ಆಗಿದೆ.
ಓಪನ್ ಎಐ (OpenAI) ಎಂಬುದು ಅಮೇರಿಕದ ಕೃತಕ ಬುದ್ಧಿ ಶಕ್ತಿಯ ಮೇಲೆ ಸಂಶೋಧನೆ ನಡೆಸುವ ಪ್ರಯೋಗ ಶಾಲೆ ಡಿಸೆಂಬರ್ ೧೧ ೨೦೧೫ ರಂದು ಆರಂಭವಾಗಿತ್ತು. 

ಸ್ಯಾಮ್ ಅಲ್ಟಮನ್ ನಿಂದ ಹಿಡಿದು ಟೆಸ್ಲಾ ಕಂಪನಿಯ ಇಲಾನ್ ಮಸ್ಕ್ ವರೆಗೆ ಹಲವಾರು ಜನ ಈ ಕಂಪನಿ ಹುಟ್ಟು ಹಾಕಿದ್ದರು. ಮೊದ ಮೊದಲು ಇದು ಲಾಭದ ಉದ್ದೇಶ ಇಲ್ಲದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೇಲೆ ಸಂಶೋಧನೆ ಮಾಡುವ ಪ್ರಯೋಗ ಶಾಲೆ ಮಾತ್ರ ಆಗಿತ್ತು. ಆದರೆ ಕ್ರಮೇಣ ೨೦೧೯ರಲ್ಲಿ ಇದು ಲಾಭದ ಮಿತಿ ಇರುವ ಕಂಪನಿ ಆಗಿ ಪರಿವರ್ತನೆ ಆಯ್ತು.

೨೦೧೯ ರಲ್ಲಿ ಮೈಕ್ರೋಸಾಫ್ಟ್ ೧ ಬಿಲಿಯನ್ ಡಾಲರ್ ಹಾಗೂ ೨೦೨೩ರ ಜನವರಿಯಲ್ಲಿ ಸುಮಾರು ೧೦ ಬಿಲಿಯನ್ ಡಾಲರ್ ಈ ಕಂಪನಿಯಲ್ಲಿ ಮುಂದಿನ ಹಲವು ವರ್ಷ ಬಂಡವಾಳ ಹೂಡಿಕೆ ನೀಡುವ ಒಪ್ಪಂದ ಮಾಡಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಓಪನ್ ಏಐ ನ ತಂತ್ರಜ್ಞಾನ ಪಡೆದು ತನ್ನ ಪ್ರಾಡಕ್ಟ್ ಗಳಲ್ಲಿ ಬಳಸಲಿದೆ.

ಓಪನ್ ಏಐ ಕೇವಲ ಚ್ಯಾಟ್ ಜಿಪಿಟಿ ಮಾತ್ರ ಅಲ್ಲ ಡಾಲ್-ಇ ಎಂಬ ಚಿತ್ರ ಬರೆಯುವ, ಕೋಡೆಕ್ಸ್ ಎಂಬ ಕೋಡ್ ಜನರೇಟರ್ ಕೂಡಾ ನಿರ್ಮಿಸಿದೆ.

ಡಾಲ್-ಇ - ಡಿಜಿಟಲ್ ಚಿತ್ರ ರಚನಾ ಟೂಲ್

ಈ ತಾಣಕ್ಕೆ ಭೇಟಿ ಕೊಟ್ಟು ನಿಮ್ಮ ಮನಸೋ ಇಚ್ಚೆ ಚಿತ್ರ ಬಿಡಿಸಲು ಆಂಗ್ಲ ಭಾಷೆಯಲ್ಲಿ ಕೇಳಿದರೆ ಚಿತ್ರ ಬಿಡಿಸಿ ನಿಮ್ಮ ಮುಂದಿಡುವದು.
ಡಾಲ್-ಇ ಬಳಸಿ ಒಂದೆರಡು ಚಿತ್ರ ರಚಿಸಿ ನಿಮ್ಮ ಮುಂದೆ ಇಟ್ಟಿದ್ದೇನೆ. ಇನ್ನೂ ಪರ್ಫೆಕ್ಟ್ ಅಲ್ಲ. ಆದರೆ ಇಷ್ಟು ಚಿತ್ರ ಈಗ ಬಿಡಿಸುತ್ತಿದೆ ಎನ್ನುವದಾದರೆ ಇನ್ನು ಹತ್ತು ವರ್ಷಗಳಲ್ಲಿ ಹೇಗೆ ಯಂತ್ರಗಳು ಚಿತ್ರ ಬಿಡಿಸಬಹುದು ಊಹಿಸಲು ಸಾಧ್ಯವಿಲ್ಲ.
ನೀವು ಕ್ಯಾನ್ವಾಸ್, ಆಯಿಲ್, ಕ್ರೇಯಾನ್ಸ್, ಡಿಜಿಟಲ್ ಹೀಗೆ ವಿಭಿನ್ನ ಮಾದರಿಯಲ್ಲಿ ಚಿತ್ರ ಬಿಡಿಸಲು ಕೇಳಬಹುದು ಹಾಗೆಯೆ ಚಿತ್ರ ರಚನೆ ಆಗುತ್ತದೆ.

ಉದಾಹರಣೆಗೆ ನಾನು ಆನೆ ಮತ್ತು ಜಿರಾಫೆ ಸ್ನೇಹಿತರು ಎಂಬ ಕ್ಯಾನ್ವಾಸ್ ಪೇಂಟಿಂಗ್ ಬರೆಯಲು ಕೇಳಿದಾಗ ನಾಲ್ಕು ವಿವಿಧ ರೀತಿಯ ಚಿತ್ರಗಳನ್ನು ಬಿಡಿಸಿ ಕೊಟ್ಟಿತು.


ಹುಲಿಯ ಮೇಲೆ ಕುಳಿತ ಕೈಯಲ್ಲಿ ಸ್ಮಾರ್ಟ್ ಫೋನ್ ಹಿಡಿದ ಕೆಂಪು ಟೋಪಿ ಧರಿಸಿರುವ ಕೋತಿ ಎಂಬ ಕ್ಯಾನ್ವಾಸ್ ಪೇಂಟಿಂಗ್ ಸಿಕ್ಕಿದ್ದು ಹೀಗೆ. ಕೊನೆ ಎರಡು ಚಿತ್ರಗಳ ಗಮನಿಸಿ ಹುಲಿಗೆ ಟೋಪಿ ಹಾಕಿ ಸ್ಮಾರ್ಟ್ ಫೋನ್ ಕೈಯಲ್ಲಿದೆ. ಕಾಲ ಕಳೆದಂತೆ ಈ ತರಹದ ಸಮಸ್ಯೆ ಕಡಿಮೆಯಾಗುತ್ತದೆ. ಇದಕ್ಕೆ ತರಬೇತಿ ಇನ್ನೂ ಆಗಬೇಕು.

ಕೊನೆ ಮಾತು

ಒಟ್ಟಿನಲ್ಲಿ ಚ್ಯಾಟ್ ಜಿಪಿಟಿ ಮನುಷ್ಯರಂತೇ ಪ್ರಶ್ನೆಗಳಿಗೆ ಉತ್ತರ ಕೊಡುವ ಓಪನ್ ಏಐ ನಿರ್ಮಿತ ಕೃತಕ ಬುದ್ಧಿ ಶಕ್ತಿ ಹೊಂದಿರುವ ಟೂಲ್ ಆಗಿದೆ. ಇಂಟರ್ನೆಟ್ ಅಲ್ಲಿರುವ ಭಾರಿ ಪ್ರಮಾಣದ ಮಾಹಿತಿ ಬಳಸಿ ಶಿಕ್ಷಣ ಪಡೆದ ಚ್ಯಾಟ್ ಜಿಪಿಟಿ ವಿವಿಧ ರಂಗಗಳ ಪ್ರಶ್ನೆಗೆ ಉತ್ತರ ನೀಡಬಲ್ಲುದು, ಲೇಖನ ಬರೆಯಬಲ್ಲುದು.

ಇದನ್ನು ಗ್ರಾಹಕರ ಸೇವೆಗೆ, ಚ್ಯಾಟ್ ಬಾಟ್ ಅಪ್ಲಿಕೇಶನ್ ಗೆ ಬಳಸಬಹುದಾಗಿದೆ. ಮೈಕ್ರೋ ಸಾಫ್ಟ್ ತನ್ನ ಬಿಂಗ್ ಹುಡುಕು ತಾಣಕ್ಕೆ ಇದನ್ನು ಬಳಸಿ ಸೇವೆ ನೀಡಲು ಆರಂಭಿಸಿದೆ.

ನಾವು ಕೃತಕ ಬುದ್ದಿ ಶಕ್ತಿ ತಂತ್ರಜ್ಞಾನ ಬಳಸುವ ರೀತಿಯಲ್ಲಿ ಕ್ರಾಂತಿಗೆ ಇದು ನಾಂದಿ ಹಾಡಿದೆ ಎಂದರೆ ತಪ್ಪಲ್ಲ.

ಗೂಗಲ್ ಕೂಡಾ ಬ್ರಾಡ್ ಎಐ ಮೂಲಕ ತನ್ನ ಹುಡುಕು ತಾಣದಲ್ಲಿ ಕೃತಕ ಬುದ್ದಿ ಶಕ್ತಿ ಬಳಸುವ ಬಗ್ಗೆ ಘೋಷಣೆ ಮಾಡಿದೆ. 

ಭವಿಷ್ಯದಲ್ಲಿ ನಾವು ಅಂತರ್ಜಾಲದಲ್ಲಿ ಮಾಹಿತಿ ಹುಡುಕುವ, ಲೇಖನ ಬರೆಯುವ ವಿಧಾನದಲ್ಲಿ ಕೃತಕ ಬುದ್ದಿ ಶಕ್ತಿ ಕೂಡಾ ಬಳಕೆ ಜಾಸ್ತಿ ಆದರೆ ಅಚ್ಚರಿ ಏನಲ್ಲ.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ ಏನು? ತಿಳಿಸಿ.

Advertisement

blogger
© ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ, ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ವಿಸ್ಮಯನಗರಿ.ಕಾಂ